ಇಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ “ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವು” ಗೋಷ್ಠಿಯಲ್ಲಿ ಸಿ ಟಿ ರವಿ ಪ್ರಬಂಧ ಮಂಡನೆ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಇಂದು (ಶನಿವಾರ) ಬೆಳಿಗ್ಗೆ 11 ಗಂಟೆಗೆ ಪ್ರಧಾನ ವೇದಿಕೆಯಲ್ಲಿ ನಡೆಯಲಿರುವ ʼಸಾಹಿತ್ಯದಲ್ಲಿ ರಾಜಕೀಯ; ರಾಜಕೀಯದಲ್ಲಿ ಸಾಹಿತ್ಯʼ ಗೋಷ್ಠಿಯಲ್ಲಿ ಬಿಜೆಪಿ ಮುಖಂಡ, ಎಂ ಎಲ್ ಸಿ ಸಿ ಟಿ ರವಿ ಪಾಲ್ಗೊಳ್ಳಬಾರದು ಎಂದು ಪ್ರಗತಿಪರರು, ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ʼಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವುʼ ವಿಷಯದ ಬಗ್ಗೆ ಸಿ ಟಿ ರವಿ ಪ್ರಬಂಧ ಮಂಡಿಸಲಿದ್ದಾರೆ. ಕಾನೂನು ಸಚಿವ ಎಚ್ ಕೆ ಪಾಟೀಲ್ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ ಎಲ್ ಶಂಕರ್ ಆಶಯ ಭಾಷಣ ಮಾಡಲಿದ್ದಾರೆ.
ಸಿ ಟಿ ರವಿ ಅವರು ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಬಾರದು. ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ, ಅಂಥವರು ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದು ಮಂಡ್ಯ ಜನತೆಗೂ ಅವಮಾನ ಎಂದು ಹಲವರು ಈ ದಿನ ಡಾಟ್ ಕಾಮ್ ಜೊತೆಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ದಿನದೊಂದಿಗೆ ಮಾತನಾಡಿದ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, “ಸಂವಿಧಾನ ವಿರೋಧಿ ಹೇಳಿಕೆಯನ್ನು ಸಮರ್ಥಿಸಿಕೊಂಡು ಅದನ್ನು ವಿರೋಧಿಸಿದ ಮಹಿಳೆಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಸಿ ಟಿ ರವಿ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥಿಯಾಗಿ ಭಾಷಣ ಮಾಡುವುದನ್ನು ಕೇಳಿಸಿಕೊಳ್ಳಲು ಮಂಡ್ಯದ ಜನ ಕಾದು ಕೂತಿಲ್ಲ. ಮಂಡ್ಯ ಹಲವು ದಾರ್ಶನಿಕರು ಮಹನೀಯರನ್ನು ಕಂಡ ಜಿಲ್ಲೆ. ಕುವೆಂಪು ಅವರ ವೈಚಾರಿಕತೆ, ಸಾಮರಸ್ಯವನ್ನು ಮೈಗೂಡಿಸಿಕೊಂಡು ಸಮಸಮಾಜವನ್ನು ಕಟ್ಟಬೇಕೆಂಬ ಕನಸು ಹೊತ್ತು ಪ್ರೀತಿ ಮಾನವತೆಗಳನ್ನು ಹಂಚುತ್ತಾ ಹೆಸರಾಗಿರುವ ಜಿಲ್ಲೆ. ಅಂಬೇಡ್ಕರ್ ಎಂದರೆ ಈ ನೆಲದ ಉಸಿರು, ಅಸ್ತಿತ್ವ ಎಂದು ಧ್ವನಿ ಎತ್ತರಿಸುವ ಜಿಲ್ಲೆ. ಇಂತಹ ಜಾಗಕ್ಕೆ ಕೋಮುಕ್ರಿಮಿ, ಸಂವಿಧಾನ ವಿರೋಧಿ, ಅದರಲ್ಲೂ ಮಹಿಳಾ ವಿರೋಧಿ ಮಾತುಗಳನ್ನಾಡುತ್ತಿರುವ ರವಿಗೆ ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಬರಲು ಅವಕಾಶ ಕೊಡುವುದಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಡ್ಯದ ಸಂವಿಧಾನ ಪರ ಮತ್ತು ಮಹಿಳಾ ಪರ ಮನಸ್ಸುಗಳು ಅವಕಾಶ ಕೊಡುವುದಿಲ್ಲ” ಎಂದು ಅವರು ಎಚ್ಚರಿಸಿದರು.

ಜಾಗೃತ ಕರ್ನಾಟಕದ ಸುಬ್ರಹ್ಮಣ್ಯ ಮಾತನಾಡಿ, “ಮಂಡ್ಯ ಸಕ್ಕರೆ ನಾಡು, ಸದಾ ಸರ್ವರಿಗೂ ಒಳಿತನ್ನೇ ಬಯಸುವ ರೈತಾಪಿ ವರ್ಗಗಳಿರುವ ನೆಲ. ಇಲ್ಲಿ ದ್ವೇಷ ಹಂಚುವ, ಮಹಿಳೆಯರನ್ನು ಅವಮಾನಿಸುವ, ಅವರ ಘನತೆಗೆ ಧಕ್ಕೆ ತರುವ ಯಾರನ್ನೂ ನಾವು ಸಹಿಸುವುದಿಲ್ಲ. ಸಿ ಟಿ ರವಿ ತರಹದ ಮನಸ್ಥಿತಿಯ ಜನರು ಸಾಹಿತ್ಯ ವೇದಿಕೆ ಹತ್ತುವುದು ಈ ನೆಲದ ಹೆಣ್ಣುಮಕ್ಕಳಿಗೆ ಮಾಡುವ ಅವಮಾನ. ಸಿ ಟಿ ರವಿ ತಾವಾಗಿಯೇ ಮಂಡ್ಯಕ್ಕೆ ಬಾರದಿರುವ ನಿರ್ಧಾರ ಕೈಗೊಳ್ಳುವುದು ಉತ್ತಮ” ಎಂದು ತಿಳಿಸಿದರು.
“ಸಿ ಟಿ ರವಿ ಯಾವುದೇ ಕಾರಣಕ್ಕೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡಕೂಡದು. ಸಮ್ಮೇಳನದಲ್ಲೇ ಸಾವಿರಾರು ಜನ ಆತನ ವಿರುದ್ದ ಮುಖ್ಯವೇದಿಕೆಯಲ್ಲೇ ಧರಣಿ ಮಾಡುತ್ತೇವೆ. ಯಾವುದೇ ಮುಲಾಜಿಲ್ಲದೇ ಈ ಕೂಡಲೇ ಇಂತಹ ಕ್ಷುದ್ರವ್ಯಕ್ತಿಗಳನ್ನು ಸಮ್ಮೇಳನದಿಂದ ಹೊರಕ್ಕೆ ಹಾಕಬೇಕು” ಎಂದು ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಿ ಟಿ ರವಿಯಂಥವರಿಗೆ ಮಹಿಳೆಯರನ್ನು ಅಪಮಾನಿಸೋದು ಮನುವಾದಿ ವ್ಯಸನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗುರುವಾರ ಸುವರ್ಣ ಸೌಧದ ವಿಧಾನ ಪರಿಷತ್ತಿನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ದೂರು ನೀಡಿದ್ದರು. ಹಿರೇಬಾಗೇವಾಡಿ ಪೊಲೀಸರು ಸುವರ್ಣಸೌಧದ ಆವರಣದಿಂದಲೇ ಬಂಧಿಸಿ ಕರೆದೊಯ್ದಿದ್ದರು. ಶುಕ್ರವಾರ ಸಂಜೆ ಜನಪ್ರತಿನಿಧಿಗಳ ನ್ಯಾಯಾಲಯವು ಬಿಡುಗಡೆಗೆ ಆದೇಶ ನೀಡಿತ್ತು.
ಸಿ ಟಿ ರವಿ ಗೋಷ್ಠಿಯಲ್ಲಿ ಭಾಗವಹಿಸುವ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಬಗ್ಗೆ ಈ ದಿನ ಡಾಟ್ ಕಾಮ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರಿಂದ ಮಾಹಿತಿ ಪಡೆಯುವ ಪ್ರಯತ್ನ ಮಾಡಿದರೂ, ಅವರು ಕರೆ ಸ್ವೀಕರಿಸಿಲ್ಲ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
Excellent write up Ma’am. The so called political representatives of our society , behavious like a uncivilized he should not be seen anywhere on a platform where Dr Babasaheb Ambedkar’s invaluable contribution is worshipped. The male domination, gender inequality and public insultation has to be strongly condemned.
Regards