ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಮಂತ್ರಿಗಿರಿ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ ದಾವಣಗೆರೆ ಜಿಲ್ಲಾ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿಯ(ಪ್ರೊ.ಕೃಷ್ಣಪ್ಪ) ಮುಖಂಡರು, ಕಾರ್ಯಕರ್ತರು ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ದಸಂಸ ಮುಖಂಡ ಮಂಜುನಾಥ ಕುಂದುವಾಡ ಮಾತನಾಡಿ, “ಸಂಸತ್ ಅಧಿವೇಶನದಲ್ಲಿ ಗೃಹ ಮಂತ್ರಿ ಅಮಿತ್ ಶಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು, ಅಂಬೇಡ್ಕರ್ ಸ್ಮರಿಸುವ ಬದಲು ದೇವರನ್ನು ಸ್ಮರಿಸಿದ್ದರೆ ಏಳು ಜನ್ಮದಲ್ಲೂ ಸ್ವರ್ಗವನ್ನು ಕಾಣಬಹುದು” ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಮಿತ್ ಶಾ ಅವರು ನಾಲಿಗೆ ಮೇಲೆ ಹಿಡಿತವಿಲ್ಲದೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಗೌರವಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಅಮಿತ್ ಶಾ ಮುಖಾಂತರ ಸಂಘ ಪರಿವಾರದ ಮುಖವಾಡ ಕಳಚಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಂಬೇಡ್ಕರ್ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಅಮಿತ್ ಶಾ ದೇಶದ ಶೋಷಿತ ಸಮುದಾಯಗಳಿಗೆ ಮತ್ತು ಸಂವಿಧಾನ ಶಿಲ್ಲಿಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಅಂಬೇಡ್ಕರ್ ಇಡೀ ಶೋಷಿತ ಸಮುದಾಯದ ಸ್ವಾಭಿಮಾನದ ಸಂಕೇತ. ದೇಶದ ಕಟ್ಟಕಡೆಯ ಜನತೆ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದಂತಹ ಮಾನವತಾವಾದಿ. ಸಾವಿರಾರು ವರ್ಷಗಳಿಂದ ದಮನಕ್ಕೆ ಒಳಗಾಗಿರುವ ಜನರನ್ನು ಕಾಪಾಡಲು ಯಾವುದೇ ದೇವರು ಬರಲಿಲ್ಲ. ಬದಲಿಗೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜಾರಿಯಾಯಿತು” ಎಂದರು.
ಕರ್ನಾಟಕ ಜನಶಕ್ತಿಯ ಜಿಲ್ಲಾ ಮುಖಂಡ ಸತೀಶ್ ಮಾತನಾಡಿ, “ಶೋಷಿತ ಸಮುದಾಯಗಳ ವಿಮೋಚನೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು ಸಂವಿಧಾನದ ಮೂಲಕ ಎಲ್ಲ ವರ್ಗದ ಜನರ ಪ್ರಗತಿಗೆ ಸ್ವಾಭಿಮಾನ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಬೆಳೆಸುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು. ಅಮಿತ್ ಶಾ ಅವರ ಹೇಳಿಕೆ ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕೂಡಲೇ ಅಮಿತ್ ಶಾ ಅವರನ್ನು ಕೇಂದ್ರ ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು. ಇದು ಸಂಘಪರಿವಾರ 100ನೇ ವರ್ಷಾಚರಣೆ ಆಚರಿಸುವ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಂದ ಬಂದ ಸಂಘಪರಿವಾರದ ಮಾತಾಗಿದೆ. ಸಂವಿಧಾನ ಇದ್ದಿದ್ದರಿಂದಲೇ ಅಮಿತ್ ಶಾ ಸಂಸದ, ಮಂತ್ರಿಯಾಗಿರುವುದು. ಇದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ. ಹಾಗಾಗಿ ಅಮಿತ್ ಶಾ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇಡೀ ಶೋಷಿತ ಸಮುದಾಯ ಒಟ್ಟುಗೂಡಿ ಮನುವಾದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಕಾಲ ದೂರವಿಲ್ಲ”ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಹರಿಹರ ತಾಲೂಕು ಸಂಚಾಲಕ ಮಹಾಂತೇಶ ಮಾತನಾಡಿ, “ದೇಶದ ಗೃಹ ಮಂತ್ರಿಯಾಗಿ ನೀವು ಜವಾಬ್ದಾರಿಯುತ ಹೇಳಿಕೆ ನೀಡಬೇಕು. ಈ ಹೇಳಿಕೆಯಿಂದ ಇಡೀ ಒಂದು ಸಮುದಾಯದ ವಿರುದ್ಧ ಮಾತನಾಡಿದಂತಾಗಿದೆ. ನೀವೂ ಕೂಡ ಮೋದಿ ಅನ್ನುತ್ತೀರಿ. ಅವರಿಂದ ಏನು ಸಿಕ್ಕಿದೆ. ಈ ದೇಶದ ಯುವಕರಿಗೆ ಪಕೋಡ ಮಾರಿ ಎನ್ನುತ್ತೀರಿ. ನಿರುದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿ. ಅದರ ಬದಲು ಅಂಬೇಡ್ಕರ್ ಅವರನ್ನು ನಿಂದನೆ ಮಾಡಿದ್ದೀರಿ. ಮೋದಿಯವರಿಗೆ ಸಂವಿಧಾನದ ಮೇಲೆ ಗೌರವ ಇದ್ದರೆ ಅಮಿತ್ ಶಾ ರಾಜೀನಾಮೆ ಪಡೆಯಿರಿ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಮಿತ್ ಶಾ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ವಿಜಯಲಕ್ಷ್ಮಿ, ಬುಳ್ಸಾಗರ ಸಿದ್ಧರಾಮಣ್ಣ, ಹನುಮಂತಪ್ಪ, ಮಹಾಂತೇಶ್, ಚಿತ್ರಲಿಂಗಪ್ಪ, ತುರ್ಚಘಟ್ಟ ನಾಗರಾಜ್, ತುರ್ಚಘಟ್ಟ ಖಾಲಿದ್ ಅಲಿ, ಮಹಾಂತೇಶ್ ಹಾಲವರ್ತಿ, ಹಾಲೇಶ್ ಕುಂದುವಾಡ, ತ್ಯಾಗರಾಜ್ ಹುಚ್ಚವ್ವನಹಳ್ಳಿ, ಜೀವನ್ ಆಣಬೇರು, ಹನುಮಂತ ಕಡ್ಲೆಬಾಳು, ನಾಗರಾಜ್ ಆನೆಕೊಂಡ, ಮಂಜು ಮಾಗಾನಳ್ಳಿ, ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಪವಿತ್ರ, ಸತೀಶ್, ಹನುಮಂತಪ್ಪ, ಸುರೇಶ್ ಸಿಡ್ಲಪ್ಪ ಸೇರಿದಂತೆ ಸಂಘಟನೆಗಳ ಕಾರ್ಯಕರ್ತರು ಇದ್ದರು.