ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ದಸ್ತಗಿರಿ ಅಲಿ ಎಂಬುವರು ಶನಿವಾರ ₹2 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ದಾಳಿ ವೇಳೆ ದಸ್ತಗಿರಿ ಅಲಿ ಲಂಚ ಪಡೆದ ಹಣ ನುಂಗಿದ್ದರಿಂದ ಅಧಿಕಾರಿಗಳು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
ಸಹಕಾರ ಸಂಘ ನೋಂದಣಿಗೆ ಪ್ರಮಾಣ ಪತ್ರ ನೀಡಲು ಭೀಮನಗೌಡ ಎಂಬುವವರು ಅರ್ಜಿ ಸಲ್ಲಿಸಿದ್ದು, ₹2 ಸಾವಿರ ಲಂಚ ನೀಡುವಂತೆ ದಸ್ತಗಿರ್ ಅಲಿ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಅರ್ಜಿದಾರ ಭೀಮನಗೌಡ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಹಕಾರಿ ಇಲಾಖೆ ಕಚೇರಿಯಲ್ಲಿಯೇ ಲೋಕಾಯುಕ್ತ ಪೊಲೀಸರು ದಸ್ತಗಿರಿ ಅಲಿ ಮೇಲೆ ದಾಳಿ ನಡೆಸಿದರು.
ಲೋಕಾಯುಕ್ತ ದಾಳಿಯಿಂದ ಬೆದರಿದ ದಸ್ತಗಿರಿ ಅಲಿ ₹500 ನಾಲ್ಕು ನೋಟುಗಳನ್ನು ನುಂಗಿ ಸಾಕ್ಷಿ ನಾಶಪಡಿಸಲು ಯತ್ನಿಸಿದರು. ಆದರೆ ನುಂಗಿದ್ದ ನೋಟುಗಳು ಗಂಟಲಲ್ಲಿ ಸಿಲುಕಿಕೊಂಡಿತು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ನೀರು ಕುಡಿಸಿ ವಾಂತಿ ಮಾಡಿಸಿ, ಗಂಟಲಲ್ಲಿ ಕೈಹಾಕಿ ಹಣ ಹೊರಗೆ ತೆಗೆದಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಾಳೆ ಲೋಕಾರ್ಪಣೆ
ರಾಯಚೂರು ಲೋಕಾಯುಕ್ತ ಎಸ್ಪಿ ಶಶಿಧರ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಪಿಎಸ್‌ಐ ನಾಗರತ್ನ, ಸುನೀಲ್ ಮೇಗಿಲಮನಿ ನೇತೃತ್ವದಲ್ಲಿ ದಾಳಿ ನಡೆದಿದೆ.