ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಆರಂಭಗೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಇಂದು(ಡಿ.22) ಸಮಾರೋಪಗೊಂಡಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜನಸಾಗರವೇ ಹರಿದು ಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಅತಿಥಿಗಳು, ಸಾವಿರಾರು ಕನ್ನಡಾಭಿಮಾನಿಗಳು ಬಂದಿದ್ದರು. ಇದು ನಮ್ಮ ಕನ್ನಡ ನಾಡು, ನುಡಿಯ ಬಗ್ಗೆ ಜನರಿಗಿರುವ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಪುಸ್ತಕ ಪ್ರದರ್ಶನ, ವಾಣಿಜ್ಯ ಮಳಿಗೆಗಳು ಜನರಿಂದ ತುಂಬಿ ತುಳುಕಿತ್ತು. ಊಟೋಪಚಾರವೂ ನಿರಂತರವಾಗಿ ನಡೆಯುತ್ತಿತ್ತು. ಇದಕ್ಕಾಗಿ ಸುಮಾರು 1000 ಸಾವಿರದಷ್ಟು ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜೊತೆಗೆ, ಮಂಡ್ಯದ ಬಾಡೂಟವನ್ನು ಸಾಹಿತ್ಯ ಸಮ್ಮೇಳನದಲ್ಲಿ ನೀಡದಿದ್ದಕ್ಕೆ ಪ್ರತಿರೋಧವಾಗಿ ಜನಪರ ಸಂಘಟನೆಗಳ ಮುಖಂಡರು, ಚಿಕನ್ ಸಾರು, ಮೊಟ್ಟೆ, ರಾಗಿ ಮುದ್ದೆ ಇರುವ ಬಾಡೂಟವನ್ನು ಕೂಡ ಹಂಚುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದರು. ಹೋರಾಟಕ್ಕೆ ಕೊನೆಗೂ ಮಣಿದ ಕಸಾಪ, ಸಮಾರೋಪ ಸಮಾರಂಭದ ಬಳಿಕ ಹಂಚಿದ ರಾತ್ರಿಯ ಊಟದೊಂದಿಗೆ ಸಾರ್ವಜನಿಕರಿಗೆ ಮೊಟ್ಟೆ ವಿತರಣೆ ಮಾಡಿತು.

ಪ್ರತಿದಿನ ಸಂಜೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಂಡ್ಯ ಮಾತ್ರವಲ್ಲದೇ ಸುತ್ತಮುತ್ತಲಿನ ಜನರೆಲ್ಲರೂ ಪ್ರವಾಹದಂತೆ ಹರಿದುಬಂದಿದ್ದರು. ಬೀದಿ ವ್ಯಾಪಾರ, ತಿಂಡಿ-ತಿನಿಸು, ಜ್ಯೂಸ್ ಅಂಗಡಿಗಳು ಸಮ್ಮೇಳನದ ಮುಖ್ಯದ್ವಾರದಿಂದಲೇ ಬಂದವರನ್ನು ಸ್ವಾಗತಿಸುತ್ತಿತ್ತು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೂರು ವೇದಿಕೆಗಳ ಹೊರಭಾಗದ ವಿಶಾಲ ಅಂಗಣದಲ್ಲಿ ವಿವಿಧ ವಸ್ತುಗಳನ್ನು ಮಾರುವವರು ಮತ್ತು ಮಳಿಗೆಗಳಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಿರುವವರ ದಂಡೇ ನೆರೆದಿತ್ತು.
ವೇದಿಕೆಯ ಹಿಂಭಾಗದಲ್ಲಿ ಮಾಡಲಾಗಿದ್ದ ‘ಮಾಧ್ಯಮ ಕೇಂದ್ರ’ದಲ್ಲಿ ಪತ್ರಿಕೆ, ವಿದ್ಯುನ್ಮಾನ, ಡಿಜಿಟಲ್ ಮೀಡಿಯಾ, ಫೋಟೋಗ್ರಾಫರ್ಸ್ ಸೇರಿದಂತೆ ಎಲ್ಲ ಪತ್ರಕರ್ತರು ತಮ್ಮ ತಮ್ಮ ಕೆಲಸಗಳಲ್ಲಿ ‘ಬ್ಯುಝಿ’ಯಾಗಿದ್ದರು.

ಈ ಸಮ್ಮೇಳನದ ಸರ್ವಾಧ್ಯಕ್ಷ್ಯತೆಯನ್ನು ಹಿರಿಯ ಸಾಹಿತಿ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ(ಗೊರುಚ) ವಹಿಸಿದ್ದರು. ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಗಣಿ ನಾಡು ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸಮಾರೋಪ ಸಮಾರಂಭದಲ್ಲಿ ಘೋಷಿಸಿದರು.
ಪುಸ್ತಕ ಮಳಿಗೆಗಳ ಪೈಕಿ ಈ ದಿನ ಡಾಟ್ ಕಾಮ್ ಕೂಡ ಬ್ಲಾಕ್ ‘ಸಿ’ಯಲ್ಲಿನ ಮಳಿಗೆಯ 166ನೇ ಸ್ಟಾಲ್‌ನಲ್ಲಿ ತನ್ನ ಸ್ಟಾಲ್ ತೆರೆದು, ಹೊಸ ಓದುಗರಿಗೆ ನಮ್ಮ ಸಂಸ್ಥೆಯನ್ನು ಪರಿಚಯಿಸಿತ್ತು.
ಈ ಮೂರು ದಿನಗಳ ಎಲ್ಲ ಫೋಟೋಗಳ ಸಂಗ್ರಹ ಈ ಆಲ್ಬಮ್‌ನಲ್ಲಿದೆ. ಬಲಬದಿಯಲ್ಲಿನ ಬಾಣದ ಗುರುತನ್ನು ಕ್ಲಿಕ್ ಮಾಡಿ, ಎಲ್ಲ ಫೋಟೋಗಳನ್ನು ವೀಕ್ಷಿಸಬಹುದು.
(ಫೋಟೋ ಕೃಪೆ: ಕಸಾಪ, ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರ ಹಾಗೂ ಮಾಧ್ಯಮ ಸಮಿತಿ , ಕೆಲವು ಫೇಸ್‌ಬುಕ್ ಸ್ನೇಹಿತರು, ಬಾಡೂಟ ಬಳಗ, ಜಾಗೃತ ಕರ್ನಾಟಕ & ಈ ದಿನ ಡಾಟ್ ಕಾಮ್ ಬಳಗ)























































































































ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
jayakumarcsj@gmail.com