ಬಸವಾದಿ ಶರಣರ ವಚನಗಳಲ್ಲಿ ಕಾನೂನಿನ ಅಂಶ, ಸಂವಿಧಾನದ ಆಶಯಗಳು ಅಡಗಿವೆ ಎಂದು ಕರ್ನಾಟಕ ಲೋಕಾಯುಕ್ತ ಇಲಾಖೆಯ ಉಪಲೋಕಾಯುಕ್ತ ಎನ್.ಕೆ.ಫಣೀಂದ್ರ ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 135ನೆಯ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಬಸವಣ್ಣನವರ ಒಂದೊಂದು ವಚನಗಳಲ್ಲಿ ಬದುಕಿನ ಮೌಲ್ಯಗಳು ಅಡಗಿವೆ. ಮನುಷ್ಯನಲ್ಲಿನ ಕೌರ್ಯ ಗುಣಗಳನ್ನು ಹೋಗಲಾಡಿಸುವ ಸಾಮರ್ಥ್ಯ ವಚನಗಳಲ್ಲಿವೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆʼ ಎಂದರು.
ʼಬಸವಣ್ಣನವರು ಅಂದಿನ ಕಾಲದಲ್ಲೇ ಸಮಾನತೆಗಾಗಿ ಹೋರಾಟ ನಡೆಸಿದರು. ಅಂತರ್ಜಾತಿ ವಿವಾಹ ಮಾಡಿಸಿ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಮಾನವ ಜಾತಿ ಒಂದೇ ಎನ್ನುವುದನ್ನು ಸಾರಿದರು. ಸ್ತ್ರೀಯರಿಗೆ ಸ್ವಾತಂತ್ರ ಕಲ್ಪಿಸಿ ಸರ್ವರೂ ಸಮಾನರೆಂದು ತಿಳಿಹೇಳುವ ಪ್ರಯತ್ನಿಸಿದರು. ಅದನ್ನೇ ರಾಷ್ಟ್ರಕವಿ ಕುವೆಂಪು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂದಿದ್ದರು. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಮನುಷ್ಯನಲ್ಲಿ ಸ್ವಾರ್ಥ ಭಾವನೆ ಬೆಳೆಯುತ್ತಿದೆ. ಒಬ್ಬರು ಮೇಲೆ ಬರಲು ಮತ್ತೊಬ್ಬರನ್ನು ತುಳಿಯುವ ಸಂಸ್ಕೃತಿ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆʼ ಎಂದು ಕಳವಳ ವ್ಯಕ್ತಪಡಿಸಿದರು.

ʼಪ್ರತಿಯೊಬ್ಬರು ಬಸವಣ್ಣವರ ವಚನಗಳು ಅನುಸರಿಸಿದರೇ ಎಲ್ಲರ ಬೆಳವಣಿಗೆ ಆಗುತ್ತದೆ. ಭ್ರಷ್ಟಾಚಾರ ನಿಯಂತ್ರಣ ಬರಲು ಸಾಧ್ಯವಾಗುತ್ತದೆ. ಜೀವನದಲ್ಲಿ ನಡೆ ನುಡಿ ಒಂದಾದರೇ ಬದುಕು ಉಜ್ವಲ ಆಗುತ್ತದೆ. ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಬದುಕಿನುದ್ದಕ್ಕೂ ಬಸವತತ್ವ ಮೈಗೂಡಿಸಿಕೊಂಡು ನಡೆ-ನುಡಿ ಒಂದಾಗಿಸಿಕೊಂಡಿದ್ದರು. ಹಾಗಾಗಿ ಅವರ ಮಹಾತ್ಮರ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ವಿಚಾರ ಧಾರೆಗಳನ್ನು ಯುವಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಹಿರೇಮಠದಿಂದ ಜಯಂತ್ಯುತ್ಸವ ಆಚರಿಸುತ್ತಿರುವುದು ಸಂತಸ ಸಂಗತಿ. ಡಾ.ಬಸವಲಿಂಗ ಪಟ್ಟದ್ದೇವರು ಕೂಡ ಧಾರ್ಮಿಕ, ಶೈಕ್ಷಣಿಕ ಕಾರ್ಯಗಳ ಜತೆಗೆ ಅನಾಥ ಮಕ್ಕಳ ಪಾಲನೆ ಪೋಷಣೆ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಮಾದರಿ ಎನಸಿದೆʼ ಎಂದು ತಿಳಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಜ್ಞಾನದ ಖಣಿ ಆಗಿದ್ದರು. ಅವರು ಅಂದಿನ ದಿನಗಳಲ್ಲಿ ಪ್ರಾರಂಭಿಸಿದ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದಲ್ಲಿ ಹಿರಿಯ ಸಾಹಿತಿ ದಿವಂಗತ ಶಾಂತರಸ ಸೇರಿದಂತೆ ಅನೇಕರು ಓದಿರುವುದು ಹೆಮ್ಮೆಯಿದೆ. ಅವರು ಕಾಲಿಟ್ಟ ಕಡೆಗಳಲ್ಲಿ ಪವಾಡ ನಡೆದಿವೆ. ನೂತನ ಅನುಭವ ಮಂಟಪ ನಿರ್ಮಾಣ ಮಾಡಿದ ಪೂಜ್ಯರು ಬಸವತತ್ವ- ಕನ್ನಡಕ್ಕಾಗಿ ತಮ್ಮ ಬದುಕು ಮುಡಿಪಾಗಿಟ್ಟಿದ್ದರುʼ ಎಂದು ತಿಳಿಸಿದರು.
ಹಿರಿಯರಾದ ನೀಲಮ್ಮ ವಿ.ಕೆ.ಪಾಟೀಲ್ ಬಸವ ಗುರುವಿನ ಪೂಜೆ ನೆರವೇರಿಸಿದರು. ಗದಗನ ಸಾಹಿತಿ ಡಾ.ಸಿದ್ದು ಯಾಪಲಪರವಿ ಅನುಭಾವ ನೀಡಿದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಹಿರಿಯ ನ್ಯಾಯವಾದಿ
ರಾಜಶೇಖರ ಅಷ್ಟೂರೆ, ತಾಲ್ಲೂಕು ರೋಟರಿ ಅಧ್ಯಕ್ಷ ಸಂಜುಕುಮಾರ ಪಂಡರಗೇರೆ ಇದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಿಸಿದರು. ಸಿದ್ರಾಮೇಶ್ವರ ಪಾಟೀಲ್ ವಂದಿಸಿದರು.

ವಿಶೇಷ ಸನ್ಮಾನ : ಬೆಂಗಳೂರಿನ ಏಕೀಕರಣ ಚೆಕ್ ಔಟ್ ಪ್ರದೇಶ ಉಪನಿರ್ದೇಶಕ ಡಾ.ರಾಮನಗೌಡ ನಾಡಗೌಡ, ಬೆಂಗಳೂರಿನ ನರಶಸ್ತ್ರ ಚಿಕಿತ್ಸೆ ತಜ್ಞ ಡಾ.ಪ್ರಶಾಂತ ಅಳ್ಳೆ, ಲ್ಯಾಪ್ರಾಸ್ಕೋಪಿ ಶಸ್ತ್ರ ಚಿಕಿತ್ಸಕ ಡಾ.ವಿವೇಕ ನಿಂಬೂರೆ, ಇಎನ್‌ಟಿ ಡಾ.ವಿ.ವಿ.ನಾಗರಾಜ, ದಾವಣಗೆರೆಯ ಇನ್‌ಸೈಟ್ ಐಎಎಸ್ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯಕುಮಾರ ಮತ್ತು ಸುರುಪುರ್ ಸಗರನಾಡು ಸೇವಾ ಪ್ರತಿಷ್ಠಾನ
ಅಧ್ಯಕ್ಷ ಪ್ರಕಾಶ ಎಸ್ ಅಂಗಡಿ ಅವರನ್ನು ಶ್ರೀಮಠದ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾಯಕ ಪ್ರಶಸ್ತಿ ಪ್ರದಾನ : ಬೀದರ್‌ನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತೆ ಡಾ.ಗುರಮ್ಮ ಸಿದ್ಧಾರೆಡ್ಡಿ ಅವರನ್ನು ಡಾ.ಚನ್ನಬಸವ ಪಟ್ಟದ್ದೇವರು ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ದಾಸೋಹಿ ಎನ್‌ಎಸ್‌ಎಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಪ್ರಶಸ್ತಿ ನೀಡಿ ಗೌರವಿಸಿದರು. ಸಂಡೂರಿನ ಪ್ರಭು ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಹವಾ ಮಲ್ಲಿನಾಥ ಮಹಾರಾಜರು, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಮುಖಂಡ ಬಾಬು ವಾಲಿ, ಶಕುಂತಲಾ ಬೆಲ್ದಾಳೆ ನಂದಕುಮಾರ ದಾಶಟವಾರ, ಮಲ್ಲಿಕಾರ್ಜುನ ರಗಟೆ, ಅಶೋಕ ಜುಬರೆ, ಡಾ.ಶಶಿಧರ ತೊರಕರ್, ಡಾ.ಕೆ.ರವೀಂದ್ರನಾಥ, ಪುಷ್ಪಾ ಭಾಲಚಂದ್ರ ಜಯಶೆಟ್ಟಿ, ರವಿಶಂಕರ ಕೊರಗಲ್ ಇದ್ದರು.
ಈ ಸುದ್ದಿ ಓದಿದ್ದೀರಾ? ದಲಿತ ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆ; ಶಿಕ್ಷಕಿ ಅಮಾನತು
ಐದು ಗ್ರಂಥ ಬಿಡುಗಡೆ : ಸಾಹಿತಿ ಕೋರಗಲ್ ವಿರೂಪಾಕ್ಷಪ್ಪ ಬರೆದ ಕಲ್ಯಾಣದ ಉಳಿವು, ಡಾ.ನಾಗರಾಜ ಹೀರಾ ಬರೆದ ʼಚಿನ್ನದ ನಾಡಿನ ಶರಣರುʼ ಪ್ರೋ.ಬಾಲಚಂದ್ರ ಜಯಶೆಟ್ಟಿ ಹಿಂದಿ ಭಾಷೆಯಲ್ಲಿ ಅನುವಾದಿಸಿದ ʼಗುರುಚನ್ನಬಸವʼ ಮತ್ತು ಸಂಗಮೇಶ ಎನ್ ಜವಾದಿ ಅವರ ʼಕಾಯಕ ಯೋಗಿಗಳುʼ ಗ್ರಂಥ ಲೋಕಾರ್ಪಣೆಗೊಂಡವು.