ಕೃಷಿ ಪ್ರಧಾನ ರಾಷ್ಟ್ರವಾಗಿರುವ ಭಾರತದಲ್ಲಿ ರೈತನೇ ದೇಶದ ಬೆನ್ನೆಲುಬು ಎಂಬ ಮಾತುಗಳನ್ನು ಹಲವಾರು ವರ್ಷಗಳಿಂದ ಕೇಳುತ್ತಿದ್ದೇವೆ, ಹೇಳುತ್ತಿದ್ದೇವೆ, ಬರೆಯುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಆ ಬೆನ್ನೆಲುಬು ಬಗ್ಗುತ್ತಿರುವುದು, ಬಳಲುತ್ತಿರುವುದನ್ನೂ ಕಾಣುತ್ತಿದ್ದೇವೆ. ಕೃಷಿಯೇ ಪ್ರಧಾನಿ ಎಂದು ಹೇಳಿಕೊಳ್ಳುವ ರಾಷ್ಟ್ರದಲ್ಲಿ ಕೃಷಿ ಮೇಲಿನ ಆದ್ಯತೆಗಳು ಕಡಿಮೆಯಾಗುತ್ತಿವೆ. ಸರ್ಕಾರಗಳು ರೈತರನ್ನು ಮೇಲೆತ್ತುವ ಬದಲು, ಅವರ ಮೇಲೆಯೇ ಸವಾರಿ ಮಾಡುತ್ತಿವೆ. ನೈಸರ್ಗಿಕ, ಆರ್ಥಿಕ ಸಂಕಷ್ಟಗಳ ನಡುವೆಯೂ ಕೃಷಿ ಮಾಡುತ್ತಲೇ ಬಗ್ಗುತ್ತಿರುವ ಬೆನ್ನನ್ನು ಸರ್ಕಾರಗಳು ಮತ್ತಷ್ಟು ಬಗ್ಗಿಸುತ್ತಿವೆ. ರೈತನನ್ನು ಹಿಂಡುತ್ತಿವೆ.
ಈ ಚರ್ಚೆ ಈಗ ಅಥವಾ ಇವತ್ತು (ಡಿ.23) ಏಕೆ? ಏಕೆಂದರೆ, ಇಂದು ‘ರಾಷ್ಟ್ರೀಯ ರೈತ ದಿನ’ ಅರ್ಥಾತ್ ‘ಅನ್ನದಾತರ ದಿನ’. ‘ರೈತರ ಚಾಂಪಿಯನ್’ ಎಂದೇ ಕರೆಸಿಕೊಂಡಿದ್ದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮದಿನವನ್ನು (ಡಿ.23) ರಾಷ್ಟ್ರೀಯ ರೈತರ ದಿನವೆಂದು ಆಚರಿಸಲಾಗುತ್ತದೆ. 2001ರಲ್ಲಿ ಭಾರತ ಸರ್ಕಾರವು ಚರಣಸಿಂಗ್ ಅವರ ಹುಟ್ಟಿನ ದಿನವನ್ನು ರೈತ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿತು. ರೈತರ ಕೊಡುಗೆ ಸ್ಮರಿಸುವ ಮತ್ತು ರೈತರನ್ನು ಗೌರವಿಸುವ ಉದ್ದೇಶದೊಂದಿಗೆ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ರೈತ ದಿನವನ್ನು ಆಚರಿಸುತ್ತಿದೆ.
ಆದರೆ, ಪ್ರಸ್ತುತ ದಿನಗಳಲ್ಲಿ ರೈತರ ಪಾಡು ಏನಾಗಿದೆ? ನಿಜಕ್ಕೂ ರೈತರನ್ನು ಸರ್ಕಾರಗಳು ಗೌರವಿಸುತ್ತಿವೆಯೇ? ಕಳೆದುಕೊಂದು ದಶಕದಲ್ಲಿ ರೈತರು ಹೊಲ-ಗದ್ದೆಗಳಲ್ಲಿ ಬೆಳೆಗಳ ನಡುವೆ ಇರುವುದಕ್ಕಿಂತ ಹೆಚ್ಚಾಗಿ ಪ್ಲೆಕಾರ್ಡ್‌ಗಳನ್ನಿಡಿದು ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವಂತಹ ಪರಿಸ್ಥಿತಿ ಇದೆ. ಬಿತ್ತನೆ ಬೀಜ, ರಸಗೊಬ್ಬರಗಳಿಗೆ ಸಬ್ಸಿಡಿ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಾಗಿ (ಎಂಎಸ್‌ಪಿ) ಆಗ್ರಹಿಸಿ ಹಾಗೂ ಕಷಿ ಭೂಮಿ ಭೂಸ್ವಾಧೀನದ ವಿರುದ್ಧ ದೇಶಾದ್ಯಂತ ರೈತರು ಪ್ರತಿಭಟನೆ, ಹೋರಾಟ ನಡೆಸುತ್ತಿದ್ದಾರೆ. ಕೃಷಿ ಕ್ಷೇತ್ರದ ಉಳಿವಿಗಾಗಿ ಸರ್ಕಾರಗಳೊಂದಿಗೆ ಸೆಣಸಾಡುತ್ತಿದ್ದಾರೆ.
ಈ ಹಿಂದೆ, ಹಸಿರು ಕ್ರಾಂತಿಗೆ ಕರೆ ಕೊಟ್ಟು, ಕೃಷಿಗೆ ಹೆಚ್ಚು ಒತ್ತುಕೊಟ್ಟಿದ್ದ ಸರ್ಕಾರಗಳು ಈಗ ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ಅಳವಡಿಸಿಕೊಂಡು ಕೈಗಾರಿಕೋದ್ಯಮದ ಹೆಸರಿನಲ್ಲಿ ಬಂಡವಾಳಿಗರನ್ನು ಬೆಳೆಸುತ್ತಿವೆ. ರೈತರ ಭೂಮಿ, ಕೃಷಿ ಮಾರುಕಟ್ಟೆಗಳನ್ನು ಕಾರ್ಪೊರೇಟ್‌ಗಳ ಕೈಗಿಟ್ಟು ರೈತರ ಬೆನ್ನು ಮುರಿಯುತ್ತಿವೆ.
ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ್ದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, 2020ರಲ್ಲಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿತ್ತು. ಕೃಷಿ ಕ್ಷೇತ್ರದ ಮೇಲೆ ಬಂಡವಾಳಿಗರು ಹಿಡಿತ ಸಾಧಿಸುವಂತೆ ಮಾಡಲು ಮುಂದಾಗಿತ್ತು. ದೆಹಲಿ ಗಡಿಯಲ್ಲಿ ನಿರಂತರ ರೈತ ಹೋರಾಟದ ಫಲವಾಗಿ, ಆ ಕಾಯ್ದೆಗಳು ರದ್ದಾದವು. ಆದರೂ, ಈವರೆಗೆ ಮೋದಿ ಸರ್ಕಾರ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಜಾರಿಗೊಳಿಸಿಲ್ಲ. ಎಂಎಸ್‌ಪಿಗಾಗಿಯೇ ರೈತರು ಮತ್ತೆ ತಿಂಗಳಾನುಗಟ್ಟಲೆ ಪಂಜಾಬ್-ಹರಿಯಾಣ ಗಡಿಯಲ್ಲಿ ಹೋರಾಟ ನಡೆಸಬೇಕಾಯಿತು. ಇದೀಗ, ಕೃಷಿ ಉತ್ಪನ್ನಗಳನ್ನು ಎಂಎಸ್‌ಪಿ ಮೂಲಕವೇ ಖರೀದಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಒಂದೆಡೆ ಕೈಗಾರಿಕೀರಣದ ಕಾರ್ಮೋಡ ಕೃಷಿ ಕ್ಷೇತ್ರವನ್ನು ಆವರಿಸಿಕೊಳ್ಳಲು ಹವಣಿಸುತ್ತಿದ್ದರೆ, ಮತ್ತೊಂದೆಡೆ ಬದಲಾಗುತ್ತಿರುವ ಹವಾಮಾನವು ಅತಿವೃಷ್ಟಿ, ಅನಾವೃಷ್ಟಿ ಸೃಷ್ಟಿಸಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಉತ್ತಮ ಬೆಳೆ ಬಾರದೆ, ಇಳುವರಿ ಕಡಿಮೆಯಾಗಿ, ಮಾಡಿದ ಸಾಲವನ್ನೂ ತೀರಿಸಲಾರದೆ ರೈತರು ಆತ್ಮಹತ್ಯೆಗೆ ಹಾದಿ ಹಿಡಿಯುತ್ತಿದ್ದಾರೆ. ರೈತರ ಸಂಕಷ್ಟಗಳನ್ನು ಪರಿಹರಿಸುವಲ್ಲಿ, ರೈತರನ್ನು ಸಾಲ-ಆತ್ಮಹತ್ಯೆಯ ಸುಳಿಯಿಂದ ಹೊರತರುವಲ್ಲಿ ಸರ್ಕಾರಗಳು ವಿಫಲವಾಗಿವೆ. ಕೃಷಿ-ರೈತರನ್ನು ಕಡೆಗಣಿಸಿವೆ.
ರೈತ ದಿನದ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಪೂರ್ಣಿಮ ”ಸರ್ಕಾರಗಳು ರೈತ ದಿನ, ಕೃಷಿ ದಿನವೆಂದು ಒಂದು ದಿನದ ಕಾರ್ಯಕ್ರಮ ಮಾಡುವುದರಿಂದ ಅಥವಾ ರೈತರ ಬಗ್ಗೆ ಹೊಗಳಿ ಮಾತನಾಡುವುದರಿಂದ ರೈತರ ಬವಣೆಗಳು ನೀಗುವುದಿಲ್ಲ. ಕೃಷಿ ಕ್ಷೇತ್ರವನ್ನು ಸರ್ಕಾರಗಳು ಆದ್ಯತೆಯಾಗಿ ಪರಿಗಣಿಸಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೂ ಎಂಎಸ್‌ಪಿ ನಿಗದಿ ಮಾಡಬೇಕು. ಗೊಬ್ಬರಕ್ಕೆ ಸಬ್ಸಿಡಿ ಕೊಡಬೇಕು. ಉತ್ತಮ ಬಿತ್ತನೆ ಬೀಜಗಳನ್ನು ಉಚಿತವಾಗಿ ವಿತರಿಸಬೇಕು. ಮಾರುಕಟ್ಟೆಗಳಲ್ಲಿ ದಳ್ಳಾಳಿಗಳ ಹಾವಳಿ ತಪ್ಪಿಸಬೇಕು. ರೈತರಿಗೆ ಕೃಷಿಯಲ್ಲಿ ಲಾಭ ದೊರೆಯುವಂತೆ ಮಾಡಬೇಕು. ಆಗ ಮಾತ್ರವೇ ಸರ್ಕಾರಗಳಿಗೆ ‘ರೈತ ದಿನ’ ಆಚರಿಸುವ ನೈತಿಕತೆ ಇರುತ್ತದೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಅದಾನಿ ಸೋಲಾರ್ ಒಪ್ಪಂದದ ಹಿಂದಿದೆ ಕೇಂದ್ರ-ಆಂಧ್ರ ಸರ್ಕಾರಗಳ ಚಮತ್ಕಾರ
ಕೃಷಿಯ ಬಗ್ಗೆ ಈದಿನ.ಕಾಮ್ ಜೊತೆಗೆ ಮಾತನಾಡಿದ ಹಾಸನ ಜಿಲ್ಲೆಯ ರೈತ ಪ್ರಭಾಕರ್, ”ನಮಗೆ ಕೃಷಿಯೇ ಆಧಾರ, ಬದುಕು. ಕೃಷಿ ಇಲ್ಲದೆ ನಮ್ಮ ಬದುಕು ನಡೆಯುವುದಿಲ್ಲ. ಕೃಷಿಯಲ್ಲದೆ ಬೇರಾವುದೇ ಉದ್ಯೋಗ ಮಾಡುವುದು ನಮಗೆ ಕಷ್ಟ. ಹೊಲ-ಗದ್ದೆಗಳಲ್ಲಿ ದುಡಿದರೆ ಜೀವನ ಸಾಗುತ್ತದೆ. ಈ ಹಿಂದೆ, ಗೊಬ್ಬರಕ್ಕೆ ಸರ್ಕಾರ ಸಬ್ಸಿಡಿ ಕೊಡುತ್ತಿತ್ತು. ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತಿತ್ತು. ಈಗ ಯಾವುದಕ್ಕೂ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆಯೂ ಇಲ್ಲ. ಸರ್ಕಾರಗಳು ಕೃಷಿಗೆ ಒತ್ತುಕೊಡಬೇಕು. ರೈತರಿಗೆ ನೆರವು ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಕೃಷಿ ಸಮಸ್ಯೆಯ ಬಗ್ಗೆ ಮಾತನಾಡಿದ ಮಂಡ್ಯ ಜಿಲ್ಲೆಯ ರೈತ ನಾಗರಾಜ್, ”ನಾವು ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದೆವು. ಈಗ ಕಬ್ಬು ಬೆಳೆಯುವುದನ್ನೇ ನಿಲ್ಲಿಸಿದ್ದೇವೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕಾರ್ಖಾನೆಗಳು ಹಣ ಪಾವತಿಯನ್ನೂ ಸರಿಯಾಗಿ ಮಾಡುವುದಿಲ್ಲ. ಆದಾಯವೂ ಬರುವುದಿಲ್ಲ. ಹೀಗಾಗಿ, ಸಾಲ ಮಾಡಿ ಕಬ್ಬು ಬೆಳೆಯುವ ರೈತರು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿಹಿ ಬೆಳೆವ ರೈತರು ವಿಷ ಸೇವಿಸುವ ಪರಿಸ್ಥಿತಿ ಎದುರಾಗಿದೆ. ಕಬ್ಬಿಗೆ ಎಂಎಸ್‌ಪಿ ನಿಗದಿಯಾಗಬೇಕು. ಲಾಭದೊಂದಿಗೆ ಕಬ್ಬನ್ನು ಖರೀದಿ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
”ಕೃಷಿ ಕ್ಷೇತ್ರದ ಸಮಸ್ಯೆ ಕೇವಲ ರೈತರ ಸಮಸ್ಯೆ ಮಾತ್ರವಲ್ಲ. ಅದು ಇಡೀ ದೇಶದ ಸಮಸ್ಯೆ. ರೈತರು ಸಂಕಷ್ಟಕ್ಕೆ ಸಿಲುಕಿದರೆ ಅದರ ಪರಿಣಾಮ ಪ್ರತ್ಯಕ್ಷ-ಪರೋಕ್ಷವಾಗಿ ಎಲ್ಲರ ಮೇಲೂ ಬೀಳುತ್ತದೆ. ಬೆಲೆ ಏರಿಕೆಯ ಸಂದಿಗ್ಧ ಸಂದರ್ಭದಲ್ಲಿ ಕೃಷಿಗೆ ಸರ್ಕಾರಗಳು ಒತ್ತುಕೊಡದಿದ್ದರೆ, ಕೃಷಿಯನ್ನು ಪ್ರೋತ್ಸಾಹಿಸದಿದ್ದರೆ ಆಹಾರ ಉತ್ಪನ್ನಗಳ ಬೆಲೆ ಏರುತ್ತದೆ. ಬಹುಸಂಖ್ಯೆಯ ಜನರು ಪೌಷ್ಟಿಕ ಆಹಾರವನ್ನು ಕೊಳ್ಳುವುದೂ ಕಷ್ಟವಾಗುತ್ತದೆ. ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಬೇಕು, ಉತ್ತಮ ಬೆಲೆಗೆ ಅವುಗಳನ್ನು ಸರ್ಕಾರಗಳು ಖರೀದಿಸಬೇಕು, ಕೈಗೆಟಕುವ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡಬೇಕು. ಕೃಷಿಯಲ್ಲಿ ಸಮನ್ವಯ ಸಾಧಿಸಬೇಕು” ಎಂದು ರೈತರು ಒತ್ತಾಯಿಸಿದ್ದಾರೆ.