ಅಮಿತ್ ಶಾ ಅಂಬೇಡ್ಕರ್ ಪ್ರತಿಮೆ ಎದುರು ಮಂಡಿಯೂರಿ ಕುಳಿತು ದೇಶದ ಕ್ಷಮೆ ಕೇಳಬೇಕು. ಒಬ್ಬ ಗಡಿಪಾರು ಆಗಿದ್ದಂತಹ ವ್ಯಕ್ತಿ, ಜನರ ಓಟನ್ನು ಕೊಳ್ಳೆ ಹೊಡೆದು, ಇವತ್ತು ಸಂಸತ್ತಿನಲ್ಲಿ ಕೂತು ಮಾತನಾಡುತ್ತಾನೆ. ಹೀಗೆ ಸಂಸತ್ತಿನಲ್ಲಿ ಮಾತನಾಡಲು ಕಾರಣ ಅಂಬೇಡ್ಕರ್ ಕೊಟ್ಟ ಸಂವಿಧಾನ ಕಾರಣ ಅನ್ನುವುದನ್ನು ಆತ ಮರೆತಿದ್ದಾನೆ ಎಂದು ಮಂಡ್ಯ ಜಿಲ್ಲೆಯ ಜನಪರ ಸಂಘಟನೆಗಳ ಮುಖಂಡರು ಹರಿಹಾಯ್ದಿದ್ದಾರೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನಿಂದಿಸಿರುವ ಅಮಿತ್ ಶಾ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನು ಅವಮಾನಿಸಿರುವ ಸಿ.ಟಿ.ರವಿ ಅವರನ್ನು ಅವರ ಹುದ್ದೆಗಳಿಂದ ವಜಾಗೊಳಿಸುಂತೆ ಆಗ್ರಹಿಸಿ ಮಂಡ್ಯದಲ್ಲಿ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಮಹಿಳಾ ಮುನ್ನಡೆಯ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಿಂದ ದಸಂಸ ಹಾಗೂ ಕರ್ನಾಟಕ ಜನಶಕ್ತಿಯ ನೇತೃತ್ವದಲ್ಲಿ ನಗರ ಸಂಜಯ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಅಮಿತ್ ಶಾ ಅಂಬೇಡ್ಕರ್ ಪ್ರತಿಮೆ ಮುಂದೆ ಮಂಡಿಯೂರಿ ಕುಳಿತು ದೇಶದ ಕ್ಷಮೆ ಕೇಳಬೇಕು. ಕೇಂದ್ರ ಸಚಿವ ಸಂಪುಟದಿಂದ ಅಮಿತ್ ಶಾನನ್ನು ವಜಾ ಮಾಡಬೇಕು. ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ ಸಿ.ಟಿ.ರವಿಯನ್ನು ಪರಿಷತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಒತ್ತಾಯಿಸಿದರು.
ಅಮಿತ್ ಶಾ ಕೊಟ್ಟಿರುವ ಹೇಳಿಕೆ ವಿರೋಧಿಸಿ ವಿಧಾನಸೌಧದಲ್ಲಿ ಒಬ್ಬ ಹೆಣ್ಣು ಮಗಳು ಪ್ರತಿರೋಧ ತೋರುತ್ತಾರೆ. ಈ ಪ್ರತಿರೋಧವನ್ನು ವಿಚಾರದ ಮೂಲಕ ಎದುರಿಸಬೇಕು. ಅದನ್ನು ಬಿಟ್ಟು ‘ಪ್ರಾಸ್ಟಿಟ್ಯೂಟ್’ ಎಂಬ ಪದ ಬಳಸಿ ಹೆಣ್ಣು ಮಗಳ ನೈತಿಕತೆ, ಅಸ್ತಿತ್ವವನ್ನು ಕುಗ್ಗಿಸುವ ಕೆಲಸ ಮಾಡುವುದು ಎಷ್ಟು ಸರಿ. ನೀವು ನಿಜಕ್ಕೂ ಹೇಡಿಗಳು ಎಂದು ಆಕ್ರೋಶವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಪ್ರಬಲವಾಗಿ ಪ್ರತಿಪಾದಿಸಿ ಕಟ್ಟಿಕೊಟ್ಟ ಸಂಸದೀಯ ಪ್ರಜಾಪ್ರಭುತ್ವದ ಅತ್ಯುನ್ನುತ ವೇದಿಕೆಯಾದ ಸಂಸತ್ತಿನಲ್ಲಿ ನಿಂತು ಸಂಸತ್ತಿನ ಕಲಾಪವನ್ನು ಕಳೆದ ಹತ್ತು ವರ್ಷಗಳಲ್ಲಿ ಪುಂಡರ ಗೋಷ್ಠಿಯ ಮಟ್ಟಕ್ಕೆ ಇಳಿಸಿರುವ ಬಿಜೆಪಿ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ, ಸಂವಿಧಾನ ಕುರಿತ ಚರ್ಚೆಯ ಸಂದರ್ಭದಲ್ಲಿ ‘ಕೆಲವರಿಗೆ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೆಸರು ಹೇಳುವುದೇ ಫ್ಯಾಷನ್ ಆಗಿದ್ದು, ಇದು ವ್ಯಸನವಾಗಿ ಬಿಟ್ಟಿದೆ: ಅಂಬೇಡ್ಕರ್ ಹೆಸರಿಗೆ ಬದಲಾಗಿ ದೇವರ ಹೆಸರನ್ನಾದರೂ ಇಷ್ಟು ಬಾರಿ ಹೇಳಿದ್ದರೆ ಅವರಿಗೆ ಏಳೇಳು ಜನ್ಮಗಳಿಗೆ ಸ್ವರ್ಗ ಲಭಿಸುತ್ತಿತ್ತು” ಎಂದು ಹೇಳುವ ಮೂಲಕ ಅಂಬೇಡ್ಕರ್ ಬಗೆಗಿನ ತನ್ನ ಹಾಗೂ ತನ್ನ ಸಂಘ ಪರಿವಾರದ ತಮ್ಮ ಎಂದಿನ ತೀವ್ರ ಅಸಹನೆ, ದ್ವೇಷ ಹೊರ ಹಾಕಿದ್ದಾರೆ ಎಂದು ಖಂಡಿಸಿದರು.
ಇದನ್ನು ನೋಡಿದ್ದೀರಾ? ಮಂಡ್ಯ | ‘ರಸ್ತೆ ಮೇಲೆ ಓಡಾಡಲು ನಿರ್ಬಂಧ; ಸಂಕಷ್ಟಕ್ಕೆ ಸಿಲುಕಿದ ಕುಟುಂಬ!
ಸಂಸತ್ತಿನಲ್ಲಿ ನಿಂತು ಮಾತನಾಡಲು ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನ ಬದ್ಧವಾದ ಮತದಾನದ ಹಕ್ಕನ್ನು ಮರೆತು ದಾಷ್ಟ್ಯ ತೋರುತ್ತಿದ್ದಾರೆ. ಆದ್ದರಿಂದ ಅಮಿತ್ ಶಾ ಈ ಕೀಳು ಮಟ್ಟದ ಹೇಳಿಕೆಯನ್ನು ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಆರ್.ಎಸ್.ಎಸ್ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಮತ್ತಿತರ ಸಂಘ ಪರಿವಾರಗಳೇ, ನಿಮ್ಮ ದೇವರು ಧರ್ಮ – ಸ್ವರ್ಗ – ನರಕ ಕಲ್ಪನೆಗಳ್ಯಾವೂ ದಲಿತ ದಮನಿತ-ಶೋಷಿತ, ತಳ ಸಮುದಾಯಗಳ, ಮಹಿಳೆಯರ ಹಾಗೂ ಶೂದ್ರ ಸಮುದಾಯಗಳ ವಿಮೋಚನೆಗೆ ಬದುಕಿಗೆ ಆಸರೆಯಾಗಲಿಲ್ಲ ಬದಲಾಗಿ ಅಂಬೇಡ್ಕರ್ ಎಂಬ ಜ್ಞಾನದ ಬೆಳಕು, ಅರಿವಿನ ಹಣತೆ ಸ್ವಾಭಿಮಾನದ ಹೋರಾಟ ಈ ಸಮುದಾಯಗಳ ಬದುಕಿಗೆ ಒಂದಷ್ಟು ಘನತೆ-ಗೌರವ ತಂದು ಕೊಟ್ಟಿದೆ ಮತ್ತು ಬದುಕುವ ಮಾರ್ಗ ಕಲ್ಪಿಸಿದೆ ಎಂಬುದನ್ನು ಮರೆಯದಿರಿ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಮಂಡ್ಯ ಸಾಹಿತ್ಯ ಸಮ್ಮೇಳನ | ಹೋರಾಟಕ್ಕೆ ಕೊನೆಗೂ ಮಣಿದ ಕಸಾಪ: ಸಾರ್ವಜನಿಕರಿಗೆ ಮೊಟ್ಟೆ ವಿತರಣೆ
ಆರ್.ಎಸ್.ಎಸ್ -ಬಿಜೆಪಿ ಮೋದಿ ಅಮಿತ್ ಶಾಗಳೇ “ಮೋದಿ ಮೋದಿ ಮೋದಿ ಮೋದಿ ಎಂದು ಕಿರುಚಾಟ ಮಾಡುವ ಬದಲು ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಅಂಬೇಡ್ಕರ್‌ರನ್ನು ಸ್ಮರಿಸಲು ನಿಮ್ಮ ಅಂಧ ಭಕ್ತ ಪಟಾಲಂಗಳಿಗೆ ತಿಳಿಸಿ, ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಸಿ ಅವರೂ ಉದ್ಧಾರ ಆಗ್ತಾರೆ. ಅವರ ಮಕ್ಕಳು-ಮೊಮ್ಮಕ್ಕಳು-ಮರಿ ಮಕ್ಕಳೂ ಉದ್ಧಾರವಾಗ್ತಾರೆ. ಅಷ್ಟೇ ಏಕೆ ಅವರ ಮುಂದಿನ ತಲೆಮಾರುಗಳೇ ಉದ್ಧಾರವಾಗುತ್ತಾರೆ. ಹಾಗೆಯೇ ದೇಶದಲ್ಲಿ ದ್ವೇಷದ ಬೆಂಕಿ ಆರುತ್ತದೆ – ತಣ್ಣಗಾಗುತ್ತದೆ. ನಾಡಿನ ಜನ ನೆಮ್ಮದಿಯಿಂದ ಬದುಕುವಂತಾಗುತ್ತದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ಪ್ರೊ.ಹುಲ್ಕೆರೆ ಮಹದೇವು, ಮಾಹಿಳಾ ಮುನ್ನಡೆಯ ಪೂರ್ಣಿಮಾ, ದಸಂಸ ರಾಜಶೇಖರ್, ಜಾಗೃತ ಕರ್ನಾಟಕದ ಎನ್.ನಾಗೇಶ್, ಸುಬ್ರಮಣ್ಯ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ವಕೀಲ ಜೆ.ರಾಮಯ್ಯ, ಮಹಿಳಾ ಮುನ್ನಡೆಯ ಶಿಲ್ಪ, ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯಾಧ್ಯಕ್ಷ ವರದರಾಜೇಂದ್ರ, ಅರುಣೋದಯ ಕಲಾತಂಡ ಮಂಜುಳ, ಕರ್ನಾಟಕ ಸೌಹಾರ್ದ ಮುಸ್ಲಿಂ ಒಕ್ಕೂಟದ ಅಬ್ದುಲ್ ಸುಕೂರ್, ರೈತಸಂಘದ ಮಹೇಶ್ ಗೌಡ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಅಂಜಲಿ, ಉಗಮ ಚೇತನ ಟ್ರಸ್ಟ್ ಪ್ರಿಯ ರಮೇಶ್, ಹುರುಗಲವಾಡಿ ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.