ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲಬಂಡಾ ಮೊರಾರ್ಜಿ ವಸತಿ ದೇಸಾಯಿ ವಸತಿ ಶಾಲೆಯ ಶೌಚಾಲಯದಲ್ಲಿ ಮೊಬೈಲ್ ಇಟ್ಟಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು ಹಾಗೂ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ವಿಷಪೂರಿತ ಆಹಾರ ಸೇವನೆ ಮಾಡಿದ 50ಕ್ಕೂ ಹೆಚ್ಚು ಜನ ಅಸ್ವಸ್ಥವಾಗಿದ್ದ ಘಟನೆ ನಡೆದಿತ್ತು. ಈಗ ಬಾಲಕಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟಿರುವ ಘಟನೆ ನಡೆದಿದೆ. ಶಾಲೆ ಮೇಲುಸ್ತುವಾರಿ ವೈಫಲ್ಯದಿಂದ ಮೇಲಿಂದ ಮೇಲೆ ಘಟನೆ ನಡೆಯುತ್ತಿವೆ ಎಂದು ದೂರಿದರು.
ಘಟನೆ ನಡೆದರೂ ಶಾಲೆ ಪ್ರಿನ್ಸಿಪಾಲ್, ಮೇಲ್ವಿಚಾರಕರು ದೂರು ನೀಡದೇ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಸಂಘಟನೆ ನಡೆಸಿದ ನಂತರ ಅಪರಿಚಿತ ವ್ಯಕ್ತಿ ಹೆಸರಿನಲ್ಲಿ ಕೇಸ್ ದಾಖಲಾಗಿದೆ. ಆರೋಪಿ ಯಾರೆಂಬುದು ಶಾಲೆಯ ಮುಖ್ಯಸ್ಥರಿಗೆ ಗೊತ್ತಿದೆ. ಈ ಹಿಂದೆಯೂ ಇದೇ ರೀತಿ ಪ್ರಕರಣ ನಡೆದಿತ್ತು. ಆದರೂ ಕ್ರಮಕ್ಕೆ ಮುಂದಾಗದೇ ಇರುವುದರಿಂದ ಮತ್ತೊಂದು ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕರ್ತವ್ಯ ಲೋಪ ಎಸಗಿ ಅಧಿಕಾರಿಗಳನ್ನು ಅಮಾನತುಗೊಳಿಸಿ ವಸತಿ ನಿಲಯದಲ್ಲಿ ಸುರಕ್ಷತೆ, ಸೌಲಭ್ಯ ಒದಗಿಸಬೇಕು ಎಂದರು.
ತಾಲೂಕು ಅಧ್ಯಕ್ಷ ಆನಂದ ಸ್ವಾಮಿ ಮಾತನಾಡಿ, 6 ರಿಂದ 10ನೇ ತರಗತಿ ಮಕ್ಕಳು ಅಭ್ಯಾಸ ಮಾಡುತ್ತಿರುವ ಮೊರಾರ್ಜಿ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ವಸತಿ ಶಾಲೆಯಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಘಟನೆಯಿಂದ ಪಾಲಕರು ಆತಂಕ ಪಡುವಂತಾಗಿದೆ. ಅಪರಿಚಿತ ವ್ಯಕ್ತಿ ಯಾರೆಂಬುದು ಶಾಲೆ ಮುಖ್ಯಸ್ಥರಿಗೆ ತಿಳಿದಿದೆ. ಈ ಹಿಂದೆ ಘಟನೆ ನಡೆದಾಗ ತಿಳುವಳಿಕೆ ನೀಡಿ ಕಳುಹಿಸಲಾಗಿತ್ತು. ಈಗ ಅದೇ ರೀತಿ ಘಟನೆ ಮರುಕಳಿಸಿದೆ. ಕೂಡಲೇ ಬೇಜವಾಬ್ದಾರಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು. ವಸತಿ ಶಾಲೆ ಕಾಂಪೌಂಡ್ ಎತ್ತರವಾಗಿ ನಿರ್ಮಿಸಬೇಕು. ಅಗತ್ಯ ಅಡುಗೆ ಸಿಬ್ಬಂದಿ, ಭದ್ರತೆ ಒದಗಿಸಬೇಕು ಹಾಗೂ ವಸತಿ ನಿಲಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದರು.
ಇದನ್ನು ಓದಿದ್ದೀರಾ? ಮಂಗಳೂರು | ಎನ್‌ಐಟಿಕೆಯಲ್ಲಿ 1999 ಬ್ಯಾಚ್ ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನ
ಸಂಗಮೇಶ ಮಂಗಾನವರ ಮಾತನಾಡಿ, ಮೊರಾರ್ಜಿ ವಸತಿ ಶಾಲೆ ಖಾಯಂ ಪ್ರಿನ್ಸಿಪಾಲ ರಜೆಯ ಮೇಲೆ ತೆರಳಿದ್ದಾರೆ. ದೈಹಿಕ ಶಿಕ್ಷಕರಿಗೆ ಪ್ರಭಾರ ಹುದ್ದೆ ನೀಡಿ ವಸತಿ ನಿಲಯ ನಿರ್ವಹಿಸಲಾಗುತ್ತಿದೆ. ಆಡಳಿತ ವ್ಯವಸ್ಥೆ ವೈಫಲ್ಯದಿಂದ ಬಾಲಕಿಯರು ಆತಂಕದಲ್ಲಿ ಅಭ್ಯಾಸ ಮಾಡುವಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಪರಿಶಿಷ್ಟ ಪಂಗಡದ ಇಲಾಖೆ ಅಧಿಕಾರಿಗಳ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಭೀಮಣ್ಣ ಇನ್ನಿತರರು ಹಾಜರಿದ್ದರು.
