ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಭಾರೀ ಹಿಮಪಾತ ಉಂಟಾಗಿದ್ದು, 1,000ಕ್ಕೂ ಹೆಚ್ಚು ವಾಹನಗಳು ಹಿಮದಲ್ಲಿ ಸಿಲುಕಿಕೊಂಡಿವೆ. ಪರಿಣಾಮವಾಗಿ, ಹಲವಾರು ಪ್ರವಾಸಿಗರು ಸೋಲಾಂಗ್ ಮತ್ತು ರೋಹ್ತಾಂಗ್ ನಡುವಿನ ಅಟಲ್ ಸುರಂಗ ಮಾರ್ಗದಲ್ಲಿ ಗಂಟೆಗಟ್ಟಲೆ ಸಿಲುಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಸುಮಾರು 1,000 ವಾಹನಗಳು ರಸ್ತೆಯಲ್ಲಿದ್ದು, ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಈವರೆಗೆ ಸುಮಾರು 700 ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ಹಿಮಪಾತವು ಮುಂದುವರೆದಿದ್ದು, ಪ್ರವಾಸಿಗರು ಮತ್ತು ವಾಹನ ಚಾಲಕರು ತಮ್ಮ ವಾಹನಗಳನ್ನು ಚಲಾಯಿಸಲಾಗುತ್ತಿಲ್ಲ. ಅವರೆಲ್ಲರನ್ನೂ ರಕ್ಷಿಸುವಲ್ಲಿ ಪೊಲೀಸ್ ಸಿಬ್ಬಂದಿ ನಿರತರಾಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಹಿಮದಿಂದ ಆವೃತವಾದ ಪರ್ವತಗಳಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಪ್ರವಾಸಿಗರು ಹೆಚ್ಚಾಗಿ ಮನಾಲಿ, ಶಿಮ್ಲಾಗೆ ತೆರಳಿದ್ದಾರೆ. ಆದರೆ, ಹಿಮಪಾತದಿಂದ ಅವರೆಲ್ಲರೂ ಆತಂಕಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ, ಡಿಸೆಂಬರ್ 8ರಂದು ಕೂಡ ಹಿಮಪಾತವಾಗಿದ್ದು, ಇದೀಗ ಮತ್ತೆ ಹಿಮಪಾತವಾಗುತ್ತಿದೆ. ಪರಿಣಾಮವಾಗಿ ಕ್ರಿಸ್ಮಸ್, ಹೊಸ ವರ್ಷಾಚರಣೆಗಾಗಿ ತೆರಳಿದ್ದವರು, ಹಬ್ಬ ಆಚರಣೆಗೂ ಮುನ್ನವೇ ಮನಾಲಿ ತೊರೆಯಲು ಮುಂದಾಗಿದ್ದಾರೆ.
ಕೋವಿಡ್-19 ಹೊಡೆತದಿಂದ ತತ್ತರಿಸಿದ್ದ ಹಿಮಾಚಲ ಪ್ರದೇಶದ ಪ್ರವಾಸೋದ್ಯಮವು ಚೇತರಿಕೆಯ ಹಾದಿಯಲ್ಲಿದೆ. ಈ ಬಾರಿಯ ಚಳಿಗಾಲದಲ್ಲಿ ಸ್ಥಳೀಯ ವ್ಯಾಪಾರಗಳು, ಪ್ರವಾಸೋದ್ಯಮ ಹೆಚ್ಚು ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಹಿಮಪಾತವು ಪ್ರವಾಸಿಗರನ್ನು ಮತ್ತೆ ಮನಾಲಿ, ಶಿಮ್ಲಾಗಳಿಂದ ದೂರವಿಡುತ್ತಿದೆ.