ವಿಶ್ವರತ್ನ, ಸಂವಿಧಾನ ಪಿತಾಮಹ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಕೂಡಲೇ ಮಂತ್ರಿಗಿರಿಯಿಂದ ಕೆಳಗಿಳಿಸಬೇಕು. ಹಾಗೆಯೇ ಈ ದೇಶದಿಂದ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ವೇಳೆ, ‘ಅಮಿತ್ ಶಾ ಕೇಡಿ – ಹಾಕರಿ ಅವನಿಗೆ ಬೇಡಿ’ ಎಂಬಿತ್ಯಾದಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅಮಿತ್ ಶಾ ಅವರ ಪ್ರತಿಕೃತಿ ಜತೆಗೆ ಮನುಸ್ಮೃತಿಯನ್ನು ಸುಟ್ಟು ಆಕ್ರೋಶ ಹೊರಹಾಕಿದರು. ಗೃಹ ಸಚಿವ ಸ್ಥಾನದಿಂದ ಅಮಿತಾ ಶಾ ಅವರನ್ನ ಕೂಡಲೇ ವಜಾಗೊಳಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಬೆಂಗಳೂರು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಶಂಕರ ಮಾವಳ್ಳಿ, “ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನ ಅಪಮಾನಿಸಿದರ ವಿರುದ್ದ ಇಡೀ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಸಂಸತ್‌ನಲ್ಲಿ ಸಂವಿಧಾನ ಆಶಯಗಳ ಬಗ್ಗೆ ಮಾತನಾಡುವಾಗ ಅಮಿತ್ ಶಾ ವಿಷಪೂರಿತವಾದ ಮಾತುಗಳನ್ನಾಡಿದ್ದಾರೆ. ಅಮಿತ್ ಶಾ ಜೈಲಿಗೆ ಹೋಗಿ ಬಂದವರು. ಹಾಗೆಯೇ ಅವರನ್ನು ಗುಜರಾತ್ ಸರ್ಕಾರ ಗಡಿಪಾರು ಮಾಡಿತ್ತು. ಇಂತಹ ವ್ಯಕ್ತಿಯೇ ಇದೀಗ ದೇಶದ ಗೃಹ ಮಂತ್ರಿ ಆಗಿರುವುದು ನಿಜಕ್ಕೂ ದುರಂತ. ಪ್ರಧಾನಿಗೆ ನಿಜವಾಗಿ ಸಂವಿಧಾನದ ಬಗ್ಗೆ ಗೌರವ ಇದ್ದರೆ, ಈ ಕೂಡಲೇ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು” ಎಂದು ಆಗ್ರಹಿಸಿದರು.
ದಸಂಸ ಮುಖಂಡೆ ಚಂದ್ರಿಕಾ ಮಾತನಾಡಿ, “ಸಂವಿಧಾನವನ್ನ ಜಾರಿಗೆ ತಂದವರಿಗೆ ಈಗ ಬೆಲೆ ಕೊಡುತ್ತಿಲ್ಲ. ಕೆಂದ್ರದ ಗೃಹ ಮಂತ್ರಿಯಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ? ನಮಗೆ ಎಲ್ಲಿ ಹಕ್ಕಿದೆ ನ್ಯಾಯ ಎಲ್ಲಿದೆ ಎಂದು ಇಂಥವರಿಗೆ ಮತ ಹಾಕಿರುವ ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಅಮಿತ್ ಶಾಗೆ ಮಾನ, ಮರ್ಯಾದೆ ಇದ್ದರೆ ಈ ಕೂಡಲೇ ಅವರು ರಾಜೀನಾಮೆ ನೀಡಬೇಕು” ಎಂದು ಹೇಳಿದರು.
ದಸಂಸ ರಾಜ್ಯ ಪ್ರಧಾನ ಸಂಚಾಲಕಿ ನಿರ್ಮಲಾ ಮಾತನಾಡಿ, “ನಮ್ಮ ಸಂವಿಧಾನ ಕರ್ತೃ ಅಂಬೇಡ್ಕರ್ ಅವರಿಗೆ ಅಪಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಈ ಕೂಡಲೇ ಮಂತ್ರಿಗಿರಿಯಿಂದ ವಜಾಗೊಳಿಸಬೇಕು. ದೇಶದ ಉನ್ನತ ಸ್ಥಾನದಲ್ಲಿರುವ ಅಮಿತ್ ಶಾ ಅಂಬೇಡ್ಕರ್ ಅವರ ಬಗ್ಗೆ ಸಂಸತ್ ಕಲಾಪದ ಸಮಯದಲ್ಲಿ ಈ ರೀತಿ ಮಾತಾಡಿರುವುದು ನಿಜಕ್ಕೂ ಖಂಡನೀಯ. ಅಮಿತ್ ಶಾಗೆ ತಲೆಲಿ ಕೂದಲು ಇಲ್ಲ ಅಂತ ಗೊತ್ತಿತ್ತು. ಆದರೆ, ಆತನ ತಲೆಯಲ್ಲಿ ಮಿದುಳು ಕೂಡ ಇಲ್ಲ. ಬುದ್ದಿ ಇಲ್ಲದ ಅಮಿತ್ ಶಾ” ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಅಮಿತ್ ಶಾ ಹೇಳಿಕೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್‌ನಿಂದ ‘ಅಂಬೇಡ್ಕರ್ ಸಮ್ಮಾನ್ ಮಾರ್ಚ್’
“ಅಂಬೇಡ್ಕರ್ ಅನ್ನೋದು ಒಂದು ವ್ಯಸನ ಅಂತ ಮುಟ್ಟಾಳ ಅಮಿತ್ ಶಾ ಹೇಳುತ್ತಾನೆ. ಆತನಿಗೆ ಅಂಬೇಡ್ಕರ್ ಅವರ ಬಗ್ಗೆ, ಸಂವಿಧಾನದ ಬಗ್ಗೆ ಏನು ಗೊತ್ತಿದೆ? ಅಮಿತ್ ಶಾಗೆ ನಿಜಕ್ಕೂ ಮಾನ ಮರ್ಯಾದೆ ಇದ್ದರೆ, ದಲಿತರ ಮಲ ಮೂತ್ರದಿಂದ ತನ್ನ ನಾಲಿಗೆಯನ್ನು ಶುದ್ದ ಮಾಡಿಕೊಳ್ಳಲಿ. ಗೋ ಮೂತ್ರದಿಂದ ಅವರ ನಾಲಿಗೆ ಶುಚಿಯಾಗುವುದಿಲ್ಲ. ಕಲಾಪದಲ್ಲಿ ಹೆಣ್ಣಿನ ಬಗ್ಗೆ ನೀಚವಾಗಿ ಮಾತಾಡುತ್ತಾರೆ. ಇಡೀ ಪ್ರಪಂಚ ಈ ವಿಚಾರವಾಗಿ ರೊಚ್ಚಿಗೇಳಬೇಕು. ಇನ್ನೊಂದು ಬಾರಿ ಸಂವಿಧಾನದ ಬಗ್ಗೆ, ಅಂಬೇಡ್ಕರ್ ಅವರ ಬಗ್ಗೆ ಮಾತಾಡಿದರೆ, ಅವರಿಗೆ ಚಪ್ಪಲಿ ಹಾರ ಹಾಕುತ್ತೀವಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.