ಶ್ರೀಮಂತರಿಗೆ ಬೆಣ್ಣೆ, ಬಡವರಿಗೆ ಸುಣ್ಣ: ಇದು ನಿರ್ಮಲಾ ಸೀತಾರಾಮನ್‌ ಆರ್ಥಿಕ ನೀತಿ

Date:

Advertisements

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಭಾರತದ ವಸ್ತುಗಳ ಮೇಲೆ ಹೆಚ್ಚು ತೆರಿಗೆ ವಿಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇದಲ್ಲದೆ ಅತೀ ಹೆಚ್ಚು ಸಂಬಳ ಪಡೆಯುವವರು ಇಲ್ಲಿಂದ ಹೊರಡಿ ಎಂದು ಅಧಿಕಾರ ಸ್ವೀಕರಿಸುವ ಮುನ್ನವೇ ಫಾರ್ಮಾನು ಹೊರಡಿಸಿದ್ದಾರೆ. ಇವೆಲ್ಲವು ವಿದೇಶದಲ್ಲಿ ಉದ್ಯೋಗದ ನಿಮಿತ್ತ ನೆಲಸಿರುವ ಭಾರತೀಯರಿಗೆ ಗಂಡಾಂತರದ ಸೂಚನೆಯಾಗಿದೆ

ನಿರ್ಮಲಾ ಸೀತಾರಾಮನ್‌ ಕೇಂದ್ರದ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡು ಆರು ವರ್ಷಗಳಾಯಿತು. ದೇಶ ಅಭಿವೃದ್ಧಿಯಾಗುತ್ತದೆ, ಹಣದುಬ್ಬರ ಇಳಿಕೆಯಾಗುತ್ತದೆ, ಬಡವರೆಲ್ಲ ಶ್ರೀಮಂತರಾಗುತ್ತಾರೆ, ಡಾಲರ್‌ ರೂಪಾಯಿ ಎದುರು ನೆಲಕಚ್ಚುತ್ತದೆ, ಬೆಲೆಗಳೆಲ್ಲ ಕೆಳಗಿಳಿಯುತ್ತವೆ, ಕಪ್ಪು ಹಣವನ್ನು ಇಲ್ಲದವರಿಗೆ ನೀಡಿ ರಾಷ್ಟವನ್ನು ಸುಭಿಕ್ಷೆಗೊಳಿಸುತ್ತೇವೆ ಎಂದು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಳ್ಳಲಾಯಿತು. ಆದರೆ ಮೊದಲ ದಿನದಿಂದ ಇಲ್ಲಿಯವರೆಗೂ ಯಾವುದೇ ಪ್ರಗತಿಯಾಗಿಲ್ಲ. ಸಾಮಾನ್ಯ ಜನರು ಖರೀದಿಸುವ ಬೆಲೆಗಳೆಲ್ಲವೂ ಗಗನ ಮುಟ್ಟುತ್ತಲೇ ಇದೆ. ಹಣದುಬ್ಬರ ಕಿಂಚಿತ್ತೂ ಸಡಿಲವಾಗಿಲ್ಲ. ಮಧ್ಯಮ ವರ್ಗದವರ ಆದಾಯವು ಏರಿಕೆಯಾಗದೆ ಅವರ ಜೀವನಮಟ್ಟವು ಕುಸಿಯುತ್ತಿದೆ. ಬಡವರ ಬದುಕು ದುಸ್ತರವಾಗಿದೆ. ಉದ್ಯೋಗಗಳಂತೂ 6 ವರ್ಷವಿರಲಿ 10 ವರ್ಷಗಳಿಂದ ಭರ್ತಿಯಾಗಿಲ್ಲ. ದೇಶದ ವರಮಾನ ಹೆಚ್ಚಿಸುವ ನೆಪದಲ್ಲಿ ರಾಜ್ಯಗಳ ಆರ್ಥಿಕ ಅಧಿಕಾರ ಕಸಿದುಕೊಳ್ಳಲು ಸರಕು ಸೇವಾ ತೆರಿಗೆ(ಜಿಎಸ್‌ಟಿ) ಆರಂಭಿಸಲಾಗಿದೆ.

ಜಿಎಸ್‌ಟಿ ತೆರಿಗೆಯಿಂದ ಶ್ರೀಮಂತರಿಗೆ ಅನುಕೂಲವಾಯಿತೆ ಹೊರತು ಬಡವರಿಗೆ ನಯಾಪೈಸೆ ಉಪಯೋಗವಾಗಲಿಲ್ಲ. ಪ್ರತಿ ಜಿಎಸ್‌ಟಿ ಮಂಡಳಿಯಲ್ಲಿ ಸಾಮಾನ್ಯ ಜನರು ದಿನನಿತ್ಯ ಉಪಯೋಗಿಸುವ ವಸ್ತುಗಳಿಗೆ ತೆರಿಗೆ ಏರಿಸಲಾಗುತ್ತಿದೆ. ಹಣವಂತರು ಹಾಗೂ ದೊಡ್ಡ ಉದ್ಯಮಿಗಳು ಬಳಸುವ ಪರಿಕರಗಳಿಗೆ ವಿನಾಯಿತಿ ನೀಡಲಾಗುತ್ತಿದೆ. ಜಿಎಸ್‌ಟಿ ಬಗೆಗಿನ ಸಂಕೀರ್ಣತೆಗಳ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಾರ್ವಜನಿಕರಾಗಲಿ, ಅರ್ಥಶಾಸ್ತ್ರಜ್ಞರಾಗಲಿ, ಸಣ್ಣ ಉದ್ಯಮಿಗಳಾಗಲಿ ಪ್ರಶ್ನಿಸಿದರೆ ಗದರಿಸಿ, ಬೆದರಿಸಿ, ವ್ಯಂಗ್ಯ-ಉಡಾಫೆಯಿಂದ ಉತ್ತರ ನೀಡುತ್ತಾರೆ. ಹಣಕಾಸು ಸಚಿವೆ ಇಲ್ಲಿಯವರೆಗೂ ದೇಶದ ಆರ್ಥಿಕತೆಯನ್ನು ಹೆಚ್ಚಿಸುವ, ನಿರುದ್ಯೋಗಗಳನ್ನು ನಿವಾರಿಸಿ ಉದ್ಯೋಗಗಳನ್ನು ಸೃಷ್ಟಿಸುವ ಒಂದೇ ಒಂದು ಕೆಲಸವನ್ನು ಮಾಡಿಲ್ಲ.

Advertisements

ಉದ್ಯೋಗವಿಲ್ಲದೆ, ಬೆಲೆಗಳು ಕಡಿಮೆಯಾಗದೆ ಬಡವರು ಹಾಗೂ ಮಧ್ಯಮ ವರ್ಗದವರು ಹಣ ಉಳಿಸುವುದಾಗಲಿ ಅಥವಾ ಗಳಿಸುವುದಾಗಲಿ ಸಾಧ್ಯವಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್‌ ಆರ್ಥಿಕ ನೀತಿ ಖಾಸಗಿ ಉದ್ಯಮಿಗಳಿಗೆ ಬೆಂಬಲ ನೀಡುವುದು, ಅವರಿಗೆ ರಿಯಾಯಿತಿ, ಸಬ್ಸಿಡಿ, ಬೇಕಾದಷ್ಟು ಸಾಲವನ್ನು ನೀಡುವುದಾಗಿದೆ. ಇತ್ತೀಚಿನ ಆರ್‌ಬಿಐ ಅಂಕಿಅಂಶಗಳಂತೆ ಆಹಾರ ಹಣದುಬ್ಬರ ಶೇ. 10 ರಷ್ಟು ಏರಿಕೆಯಾಗಿದ್ದರೆ, ಚಿಲ್ಲರೆ ಹಣದುಬ್ಬರ ಶೇ.6 ರಷ್ಟಿದೆ. ಆಹಾರ ಪದಾರ್ಥಗಳ ಹೆಚ್ಚಳದಿಂದಾಗಿ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಕಳೆದ 9 ತಿಂಗಳಲ್ಲೇ ಅತ್ಯಂತ ಗರಿಷ್ಠ ಮಟ್ಟ ಮುಟ್ಟಿತ್ತು. ಈ ವರ್ಷಕ್ಕೆ ಜಿಡಿಪಿ ಗುರಿ ಶೇ.7ಕ್ಕೆ ಇಟ್ಟುಕೊಳ್ಳಲಾಗಿದ್ದರೂ ಹಾಲಿ ಸ್ಥಿತಿ ಮಾತ್ರ ಶೇ.5.4 ರಷ್ಟಿದೆ. ಇವೆಲ್ಲವು ಆರ್ಥಿಕತೆಯ ದುಸ್ಥಿತಿ ಸೂಚಿಸುತ್ತದೆ.

ಶೇ.82 ರಷ್ಟು ನಿರುದ್ಯೋಗಿಗಳು

ದೇಶದಲ್ಲಿ ನಿರುದ್ಯೋಗ ಪ್ರಮಾಣ ವರ್ಷದಿಂದ ವರ್ಷಕ್ಕೆ ಭಯಾನಕ ಸ್ಥಿತಿ ತಲುಪುತ್ತಿದೆ. ರಾಷ್ಟ್ರದ 25 ವರ್ಷದೊಳಗಿನ ಶೇ. 82 ಮಂದಿಗೆ ಉದ್ಯೋಗವಿಲ್ಲ. ಡಿ ಗ್ರೂಪಿನ ಸಣ್ಣ ಸಹಾಯಕ ಹುದ್ದೆಗೆ ಸ್ನಾತಕೋತ್ತರ ಪದವೀಧರರು, ಇಂಜಿನಿಯರಿಂಗ್‌ ಪದವೀಧರರು ಅರ್ಜಿ ಸಲ್ಲಿಸುತ್ತಿದ್ದಾರೆ. ನಿರುದ್ಯೋಗವನ್ನು ಹತೋಟಿಗೆ ತರಲು 2006ರಲ್ಲಿ ಜಾರಿಗೊಳಿಸಲಾಗಿದ್ದ ಮನರೇಗ ಕಾರ್ಯಕ್ರಮವನ್ನು ವರ್ಷದಿಂದ ವರ್ಷಕ್ಕೆ ದುರ್ಬಲಗೊಳಿಸಲಾಗುತ್ತಿದೆ. ಉದ್ಯೋಗ ಭತ್ಯೆಯನ್ನು ಕೂಡ ಕಡಿತಗೊಳಿಸಲಾಗುತ್ತಿದೆ. ನೀಡುತ್ತಿರುವ ಅನುದಾನವನ್ನು ಪ್ರತಿ ಆಯವ್ಯಯದಲ್ಲಿ ಕಡಿಮೆಗೊಳಿಸಲಾಗುತ್ತಿದೆ. ಮನರೇಗದಿಂದ ಒಂದಿಷ್ಟು ಮಂದಿ ಇಂತಿಷ್ಟು ದಿನ ಉದ್ಯೋಗ ಪಡೆದುಕೊಳ್ಳುತ್ತಿದ್ದರು. ಕಾಂಗ್ರೆಸ್ ಜಾರಿಗೊಳಿಸಿದ ಯೋಜನೆ ಎಂಬ ಕಾರಣಕ್ಕೆ ಅರ್ಥ ಸಚಿವರು ಈ ಯೋಜನೆಯ ಮೇಲೂ ಕಣ್ಣಿಟ್ಟು ಮುಕ್ತಿ ನೀಡಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಶ್ರೀಮಂತರಿಗೆ ತೆರಿಗೆ ವಿನಾಯಿತಿಗಳು, ಸಾಲ ಮನ್ನಾ ನಿರ್ಮಲಾ ಸೀತಾರಾಮನ್‌ ಅಧಿಕಾರಾವಧಿಯಲ್ಲಿ ಎಗ್ಗಿಲ್ಲದೆ ಸಾಗಿದೆ. ಇವೆಲ್ಲವೂ ಕೇಂದ್ರ ಸರ್ಕಾರವೇ ನೀಡಿದ ಅಂಕಿಅಂಶಗಳಿಂದ ಸಾಬೀತಾಗಿದೆ.

ಕೇಂದ್ರ ಸರ್ಕಾರದ ದುರ್ಬಲ ಹಣಕಾಸು ಯೋಜನೆಗಳಿಂದ 12 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ದೇಶದ ಶೇ. 10ರಷ್ಟಿರುವ ಅತಿ ಶ್ರೀಮಂತರು ಜಿಎಸ್‌ಟಿ ರೂಪದಲ್ಲಿ ಪಾವತಿಸಿದ ತೆರಿಗೆ ಪ್ರಮಾಣ ಶೇ. 3ರಷ್ಟು ಮಾತ್ರ. ಈ ವರ್ಗವು ಕಡಿಮೆ ಪ್ರಮಾಣದ ತೆರಿಗೆ ಪಾವತಿಸುತ್ತಿರುವ ಕಾರಣ, ಅವರ ಸಂಪತ್ತು ಹೆಚ್ಚಾಗುತ್ತಲೇ ಇದೆ. ಬಡವರು ತಮ್ಮ ಆದಾಯದಲ್ಲಿ ಬಹು ಪಾಲು ಪರೋಕ್ಷ ತೆರಿಗೆಯನ್ನು ಪಾವತಿಸುವ ಕಾರಣ, ಅವರ ಸಂಪತ್ತು ಇಳಿಕೆಯಾಗುತ್ತಲೇ ಇದೆ. ಉಳಿತಾಯ ಮಾಡಲು ಸಾಧ್ಯವಾಗದೆ ವಿವಿಧ ರೀತಿಯ ಸಾಲದ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿ ವರ್ಷ ಸಂಗ್ರಹವಾಗುವ ಜಿಎಸ್‌ಟಿಯಲ್ಲಿ ಅತಿ ಹೆಚ್ಚು ಕೊಡುಗೆ ನೀಡುವವರು ಬಡವರು ಹಾಗೂ ಮಧ್ಯಮವರ್ಗದವರು. ಕಡಿಮೆ ಸಂಪತ್ತು ಹೊಂದಿರುವ ಮತ್ತು ಕಡಿಮೆ ಆದಾಯ ಹೊಂದಿರುವ ಈ ವರ್ಗ ತನ್ನ ಆದಾಯದ ದೊಡ್ಡ ಭಾಗವನ್ನು ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ನೀಡುತ್ತಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹವಾಮಾನ ವೈಪರೀತ್ಯ, ಸಾಮೂಹಿಕ ವಲಸೆ ಮತ್ತು ಅಭಿವೃದ್ಧಿ ಮಂತ್ರ

ದೇಶದ ಒಟ್ಟು ಜನಸಂಖ್ಯೆಯ ಶೇಕಡ 1ರಷ್ಟಿರುವ ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ ಶೇ. 40ರಷ್ಟು ಸಂಪತ್ತು ಇದ್ದರೆ, 70 ಕೋಟಿಗೂ ಹೆಚ್ಚು ಜನರಿರುವ ಸಾಮಾನ್ಯ ಜನರ ಬಳಿ ರಾಷ್ಟ್ರದ ಒಟ್ಟು ಸಂಪತ್ತಿನ ಶೇ. 3ರಷ್ಟು ಮಾತ್ರ ಇದೆ. ಪ್ರತಿ ವರ್ಷವು ಇವರ ಆದಾಯ ಮಟ್ಟ ಕುಸಿಯುತ್ತಲೇ ಇದೆ. ಅತಿ ಶ್ರೀಮಂತರ ಪರವಾದ ತೆರಿಗೆ ನೀತಿಯ ಪರಿಣಾಮದಿಂದ ಈ ಜನರ ಆದಾಯ ಇಳಿಕೆಯಾಗುತ್ತಲೇ ಇದೆ. ಪರಿಣಾಮವಾಗಿ ದೇಶದ ಒಟ್ಟು ಸಂಪತ್ತಿನಲ್ಲಿ ಈ ಜನರ ಸಂಪತ್ತಿನ ಪಾಲು ಕುಸಿಯುತ್ತಿದೆ. ಇದೇ ಸಂದರ್ಭದಲ್ಲಿ ಶ್ರೀಮಂತರ ಆದಾಯ ಮಿತಿಮೀರಿ ಏರಿಕೆಯಾಗುತ್ತಿದೆ. ಭಾರತದಲ್ಲಿ ಕಳೆದ ಒಂದು ದಶಕದಿಂದ ಕಾರ್ಪೊರೇಟ್ ತೆರಿಗೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಇದಲ್ಲದೆ ಕಾರ್ಪೊರೇಟ್ ಕಂಪನಿಗಳಿಗೆ ಹಲವು ಭತ್ಯೆ ಮತ್ತು ವಿನಾಯಿತಿಗಳನ್ನು ಘೋಷಿಸಲಾಗಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ತೆರಿಗೆ ಕಡಿತ ಮತ್ತು ಭತ್ಯೆಗಳ ಕಾರಣ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ನಷ್ಟವಾಗುತ್ತಿದೆ. ಈ ನಷ್ಟವನ್ನು ಸರಿದೂಗಿಲು ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರವು ಜಿಎಸ್‌ಟಿ ಸೇರಿದಂತೆ ಬಡವರು ಉಪಯೋಗಿಸುವ ವಸ್ತುಗಳ ಮೇಲೆ ತೆರಿಗೆಗಳನ್ನು ವಿಧಿಸುತ್ತಿದೆ. ಇವೆಲ್ಲವೂ ನಿರ್ಮಲಾ ಸೀತಾಮನ್‌ ಕೊಡುಗೆ ಎಂದು ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.

ಕೇಂದ್ರ ಹಣಕಾಸು ಸಚಿವೆ ಹೆಚ್ಚು ಲಾಭ ತರುವ ಕಾರ್ಪೊರೇಟ್ ತೆರಿಗೆ ಹೆಚ್ಚಿಸುವ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇದರ ಬದಲಿಗೆ ಪರೋಕ್ಷ ತೆರಿಗೆಯನ್ನು ಹೆಚ್ಚಿಸುವ ಮೂಲಕ ಆದಾಯವನ್ನು ಸುಧಾರಿಸಲು ಗಮನಹರಿಸಿದೆ. ಕಾರ್ಪೊರೇಟ್ ತೆರಿಗೆ ಕಡಿತದಿಂದ ದೇಶದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ತೆರಿಗೆಯನ್ನು ವಿಧಿಸಿದರೆ ಅದರಿಂದ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂಬ ವಾದವನ್ನು ಅರ್ಥ ಸಚಿವರು ಮುಂದಿಟ್ಟು, ತೆರಿಗೆ ಕಡಿತಗೊಳಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಬಡವರು ಮತ್ತು ಕೆಳ ಮಧ್ಯಮ ವರ್ಗದವರು ನಿತ್ಯಬಳಸುವ ವಸ್ತುಗಳ ಮೇಲೆ ಹೆಚ್ಚು ಜಿಎಸ್‌ಟಿ ಪಾವತಿಸಬೇಕಿದೆ. ತಮ್ಮ ದುಡಿಮೆಯ ಬಹುತೇಕ ಭಾಗವನ್ನು ಈ ರೀತಿ ತೆರಿಗೆ ಪಾವತಿಸಲೇ ಈ ವರ್ಗವು ಬಳಸುತ್ತಿದೆ. ಇದರಿಂದ ಈ ಜನರ ವೆಚ್ಚದ ಸಾಮರ್ಥ್ಯ ಇಳಿಕೆಯಾಗಿದೆ. ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿಲ್ಲ. ಈ ತೆರಿಗೆ ಪದ್ಧತಿಯು ದೇಶದ ಆರ್ಥಿಕತೆಗೆ ಪ್ರತಿಕೂಲವಾಗಿ ಪರಿಣಮಿಸಿದೆ. ದೇಶದ ಅತಿ ಶ್ರೀಮಂತರ ಸಂಪತ್ತಿನ ಮೇಲೆ ಅಲ್ಪ ಪ್ರಮಾಣದ ತೆರಿಗೆ ವಿಧಿಸಿದರೂ, ಸರ್ಕಾರದ ತೆರಿಗೆ ಆದಾಯ ಗಣನೀಯವಾಗಿ ಏರಿಕೆಯಾಗಲಿದೆ. ಆದರೆ ಸರ್ಕಾರದ ಕಣ್ಣು ಮಾತ್ರ ಬಡವರ ಮೇಲಿದೆ.   

ಹಣದುಬ್ಬರ ದುಸ್ಥಿತಿಯಲ್ಲಿರುವ ಕಾರಣ ರೂಪಾಯಿ ಎದುರು ಡಾಲರ್‌, ಪೌಂಡ್‌ ಸೇರಿದಂತೆ ಅಂತಾರಾಷ್ಟ್ರೀಯ ಕರೆನ್ಸಿಗಳು ಏರಿಕೆಯಾಗುತ್ತಲೇ ಇದೆ. ನೂತನವಾಗಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಭಾರತದ ವಸ್ತುಗಳ ಮೇಲೆ ಹೆಚ್ಚು ತೆರಿಗೆ ವಿಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇದಲ್ಲದೆ ಅತೀ ಹೆಚ್ಚು ಸಂಬಳ ಪಡೆಯುವವರು ಇಲ್ಲಿಂದ ಹೊರಡಿ ಎಂದು ಅಧಿಕಾರ ಸ್ವೀಕರಿಸುವ ಮುನ್ನವೇ ಫಾರ್ಮಾನು ಹೊರಡಿಸಿದ್ದಾರೆ. ಇವೆಲ್ಲವು ವಿದೇಶದಲ್ಲಿ ಉದ್ಯೋಗದ ನಿಮಿತ್ತ ನೆಲಸಿರುವ ಭಾರತೀಯರಿಗೆ ಗಂಡಾಂತರದ ಸೂಚನೆಯಾಗಿದೆ. ಈ ದೇಶದ ಅತಿ ದೊಡ್ಡ ಸಮಸ್ಯೆ ನಿರುದ್ಯೋಗ, ಬಡತನವಾಗಿದೆ. ಭಾರತದ ಸುಶಿಕ್ಷಿತ ಯುವಕರಿಗೆ ನಿರುದ್ಯೋಗಿಗಳಾಗಿರುವ ಸ್ಥಿತಿಯೇ ಹೆಚ್ಚು ಎಂಬುದನ್ನು ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ವರದಿಗಳು ಹೇಳುತ್ತಿವೆ. ಇದಕ್ಕೆ ಕಾರಣ ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ದೇಶದ ಬಹುತೇಕ ಜನ ತೀವ್ರ ಬಡತನದಲ್ಲಿದ್ದಾರೆ. ನೂರಾರು ಸಮಸ್ಯೆಗಳಿದ್ದರೂ ನಿರ್ಮಲಾ ಸೀತಾರಾಮನ್‌ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ವಿತಂಡ ವಾದ ಮಂಡಿಸುತ್ತಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶವು ಅವಸಾನದ ಹಂಚಿಗೆ ತಳ್ಳಲ್ಪಡುತ್ತದೆ ಎಂಬುದು ಆರ್ಥಿಕ ತಜ್ಞರ ಭೀತಿಯಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X