ಅಪಘಾತಕ್ಕೀಡಾಗಿ ‘ಬ್ರೈನ್ ಡೆಡ್’ ಆಗಿದ್ದ ಯುವಕನ ಮೂಳೆಯನ್ನು ಆತನ ಕುಟುಂಬಸ್ಥರು ದಾನ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಆತನ ಮೂಳೆಗಳನ್ನು ಕ್ಯಾನ್ಸರ್‌ಗೆ ತುತ್ತಾಗಿದ್ದ ಆರು ಮಕ್ಕಳ ಕಾಲುಗಳಿಗೆ ಅಳವಡಿಸಲಾಗುತ್ತಿದ್ದು, ಆ ಮಕ್ಕಳು ಓಡಾಡಲು ಸಾಧ್ಯವಾಗುವಂತಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದ ಯುವಕ ಈಶ್ವರ್ ಇತ್ತೀಚೆಗೆ ಅಪಘಾತಕ್ಕೀಡಾಗಿದ್ದರು. ಅಪಘಾತದಲ್ಲಿ ಅವರ ‘ಬ್ರೈನ್ ಡೆಡ್’ ಆಗಿತ್ತು. ಆ ಯುವಕನ ಕೈ ಮತ್ತು ಕಾಲುಗಳ ಮೂಳೆಗಳನ್ನು ದಾನ ಮಾಡುವಂತೆ ವೈದ್ಯರು ಕುಟುಂಬಸ್ಥರ ಮನವೊಲಿಸಿದ್ದಾರೆ. ಯುವಕನ ಫೋಷಕರು ಆತನ ಮೂಳೆಗಳನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಎಲುಬು ಮತ್ತು ಕೀಲು ರೋಗ ವಿಭಾಗದ ಮುಖ್ಯಸ್ಥ ಡಾ.ವಿಕ್ರಮ್ ಶೆಟ್ಟಿ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಯುವಕನ ಮೂಳೆಗಳನ್ನು ಸಂಗ್ರಹಿಸಲಾಗಿದೆ. ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 6 ಮಕ್ಕಳ ಕಾಲುಗಳಿಗೆ ಅಳವಡಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.