ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬುಧವಾರ ನಡೆದಿದೆ.
ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ, ತನ್ನ ಸ್ನೇಹಿತನೊಂದಿಗೆ ವಿದ್ಯಾರ್ಥಿನಿ ಕ್ಯಾಂಪಸ್ ಹಾಸ್ಟೆಲ್‌ಗೆ ಮರಳುತ್ತಿದ್ದರು. ಈ ವೇಳೆ, ಅವರನ್ನು ಅಡ್ಡಗಟ್ಟಿರುವ ಇಬ್ಬರು ಕಾಮುಕರು ಆಕೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಕೋತ್ತೂರ್‌ಪುರಂ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 64ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಿನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಡಿಎಂಕೆ ಸರ್ಕಾರದಡಿ ತಮಿಳುನಾಡು ಕಾನೂನುಬಾಹಿರ ಚಟುವಟಿಕೆಗಳ ತಾಣವಾಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷಿತ ಭಾವನೆ ಇಲ್ಲ. ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಪ್ರತಿಪಕ್ಷಗಳನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.