ಕಲಬುರಗಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ -151ರ ಗೊಬ್ಬೂರ್(ಬಿ) ಗ್ರಾಮದ ಸಮೀಪ ಬುಧವಾರ ಸಂಜೆ ಟಿಟಿ, ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ನಡೆದ ಸರಣಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಕಲಬುರಗಿ ನಿವಾಸಿಗಳಾದ ಅನೂಪ್ , ವಿನಿತಾ ಹಾಗೂ ಗೊಬ್ಬುರ(ಬಿ) ಗ್ರಾಮದ ಬಸವರಾಜ್ ಮೃತರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿಯಿಂದ ಅನೂಪ್, ವಿನಿತಾ ಸೇರಿ ಒಟ್ಟು 8 ಜನರು ಟೆಂಪೊ ಟ್ರಾವೆಲ್ ವಾಹನದಲ್ಲಿ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕೆ ತೆರಳಿದ್ದರು. ದರ್ಶನ ಮುಗಿಸಿಕೊಂಡು ಸಂಜೆ ವಾಪಸ್ ಬರುವಾಗ ಗೊಬ್ಬರು(ಬಿ) ಗ್ರಾಮ ಸಮೀಪ ಟಿಟಿ ಚಾಲಕ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದರು. ಇದೇ ವೇಳೆ ದ್ವಿಚಕ್ರ ವಾಹನ ಸವಾರನೂ ಸಿಲುಕಿಕೊಂಡು ಸಾವನಪ್ಪಿದ್ದಾರೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಟಿಟಿ ವಾಹನದಲ್ಲಿದ್ದ ವಿನಿತಾ, ಅನುಪ್ ಹಾಗೂ ದ್ವಿಚಕ್ರ ಸವಾರ ಕೊನೆಯುರೆಳೆದಿದ್ದಾರೆ. ಟಿಟಿಯಲ್ಲಿದ್ದ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟ ದಿನ
ವಿಷಯ ತಿಳಿದು ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ನೇತ್ರತ್ವದ ತಂಡ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.