ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡ ಯುವಕನೊಬ್ಬ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾಲ್ಕಿ ತಾಲ್ಲೂಕಿನ ಮೆಹಕರ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಭಾಲ್ಕಿ ತಾಲ್ಲೂಕಿನ ಸಾಯಗಾಂವ ಗ್ರಾಮದ ಸಮೀಪ ಜ್ಯೋತಿ ತಾಂಡಾ ಬಳಿ ಘಟನೆ ಜರುಗಿದ್ದು, ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದ ವಿಜಯಕುಮಾರ್ ಹೊಳ್ಳೆ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ.
ಡಿ. ಫಾರ್ಮ್ ಪದವೀಧರನಾದ ಯುವಕ ಬೀದರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳಿಂದ ಆನ್‌ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಸಿಲುಕಿ ₹1.50 ಲಕ್ಷ ಹಣ ಕಳೆದುಕೊಂಡಿದ್ದ. ಎರಡ್ಮೂರು ದಿನಗಳಲ್ಲಿ ಹಣ ಕೊಡುತ್ತೇವೆ ಎಂದು ಪೋಷಕರು ಹೇಳಿದ್ದರು. ಆದರೆ ಸಾಲಕ್ಕೆ ಹೆದರಿದ ಯುವಕ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಿಜಯಕುಮಾರ್ ಈ ಹಿಂದೆ ಕೂಡ ಆನ್‌ಲೈನ್ ಗೇಮಿಂಗ್‌ನಲ್ಲಿ ₹7-8 ಲಕ್ಷ ಹಣ ಕಳೆದುಕೊಂಡಿದ್ದ, ಅದನ್ನು ಪೋಷಕರು ತೀರಿಸಿದ್ದಾರೆ ಎಂಬ ಮಾಹಿತಿ ಇದೆ. ಮತ್ತೆ ಈಗ ಆನ್‌ಲೈನ್ ಆಟದಲ್ಲಿ ಹಣ ಕಳೆದುಕೊಂಡ ಯುವಕ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮೆಹಕರ್ ಠಾಣೆ ಪಿಎಸ್‌ಐ ಶಿವಕುಮಾರ್ ಬಳತೆ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಶೇ.80% ಸುಟ್ಟ ಗಾಯಗಳಿಂದ ನರಳುತ್ತಿದ್ದ ಯುವಕನನ್ನು ಸ್ಥಳೀಯರು ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೀದರ್ ಬ್ರಿಮ್ಸ್‌ಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಯುವಜನರ ಜೀವಕ್ಕೆ ಕುತ್ತು ತರುತ್ತಿರುವ ಮೋಸದಾಟ: ಆನ್‌ಲೈನ್ ಗೇಮಿಂಗ್ ಬಗ್ಗೆ ಇರಲಿ ಎಚ್ಚರ
ಮೆಹಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.