ಕೆಲಸದ ಸಮಯದ ಬಗ್ಗೆ ಪದೇ-ಪದೇ ಹೇಳಿಕೆ ಕೊಡುತ್ತಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಿವಾದ, ಚರ್ಚೆಯ ವಸ್ತುವಾಗಿದ್ದಾರೆ. ಅವರ ಹೇಳಿಕೆಗಳ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ, ಕೆಲ ಉದ್ಯಮಿಗಳೂ ಕೂಡ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಈ ಹಿಂದೆ, ನಾರಾಯಣ ಮೂರ್ತಿ ಅವರು ಉದ್ಯೋಗಿಗಳು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದ್ದರು. ಇತ್ತೀಚೆಗೆ ಕೋಲ್ಕತ್ತಾದಲ್ಲಿ ಮಾತನಾಡಿದ್ದ ಅವರು, ಭಾರತವನ್ನು ನಂಬರ್ ಒನ್ ಮಾಡಲು ಮತ್ತು ತಾವೂ ಬಡತನದಿಂದ ಹೊರಬರಲು ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು.
ಅವರ ಹೇಳಿಕೆ ಶ್ರಮ ಹೀರುವ ಸಂಸ್ಕೃತಿ ಪ್ರತಿಬಿಂಬವಾಗಿದೆ ಎಂದು ಹೋರಾಟಗಾರರು, ಉದ್ಯೋಗಗಳು, ಚಿಂತಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ, ಹಲವು ಉದ್ಯಮಗಳೂ ಕೂಡ ನಾರಾಯಣ ಮೂರ್ತಿ ಅವರ ಹೇಳಿಕೆಯ ವಿರುದ್ಧ ಮಾತನಾಡಿದ್ದಾರೆ. Shaadi.com ನ ಸಿಇಒ ಅನುಪಮ್ ಮಿತ್ತಲ್ ಮತ್ತು ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಿಇಒ ನಮಿತಾ ಥಾಪರ್ ಅವರು ಮೂರ್ತಿ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.
ನಮಿತಾ ಥಾಪರ್ ಅವರು ‘ಹ್ಯೂಮನ್ಸ್ ಆಫ್ ಬಾಂಬೆ’ಗೆ ಸಂದರ್ಶನ ನೀಡಿದ್ದು, “ನಾವು ಮಾಲೀಕರು. ನಾವು ಟನ್‌ಗಟ್ಟಲೆ ಕೆಲಸ ಮಾಡಬಹುದು. ದಿನದ 24 ಗಂಟೆಯೂ ಕೆಲಸ ಮಾಡಬಹುದು. ಆದರೆ, ಉದ್ಯೋಗಿಗಳ ಕತೆ ಏನು? ಸಂಸ್ಥೆಯ ಸಂಸ್ಥಾಪಕರ ಕೆಲಸಕ್ಕೂ ಉದ್ಯೋಗಳ ಕೆಲಸಕ್ಕೂ ವ್ಯತ್ಯಾಸವಿರುತ್ತದೆ. ಇಬ್ಬರಿಂದಲೂ ಒಂದೇ ರೀತಿಯ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಅವರ ಮೇಲೆ ಹೆಚ್ಚು ಒತ್ತಡ ಹೇರಿದಂತೆ ಆಗುತ್ತದೆ” ಎಂದು ಹೇಳಿದ್ದಾರೆ.
“ಸಂಸ್ಥೆಗಳ ಸ್ಥಾಪಕರು ಮತ್ತು ಹೆಚ್ಚು ಪಾಕು ಹೊಂದಿರುವವರಿಗೆ ಲಾಭ ಗಳಿಕೆ ಆಧ್ಯತೆಯಾಗಿರುತ್ತದೆ. ತಮ್ಮ ಗಮನಾರ್ಹ ಆರ್ಥಿಕ ಹೂಡಿಕೆಗಳ ಕಾರಣದಿಂದಾಗಿ ಹೆಚ್ಚಿನ ಅವಧಿಯ ಕೆಲಸ ಮಾಡಲು ಬಯಸುತ್ತಾರೆ. ಆದರೆ, ಇದೇ ಮಾನದಂಡವನ್ನು ಸಾಮಾನ್ಯ ಉದ್ಯೋಗಿಗಳ ಮೇಲೆ ಹೇರುವುದು ತಪ್ಪು. ಉದ್ಯೋಗಿಗಳಿಗೆ ಸಮಂಜಸವಾದ ಕೆಲಸದ ಸಮಯದ ಮಿತಿ ಇರಬೇಕು” ಎಂದು ಥಾಪರ್ ವಾದಿಸಿದ್ದಾರೆ.
“ಅತಿ ಹೆಚ್ಚು ಸಮಯದ ಕೆಲಸವು ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಈ ಬಗ್ಗೆ ಎಚ್ಚರಿಕೆ ಇರಬೇಕು. ಹೆಚ್ಚು ಸಮತೋಲಿತ ಕೆಲಸದ ವೇಳಾಪಟ್ಟಿ ಇರಬೇಕು” ಎಂದು ಥಾಪರ್ ಒತ್ತಿ ಹೇಳಿದ್ದಾರೆ.