ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಡಕೇರಿ ಅಂಗನವಾಡಿ ಕೊಡಗು ಜಿಲ್ಲೆಯಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದ್ದು, ಮಾದರಿ ಕಲಿಕಾ ಕೇಂದ್ರವಾಗಿದೆ.
ಇಂದಿನ ಶೈಕ್ಷಣಿಕ ಪರಿಸ್ಥಿತಿ ಹೇಗಿದೆಯೆಂದರೆ ಕನ್ನಡ ಶಾಲೆಯಲ್ಲಿ ಓದಿಸುವುದೇ ಕೀಳರಿಮೆ ಎನ್ನುವ ಪರಿಸ್ಥಿತಿ ಉದ್ಭವವಾಗಿದೆ. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಸಿಲುಕಿ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸದೆ ಗಣನೀಯವಾಗಿ ಓದುವ ಮಕ್ಕಳ ಸಂಖ್ಯೆ ಇಳಿಯುತ್ತಿರುವ ಹೊತ್ತಿನಲ್ಲಿ ಕಬಡಕೇರಿ ಅಂಗನವಾಡಿ ಇಡೀ ಕೊಡಗಿನಲ್ಲಿಯೇ ಮಾದರಿಯಾಗಿದೆ.
ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಅಂಗನವಾಡಿ ಕಟ್ಟಡ ತೆರವುಗೊಳಿಸಿ 2022ರ ನವೆಂಬರ್ 25ರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರ್‌ಡಿಐಡಿಎಫ್ ಸ್ಥಳೀಯ ಗ್ರಾಮಸ್ಥರು ಹಾಗೂ ಬಾಲ ವಿಕಾಸ ಸಮಿತಿ
ನೆರವಿನಿಂದ ಸುಸಜ್ಜಿತವಾದ, ಎಲ್ಲ ಸೌಲಭ್ಯಗಳುಳ್ಳ ಮಾದರಿ ಅಂಗನವಾಡಿ ನಿರ್ಮಿಸಿದ್ದಾರೆ.

2023ನೇ ಸಾಲಿನಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಇದೇ ಅಂಗನವಾಡಿ ಕಾರ್ಯಕರ್ತೆ ತಂಸಿನ ಭಾನು ಎಂ ಇ ‘ಉತ್ತಮ ಅಂಗನವಾಡಿ ಕಾರ್ಯಕರ್ತೆ’ಯೆಂದು ಸನ್ಮಾನಿತರಾಗಿದ್ದು, ಹತ್ತು ಹಲವು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಕನ್ನಡ ಶಾಲೆಯೆಂದರೆ ಮೂಗು ಮುರಿಯುವ ಹೊತ್ತಿನಲ್ಲಿ ಹಳೆಯ ಕಟ್ಟಡ ತೆರವುಗೊಳಿಸಿ ಗ್ರಾಮಸ್ಥರ ನೆರವಿನಿಂದ ಸರ್ಕಾರದ ಯೋಜನೆಯಲ್ಲಿ ಅನುದಾನ ಪಡೆದು ಸ್ತ್ರೀಶಕ್ತಿ ಮಹಿಳಾ ಸಂಘ, ಹಿಂದೂ ರುದ್ರ ಭೂಮಿ ನಿರ್ವಾಹಕರು, ಹಿತೈಷಿಗಳು ಸೇರಿ
ಉತ್ತಮವಾದ, ಕೊಡಗು ಜಿಲ್ಲೆಯಲ್ಲಿ ಮಾದರಿಯಾದ ಅಂಗನವಾಡಿ ನಿರ್ಮಿಸಿ ಇಡೀ ಜಿಲ್ಲೆಯ ಗಮನ ಸೆಳೆದಿದ್ದಾರೆ.
ಇಲ್ಲಿಗೆ 2023ರ ಜನವರಿ ತಿಂಗಳಿನಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿಗಳಾಗಿದ್ದ ಉಮಾ ಮಹಾದೇವನ್ ಅವರು ಭೇಟಿ ಕೊಟ್ಟು ಹರ್ಷ ವ್ಯಕ್ತಪಡಿಸಿದ್ದು, ತಮ್ಮ X ಖಾತೆಯಲ್ಲಿ ಹಂಚಿಕೊಂಡು ಪ್ರಶಂಶಿಸಿದ್ದಾರೆ.
ಅಂಗನವಾಡಿ ಮುಂಭಾಗದಲ್ಲಿರುವ ಅಲ್ಪಸ್ವಲ್ಪ ಜಾಗದಲ್ಲಿ ಮಕ್ಕಳಿಗೆ ದೈನಂದಿನ ಅಗತ್ಯವಿರುವ ತರಕಾರಿ ಬೆಳೆದು ಅದರಿಂದಲೇ ಊಟ ತಯಾರಿ ಮಾಡುತ್ತಾರೆ. ಮಕ್ಕಳಿಗೆ ಆಟಿಕೆಗಳು, ಜಾರು ಬಂಡಿ, ಕಲಿಕೆಗೆ ಟಿವಿ, ಪುಟ್ಟ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಿರುವ ಯೋಜನೆಗಳನ್ನು ಹಮ್ಮಿಕೊಂಡು ಅಂಗನವಾಡಿ ಕಾರ್ಯಕರ್ತೆ ತಂಸಿನ ಭಾನು ವಿಶಿಷ್ಟವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ವಿಭಿನ್ನವಾಗಿ ಮಕ್ಕಳಿಗೆ ಹೊರಸಂಚಾರ ನಿಗದಿಪಡಿಸಿ ರೈತರ ಜಮೀನಿಗೆ ಕರೆದೊಯ್ದು ಭತ್ತದ ಕೊಯ್ಲು, ಭತ್ತದ ಒಕ್ಕಣಿಕೆ ಹೀಗೆ ಕೃಷಿಯ ಅರಿವು ಮೂಡಿಸುವಂತಹ ಕಾರ್ಯಗಳನ್ನು ಮಾಡುತ್ತಾರೆ. ಶಿಕ್ಷಣ ವಂಚಿತರಾಗಿರುವ ಅಸ್ಸಾಂ ವಲಸೆ, ಕೂಲಿ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತಂದು, ಪೋಷಕರಿಗೆ ಅರಿವು ಮೂಡಿಸಿ ಅಂಗನವಾಡಿಯಲ್ಲಿ ಕಲಿಸುವ ಕೆಲಸ ಮಾಡುತ್ತಿದ್ದಾರೆ.
ಪೋಸ್ಟ್ ಆಫೀಸ್, ಬ್ಯಾಂಕ್‌ಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಕಾರ್ಯ ನಿರ್ವಹಣೆ ವಿಧಾನ, ಬ್ಯಾಂಕ್ ಅಂದರೆ ಏನು,
ಪೋಸ್ಟ್ ಆಫೀಸ್ ಹೇಗಿರುತ್ತದೆ ಎಂಬುದರ ಕುರಿತು ಪ್ರಜ್ಞಾವಂತಿಕೆ ಕಲಿಸಿಕೊಡುವ ಕೆಲಸವಾಗುತ್ತಿದೆ.
ಪೋಷಣ್ ಅಭಿಯಾನದ ಪೂರಕವಾಗಿ ಗರ್ಭಿಣಿ ಮಹಿಳೆಯರನ್ನು ಕರೆದು ಕಾರ್ಯಕ್ರಮ ನಡೆಸುವುದು ಇಡೀ ವರ್ಷ ನಡೆಯುವ ಕಾರ್ಯಕ್ರಮ. ಇದರ ಜತೆಗೆ ಹಬ್ಬ ಹರಿದಿನಗಳಾದ ಯುಗಾದಿ, ರಂಜಾನ್, ಕ್ರಿಸ್ ಮಸ್, ಪುತ್ತರಿ ಸೇರಿದಂತೆ ಸರ್ವಧರ್ಮ ಆಚರಣೆಯ ಹಬ್ಬಗಳನ್ನು ಎಲ್ಲರೊಟ್ಟಿಗೆ ಸೇರಿ ನಡೆಸಿಕೊಂಡು ಹೋಗುವಂತದ್ದು, ಮಕ್ಕಳಿಗೆ ಹಬ್ಬಗಳ ವೈಶಿಷ್ಟ್ಯತೆ ಅರ್ಥ ಮಾಡಿಸುವ ಕೆಲಸ. ಒಬ್ಬರಿಗೊಬ್ಬರು ಪ್ರತಿ ಧರ್ಮದ ಆಚರಣೆಗಳನ್ನು ಗೌರವಿಸುವ ಅರಿವು ಮೂಡಿಸುವಲ್ಲಿಯೂ ಮುಂದಿದೆ.

ಸ್ಥಳೀಯ ನಿವಾಸಿ ವಿಶ್ವನಾಥ್ ಅವರು ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದರೂ ಕೂಡಾ ತಮ್ಮ ಬಿಡುವಿನ ಸಮಯದಲ್ಲಿ ಅಂಗನವಾಡಿ ಉದ್ಯಾನವನ, ಹೊರಾಂಗಣ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಳೆಯ ಟೈರ್ ಇತ್ಯಾದಿ ವಸ್ತುಗಳನ್ನು ಬಳಸಿ ಪಾಟ್ ರೂಪ ಕೊಟ್ಟು ಗಿಡಗಳನ್ನು ಬೆಳೆಸುವುದು, ಮಕ್ಕಳಿಗೆ ಬಾವಿಯ ಕಲ್ಪನೆ ಮೂಡಿಸಲು ಬಾವಿ ನಿರ್ಮಾಣ ಮಾಡಿಸುವುದು ಹೀಗೆ ಮಕ್ಕಳ ಕಲಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ತಂಸಿನ ಭಾನು ಎಂ ಇ ಈ ದಿನ.ಕಾಮ್ ಜೊತೆ ಮಾತನಾಡಿ, “ಕಳೆದ ಐದು ವರ್ಷಗಳಿಂದ ಸದರಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತಿದ್ದು, ಗ್ರಾಮಸ್ಥರು, ಸಂಘ, ಸಂಸ್ಥೆಗಳು ಕೈ ಜೋಡಿಸಿದ್ದರಿಂದ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯವಾಯಿತು. ರಾಜ್ಯ ಮಟ್ಟದಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆಯೆಂದು ಗುರುತಿಸಿ ಸರ್ಕಾರದಿಂದ ಸನ್ಮಾನ ಪಡೆಯಲು ಇವರೆಲ್ಲರೂ ಕಾರಣ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂ.ಗ್ರಾ | ಉಪವಿಭಾಗಧಿಕಾರಿ ಕಚೇರಿಗೆ ಸಚಿವ ಕೃಷ್ಣಬೈರೇಗೌಡ ದಿಢೀರ್ ಭೇಟಿ; ಅಧಿಕಾರಿಗಳಿಗೆ ತರಾಟೆ
“ದಾನಿಗಳು ಅಂಗನವಾಡಿಗೆ ಅಗತ್ಯವಿರುವ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ,ವಮಕ್ಕಳ ಕಲಿಕೆಗೆವಟಿವಿ, ಆಟಿಕೆಗಳು,
ಉದ್ಯಾನವನ ನಿರ್ಮಾಣ ಮಾಡುವುದರ ಜತೆಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲು ಕಾರಣರಾಗಿದ್ದಾರೆ. ಅದರಲ್ಲಿ ಪ್ರಮುಖರಾಗಿ ಹಂಸಾವತಿ ಸುರೇಶ್, ಪೂಜಶ್ರಿ ಅಭಿಷೇಕ್, ದಿವ್ಯಾ ಕುಮಾರಿ, ರಂಜಿನಿ ಕಾರ್ಯಪ್ಪ, ಮುಮ್ತಾಜ್ ಇವರೆಲ್ಲರ ಸಹಕಾರದ ಜೊತೆಗೆ ಬಾಲ ವಿಕಾಸ ಸಮಿತಿ ಅಂಗನವಾಡಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಹಣದ ಸಹಾಯ ನೀಡಿ ಈವರೆಗೆ ನಡೆಸಿಕೊಂಡು ಬಂದಿದೆ.
ಎಲ್ಲರ ಸಹಾಯ, ಸಹಕಾರ ಸಿಕ್ಕಿದೆ” ಎಂದರು.
“ಯಾವುದೇ ಗ್ರಾಮವಾಗಲಿ, ಯಾವುದೇ ಶಿಕ್ಷಣ ಕೇಂದ್ರವಾಗಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡಬೇಕು. ಅಂದರೆ ಸ್ಥಳೀಯರ ನೆರವು ಅತ್ಯಗತ್ಯ. ನಮ್ಮ ಅಂಗನವಾಡಿಗೆ ಹಲವು ಮನಸುಗಳು ಸ್ಪಂದಿಸಿ ನಮ್ಮೊಟ್ಟಿಗೆ ಇರುವುದರಿಂದ ಇಂದು ಮಾದರಿ ಅಂಗನವಾಡಿ ಎನಿಸಿಕೊಂಡು ಜಿಲ್ಲೆಯ ಗಮನ ಸೆಳೆಯಲು ಸಾಧ್ಯವಾಯಿತು” ಎಂದರು.
