ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 122.4 ಓವರ್‌ಗಳಲ್ಲಿ 474 ರನ್‌ಗಳಿಗೆ ಆಲೌಟ್ ಆಗಿದೆ. 311/6 ರನ್‌ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ ಅವರ ಆಕರ್ಷಕ ಶತಕದ(140) ನೆರವಿನಿಂದಿಗೆ 470ರ ಗಡಿ ದಾಟಿತು.
ಟೀಂ ಇಂಡಿಯಾ ಪರ ಜಸ್‌ಪ್ರೀತ್ ಬುಮ್ರಾ ಮತ್ತೆ ತಮ್ಮ ಕರಾರುವಾಕ್ಕಾದ ಬೌಲಿಂಗ್ ಮೂಲಕ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ಆಕಾಶ್ ದೀಪ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದು ಆಸೀಸ್ ತಂಡವನ್ನು ಆಲೌಟ್ ಮಾಡಿದರು.
ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತ ತಂಡ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಮೂರು ರನ್ ಗಳಿಸಿದ ರೋಹಿತ್ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಬೊಲ್ಯಾಂಡ್‌ಗೆ ಕ್ಯಾಚ್ ನೀಡಿ ಔಟಾದರು. ಇತ್ತೀಚಿನ ವರದಿಗಳಂತೆ ಟೀಂ ಇಂಡಿಯಾ 11 ಓವರ್‌ಗಳಿಗೆ 1 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿದೆ.
ಕಪ್ಪು ಪಟ್ಟಿ ಧರಿಸಿ ಮಾಜಿ ಪ್ರದಾನಿಗೆ ಗೌರವ ಸಲ್ಲಿಸಿದ ಟೀಂ ಇಂಡಿಯಾ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಎರಡನೇ ದಿನದಾಟದಲ್ಲಿ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಲು ಕೈಗೆ ಕಪ್ಪು ಪಟ್ಟಿ ಧರಿಸಿ ಕ್ಷೇತ್ರರಕ್ಷಣೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ
ಟೀಂ ಇಂಡಿಯಾದ ಹಲವು ಮಾಜಿ ಆಟಗಾರರು ಸಂತಾಪ ಸೂಚಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿರುವ ವಿರೇಂದ್ರ ಸೆಹ್ವಾಗ್, ‘ನಮ್ಮ ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ನಿಧನಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.
ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕೂಡ ಸಂತಾಪ ಸೂಚಿಸಿದ್ದು, ‘ಡಾ. ಮನಮೋಹನ್ ಸಿಂಗ್ ಅವರ ನಿಧನದ ದುಃಖದ ಸುದ್ದಿ. ಭಾರತದ ಪ್ರಗತಿಗಾಗಿ ಅವಿರತವಾಗಿ ಶ್ರಮಿಸಿದ ದೂರದೃಷ್ಟಿಯ ನಾಯಕ ಮತ್ತು ನಿಜವಾದ ರಾಜಕಾರಣಿ. ಅವರ ಬುದ್ಧಿವಂತಿಕೆ ಮತ್ತು ನಮ್ರತೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಅವರ ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.
ಭಾರತ – ಪಾಕ್ ಕ್ರಿಕೆಟ್ ಸಂಬಂಧ ಮರುಸ್ಥಾಪಿಸಲು ಯತ್ನಿಸಿದ್ದ ಮನಮೋಹನ್
ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸಲು ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಯತ್ನಿಸಿ ಯಶಸ್ವಿಯಾಗಿದ್ದರು. 2008ರಲ್ಲಿ ಮುಂಬೈ ದಾಳಿ ಬಳಿಕ ಭಾರತ-ಪಾಕ್ ಕ್ರಿಕೆಟ್ ಸಂಬಂಧ ಹಳಸಿತ್ತು.ಆಗ ಪ್ರಧಾನಿಯಾಗಿದ್ದ ಸಿಂಗ್ ಅವರು ಪಾಕಿಸ್ತಾನದ ಪ್ರಧಾನಿ ಯೂಸುಫ್ ಗಿಲಾನಿಯನ್ನೇ ಭಾರತಕ್ಕೆ ಆಹ್ವಾನಿಸಿದರು. ಆಹ್ವಾನ ಸ್ವೀಕರಿಸಿ ಯೂಸುಫ್ ಭಾರತಕ್ಕೆ ಆಗಮಿಸಿದರು. ಮೊಹಾಲಿಯಲ್ಲಿ ನಡೆದ ಐತಿಹಾಸಿಕ ಪಂದ್ಯವನ್ನು ಸಿಂಗ್-ಯೂಸುಫ್ ಗಿಲಾನಿ ಒಟ್ಟಿಗೇ ಕೂತು ವೀಕ್ಷಿಸಿದರು. ಬಳಿಕ 2012ರಲ್ಲಿ ಭಾರತ-ಪಾಕ್ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ನಡೆಯಿತು. ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿದ್ದು ಅದೇ ಕೊನೆ ಬಾರಿ.
