ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿಯ ಬಾಕ್ಸಿಂಗ್ ಡೇ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಅರ್ಧ ಶತಕದ ನೆರವಿನಿಂದ 46 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಕಲೆ ಹಾಕಿದ್ದು, ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ.
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ ನೀಡಿರುವ 474 ರನ್ಗಳಿಗೆ ಉತ್ತರವಾಗಿ ಮುನ್ನಡೆ ಪಡೆಯಲು 310 ರನ್ ಗಳಿಸಬೇಕಾಗಿದೆ. ನಾಯಕ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದರೂ ಕೇವಲ 3 ರನ್ ಗಳಿಸಿ ಔಟಾದರು. ಅನುಭವಿ ಆಟಗಾರ ಕೆ ಎಲ್ ರಾಹುಲ್ 24 ರನ್ ಗಳಿಸಿ ಆಸೀಸ್ ನಾಯಕ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
82 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಬೇಡದ ರನ್ ಗಳಿಸಲು ಓಡಿ ರನ್ ಔಟಾದರು.118 ಚೆಂಡುಗಳ ಅವರ ಆಟದಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು. ವಿರಾಟ್ ಕೊಹ್ಲಿ ಕೂಡ 36 ರನ್ ಗಳಿಸಿ ಬೋಲ್ಯಾಂಡ್ ಬೌಲಿಂಗ್ನಲ್ಲಿ ಅಲೆಕ್ಸ್ ಕ್ಯಾರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಆಕಾಶ್ ದೀಪ್ ಕೂಡ ಬೋಲ್ಯಾಂಡ್ ಬೌಲಿಂಗ್ನಲ್ಲಿ ಶೂನ್ಯಕ್ಕೆ ಪೆವಿಲಿಯನ್ಗೆ ತೆರಳಿದರು. ದಿನಾದಾಂತ್ಯಕ್ಕೆ ರಿಷಬ್ ಪಂತ್(6) ಹಾಗೂ ರವೀಂದ್ರ ಜಡೇಜಾ(4) ಅಜೇಯರಾಗಿ ಆಟವಾಡುತ್ತಿದ್ದರು.
ಆಸೀಸ್ ತನ್ನ ಮೊದಲ ಇನಿಂಗ್ಸ್ನಲ್ಲಿ 122.4 ಓವರ್ಗಳಲ್ಲಿ 474 ರನ್ಗಳಿಗೆ ಆಲೌಟ್ ಆಗಿದೆ. 311/6 ರನ್ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ ಅವರ ಆಕರ್ಷಕ ಶತಕದ(140) ನೆರವಿನಿಂದಿಗೆ 470ರ ಗಡಿ ದಾಟಿತು.
ಈ ಸುದ್ದಿ ಓದಿದ್ದೀರಾ? ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ
ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಮತ್ತೆ ತಮ್ಮ ಕರಾರುವಾಕ್ಕಾದ ಬೌಲಿಂಗ್ ಮೂಲಕ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ಆಕಾಶ್ ದೀಪ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದು ಆಸೀಸ್ ತಂಡವನ್ನು ಆಲೌಟ್ ಮಾಡಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಎರಡನೇ ದಿನದಾಟದಲ್ಲಿ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಲು ಕೈಗೆ ಕಪ್ಪು ಪಟ್ಟಿ ಧರಿಸಿ ಕ್ಷೇತ್ರರಕ್ಷಣೆ ಮಾಡಿದರು.
