ನಾಯಿಯೊಂದು ನವಜಾತ ಶಿಶುವಿನ ದೇಹವನ್ನು ಕಚ್ಚಿ ಖಾಸಗಿ ಶಾಲೆಯ ಆವರಣವನ್ನು ಪ್ರವೇಶಿಸಿದ್ದು, ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿ ಮಗುವಿನ ದೇಹವನ್ನು ಬಿಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ನಗರದ ಚಳ್ಳಕೆರೆಯ ಗೇಟ್ ಬಳಿ ನಾಯಿಯೊಂದು ನವಜಾತ ಶಿಶುವಿನ ದೇಹವನ್ನು ಕಚ್ಚಿಕೊಂಡು ತಿರುಗಾಡಿರುವ ಘಟನೆ ನಡೆದಿದೆ. ನಾಯಿಯು ಶಾಲೆಯ ಆವರಣದೊಳಗೆ ಬಂದಿದ್ದು ಭದ್ರತಾ ಸಿಬ್ಬಂದಿ ಬೆದರಿಸಿದಾಗ ಅರ್ಧಂಬರ್ಧ ಇರುವ ನವಜಾತ ಶಿಶುವಿನ ದೇಹವನ್ನು ಬಿಟ್ಟು ಓಡಿಹೋಗಿದೆ.
ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಡಾವಣೆ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿಗಳು ತನಿಖೆ ಕೈಗೊಂಡಿದ್ದಾರೆ. ನಾಯಿ ಕಚ್ಚಿ ಹಿಡಿದಿದ್ದ ದೇಹವು ಅರ್ಧ ಮಾತ್ರ ಇದ್ದು ಇನ್ನರ್ಧ ಕೆಳಗಿನ ಭಾಗವನ್ನು ನಾಯಿ ತಿಂದಿರಬಹುದು ಎಂದು ಶಂಕಿಸಲಾಗಿದೆ.
“ಮಗು ಎರಡರಿಂದ ಮೂರು ದಿನಗಳ ಹಿಂದೆ ಜನಿಸಿರಬಹುದೆಂದು ಅಂದಾಜಿಸಲಾಗಿದೆ. ಮೃತಪಟ್ಟ ಮಗುವನ್ನು ಅಥವಾ ಜೀವಂತ ಶಿಶುವನ್ನು ಪೋಷಕರೇ ಎಲ್ಲೋ ಎಸೆದು ಹೋಗಿರಬಹುದು. ಇದರಿಂದ ಮಗುವಿನ ದೇಹ ನಾಯಿಗಳಿಗೆ ಸಿಕ್ಕಿದೆ. ನಂತರ ನಾಯಿಯ ಬಾಯಿಗೆ ಆಹಾರವಾಗಿ ದೇಹ ಛಿದ್ರವಾಗಿರಬಹುದು” ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು
“ಶಿಶುವಿನ ಉಳಿದ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಶಿಶುವಿನ ಕೆಳಗಿನ ಅರ್ಧಭಾಗ ಇಲ್ಲದಿರುವುದರಿಂದ ಮಗು ಗಂಡು ಅಥವಾ ಹೆಣ್ಣೋ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಲಿಂಗ, ಗುರುತು ಪತ್ತೆಗೆ ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ, ಡಿಎನ್ಎ ವರದಿ ಮತ್ತು ತನಿಖೆ ವರದಿ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ” ಎಂದು ಬಡಾವಣೆ ಠಾಣೆ ವೃತ್ತ ನಿರೀಕ್ಷಕರು ತಿಳಿಸಿದ್ದಾರೆ.