- ಹಿಜಾಬ್ ವಿಚಾರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಕಸಿಯಬಾರದು
- ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಪಠ್ಯ ಇರಲಿ
ಬಿಜೆಪಿ ಅವಧಿಯಲ್ಲಿ ನಡೆಸಲಾದ ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ಯಾವೆಲ್ಲ ವಿಚಾರಗಳನ್ನು ಪಠ್ಯದಲ್ಲಿ ತಿರುಚಿದ್ದಾರೆ, ಅದನ್ನೆಲ್ಲ ಕಿತ್ತು ಎಸೆಯಬೇಕು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಇಡೀ ಪಠ್ಯ ಪುಸ್ತಕ ಪರಿಷ್ಕರಣೆಯ ಯಡವಟ್ಟುಗಳನ್ನು ಸರಿಪಡಿಸಬೇಕು. ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಂ ಹೆಡ್ಗೆವಾರ್ ಕುರಿತ ಪಠ್ಯ ಕೈಬಿಡಬೇಕು” ಎಂದು ಒತ್ತಾಯಿಸಿದ್ದಾರೆ.
“ಈಗ ಮಕ್ಕಳಿಗೆ ಪಾಠ ನಡೆಯಲಿ. ಆರು ತಿಂಗಳು ಆದ್ರೂ ಪರವಾಗಿಲ್ಲ ಹೊಸ ಪಠ್ಯ ರಚನೆಯಾಗಬೇಕು. ಈ ಬಗ್ಗೆ ಶಿಕ್ಷಣ ತಜ್ಞರ ಜೊತೆ ಸಮಾಲೋಚಿಸಿ ಹೆಜ್ಜೆ ಇಡಬೇಕು. ಹಿಂದಿನ ಸರ್ಕಾರ ತಮಗೆ ಹೇಗೆ ಬೇಕು ಹಾಗೇ ಪಠ್ಯ ಪರಿಷ್ಕರಣೆ ಮಾಡಿದೆ” ಎಂದರು
“ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಪಠ್ಯ ಇರಲಿ. ವಿಜ್ಞಾನದ ಪಠ್ಯವೂ ಹಾಗೇ ಇರಲಿ. ಒಂದು ವರ್ಷದಲ್ಲಿ ಹಿಂದಿನ ಸರ್ಕಾರ ಪಠ್ಯದೊಳಗೆ ತುಂಬಿರುವ ವಿಷ ಹೊರತಗೆಯಬೇಕು” ಎಂದು ಹೇಳಿದ್ದಾರೆ.
ಹಿಜಾಬ್ ವಿಚಾರಕ್ಕೆ ಪ್ರತಿಕ್ರಿಯಿಸಿ, “ಅದು ಅವರ ಹಕ್ಕು. ನಾನೇ ಬೆಂಬಲ ನೀಡಿದ್ದೆ. ಆ ಮಹಿಳೆಯ ಹಕ್ಕನ್ನು ನಾವು ಯಾರು ಕಿತ್ತುಕೊಳ್ಳಲು? ಹಿಜಾಬ್ ವಿಚಾರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಕಸಿದುಕೊಳ್ಳಬಾರದು” ಎಂದರು.