ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಅಲ್ಟ್ರಾಟೆಕ್ (ರಾಜಶ್ರೀ) ಸಿಮೆಂಟ್ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಪಿಎಫ್, ಇಎಸ್ಐ ಸೇರಿದಂತೆ ಇತರ ಸೌಲಭ್ಯಗಳು ಒದಗಿಸಬೇಕೆಂದು ಆಗ್ರಹಿಸಿ ಭೀಮ್ ಆರ್ಮಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಸೂರ್ಯಕಾಂತ ಜಿಡಗಾ ಮಾತಾನಾಡಿ, “ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಲ್ಲಿ ಮಹಾವೀರ ಮತ್ತು ಅರ್ಜುನ ಏಜೆನ್ಸಿ ಅಡಿಯಲ್ಲಿ ಕಳೆದ ಒಂದೂವರೆ ದಶಕದಿಂದ 200ಕ್ಕೂ ಅಧಿಕ ಅಸಂಘಟಿತ ಕಾರ್ಮಿಕರು ಲೋಡಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ಯಾವುದೇ ಮೂಲ ಸೌಕರ್ಯ, ಸುರಕ್ಷಿತ ಕವಚಗಳು ನೀಡದೆ ಏಜೆನ್ಸಿ ಹಾಗೂ ಕಂಪನಿಯವರು ಯಂತ್ರದಂತೆ ದುಡಿಸಿಕೊಳ್ಳುತ್ತಿದ್ದಾರೆʼ ಎಂದು ದೂರಿದರು.
ʼಹಲವು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಸೇವಾ ಭದ್ರತೆ ನೀಡದೆ ಅಧಿಕ ಅವಧಿಗೆ ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರು ವೇತನ ಹೆಚ್ಚಿಸುವಂತೆ ಮನವಿ ಸಲ್ಲಿಸಿದರೆ, ವೇತನ ಹೆಚ್ಚಿಸುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ಕಡಿಮೆ ಸಂಬಳದಲ್ಲಿ ಬದುಕು ನಡೆಸಲು ತೊಂದರೆಯಾಗುತ್ತಿದೆ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕೂಡಲೇ ಕಾರ್ಮಿಕರಿಗೆ ಸೇವಾ ಭದ್ರತೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ವಿಮೆ, ಅಪಘಾತ ಸಂದರ್ಭದಲ್ಲಿ ಆಸ್ಪತ್ರೆಯ ಪೂರ್ಣ ವೆಚ್ಚ ಪಾವತಿಸುವ ಕ್ರಮ ಜರುಗಿಸಬೇಕು. ಪ್ರತಿ ತಿಂಗಳು ವೇತನ ಮತ್ತು ಹಾಜರಾತಿ ಚೀಟಿ ಕಾರ್ಮಿಕರಿಗೆ ನೀಡಬೇಕು. ಸೇವಾ ಭದ್ರತೆ ಸೇರಿದಂತೆ ಇತರ ಸೌಲಭ್ಯ ನೀಡಬೇಕೆಂದು ಹಕ್ಕೊತ್ತಾಯ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರಿಯಾಂಕ್ ಖರ್ಗೆ ಆಪ್ತನಿಂದ ಬೆದರಿಕೆ ಪ್ರಕರಣ; ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳ ಅಮಾನತು
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶಖರ ಬಂಗರಗಿ, ತಾಲೂಕಾಧ್ಯಕ್ಷ ಶಂಕರ ವಾಡಿ ಸೇರಿದಂತೆ ಪ್ರಮುಖರಾದ ಸಂದೀಪ್ ದೊಡ್ಡಮನಿ, ಸುನೀಲ ಮಾನ್ಪಡೆ, ಹುಸೆನಪ್ಪ ರದ್ದೆವಾಡಿ, ಯಮನೇಶ ಅಂಕಲಗಿ, ರಾಮಶೇಟ್ಟಿ ಜಾಧವ ಮತ್ತಿತರರಿದ್ದರು.