ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಖಂಡಿಸಿ ಶುಕ್ರವಾರ ಕರೆ ನೀಡಿದ ʼಔರಾದ್ ಬಂದ್ʼ ಯಶಸ್ವಿಯಾಯಿತು. ಪ್ರತಿಭಟನೆಯಲ್ಲಿ ಅಮಿತ್ ಶಾ ಶವಯಾತ್ರೆ ಅಣಕು ಶವಯಾತ್ರೆ ನಡೆಸಿ, ಭಾವಚಿತ್ರ ಪ್ರತಿಕೃತಿ ದಹಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದರು. ಬೆಳಿಗ್ಗೆ 6 ರಿಂದ ಪ್ರತಿಭಟನೆ ಆರಂಭಿಸಿದ ಹೋರಾಟಗಾರರು, ಮಧ್ಯಾಹ್ನ 2 ಗಂಟೆವರೆಗೆ ಪಾದಯಾತ್ರೆ, ಬೈಕ್ ರ್ಯಾಲಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಶಾಂತಿಯುತವಾಗಿ ನಡೆಯಿತು.

ಬೆಳ್ಳಿಗೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಚ್ಚಿ ಬಂದ್‌ಗೆ ಬೆಂಬಲಿಸಿದರು. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಬೆಳಿಗ್ಗೆಯಿಂದ ವಿವಿಧ ಗ್ರಾಮಗಳಿಂದ ಆಗಮಿಸಿದ ಮಕ್ಕಳು, ಮಹಿಳೆಯರು, ಹೋರಾಟಗಾರರು ಕೈಯಲ್ಲಿ ನೀಲಿ ಬಾವುಟ, ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದುಕೊಂಡು ಗಮನ ಸೆಳೆದರು. ಎಪಿಎಂಸಿ ಕ್ರಾಸ್ ಸಮೀಪದ ಕನ್ನಡಾಂಬೆ ವೃತ್ತದ ಬಳಿ ಜಮಾಯಿಸಿದರು. ಇದೇ ಸಂದರ್ಭದಲ್ಲಿ ಗುರುವಾರ (ಡಿ.26) ರಂದು ರಾತ್ರಿ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಮಿತಿಯಿಂದ ಶ್ರದ್ದಾಂಜಲಿ ಸಲ್ಲಿಸಿದರು.
ಆನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವೃತ್ತ ಎದುರಿನ ಮುಖ್ಯರಸ್ತೆ ಮೇಲೆ ಟೈರ್‌ಗೆ ಬೆಂಕಿ ಹಚ್ಚಿ ʼಜೈಭೀಮ್ʼ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಲಗಿ ತಾಳಕ್ಕೆ ಹೆಜ್ಜೆ ಹಾಕಿದ ಹೋರಾಟಗಾರರು ʼಸತ್ತಾನಪ್ಪೊ ಸತ್ತಾನೊ ಅಮಿತ್ ಶಾ ಸತ್ತಾನೋʼ ಎಂಬ ಘೋಷಣೆ ಕೂಗಿ ಬೊಬ್ಬೆ ಹಾಕಿದರು. ಮುಖ್ಯರಸ್ತೆ ಮುಖಾಂತರ ಬಸ್ ನಿಲ್ದಾಣದವರೆಗೆ ಅಮಿತ್ ಶಾ ಅಣಕು ಶವಯಾತ್ರೆ ಮಾಡಿದರು. ಬಸ್ ನಿಲ್ದಾಣದ ಎದುರುಗಡೆಯ ಮುಖ್ಯರಸ್ತೆ ಮೇಲೆ ಅಮಿತ್ ಶಾ ಪ್ರತಿಕೃತಿ ದಹಿಸಿ ರಾಜೀನಾಮೆಗೆ ಒತ್ತಾಯಿಸಿದರು.

ಪ್ರತಿಭಟನೆ ಉದ್ದೇಶಿಸಿ ಮುಖಂಡರಾದ ಝರೆಪ್ಪಾ ವರ್ಮಾ, ಬಾಬುರಾವ್ ತಾರೆ, ರಾಹುಲ್ ಖಂದಾರೆ, ಸುಧಾಕರ್ ಕೊಳ್ಳೂರ್, ಕಲಾವತಿ ಯನಗುಂದಾ, ರಹೀಂ ಮೌಲಾಸಾಬ್, ಸುಭಾಷ ಲಾಧಾ, ರಾಮಣ್ಣ ಒಡೆಯಾರ್, ಶಿವು ಕಾಂಬಳೆ ಹಾಗೂ ಸಮಿತಿಯ ಮುಖಂಡರು ಮಾತನಾಡಿ, ʼರಾಜ್ಯಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಅಮಿತ್ ಶಾ ಅವರನ್ನು ಸಂಪುಟದಲ್ಲಿ ಮಂದುವರೆಯಲು ನೈತಿಕತೆ ಇಲ್ಲ. ದೇಶದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಕೂಡಲೇ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕುʼ ಎಂದು ಆಗ್ರಹಿಸಿದರು.
ʼಭಾರತೀಯ ಸಂವಿಧಾನದಿಂದಲೇ ಸಂಸತ್ ಪ್ರವೇಶಿಸಿ ಗೃಹ ಮಂತ್ರಿಯಾದ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದು ದೇಶದ ಕೋಟಿ ಕೋಟಿ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಜಾತಿವಾದಿ ಮನಸ್ಥಿತಿಯ ಅಮಿತ್ ಶಾ ಅಧಿಕಾರದ ದರ್ಪದಿಂದ ಬಾಬಾ ಸಾಹೇಬ್‌ರನ್ನು ಅವಮಾನಿಸಿ ದೇಶದ್ರೋಹ ಕೃತ್ಯ ಎಸಗಿದ್ದಾರೆ. ತಕ್ಷಣವೇ ಅವರನ್ನು ದೇಶದಿಂದ ಗಡಿಪಾರು ಮಾಡಬೇಕುʼ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ʼಈ ಹಿಂದೆ ಬಿಜೆಪಿಯವರು ದೇಶದ ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂಬ ಹೇಳಿಕೆ ನೀಡಿದ್ದರು. ಆ ಕಾರಣದಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅನೇಕ ಕ್ಷೇತ್ರಗಳಲ್ಲಿ ಸೀಟು ಕಳೆದುಕೊಳ್ಳಬೇಕಾಯಿತು. ಸದಾ ʼಸಬ್ ಕಾ ಸಾತ್ ಸಬ್ ಕಾ ವಿಕಾಸʼ ಎನ್ನುವ ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ ಡಾ.ಅಂಬೇಡ್ಕರ್ ಅವರನ್ನು ಅಪಮಾನಿಸಿದ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ, ಪಕ್ಷದಿಂದ ಉಚ್ಚಾಟಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ನಿಮನ್ನು ಸಂಸತ್ ಭವನ ಪ್ರವೇಶಿಸಲು ಬಿಡುವುದಿಲ್ಲʼ ಎಂದು ಎಚ್ಚರಿಸಿದರು.
ಪ್ರತಿಭಟನೆ ನಂತರ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು.
ಔರಾದ್ ಸಿಪಿಐ ರಘವೀರ್‌ಸಿಂಗ್ ಠಾಕೂರ್, ಪಿಎಸ್‌ಐ ವಸೀಮ್ ಪಟೇಲ್ ನೇತ್ರತ್ವದಲ್ಲಿ ಬೆಳಿಗ್ಗೆಯಿಂದಲೇ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ್ ಬಂದ್ : ಬೆಳ್ಳಂ ಬೆಳಿಗ್ಗೆಯೇ ಆರಂಭವಾದ ಪ್ರತಿಭಟನೆ
ಪ್ರತಿಭಟನೆಯಲ್ಲಿ ಸಮಿತಿಯ ಕಾರ್ಯದರ್ಶಿ ಆನಂದ ಗಲಗಲೆ, ಉಪಾಧ್ಯಕ್ಷ ಗಣಪತಿ ವಾಸುದೇವ, ಸಹ ಕಾರ್ಯದರ್ಶಿ ತಾನಾಜಿ ತೋರಣೆಕರ್ ಸೇರಿದಂತೆ ಸಮಿತಿಯ ಪ್ರಮುಖರಾದ ಗೌತಮ ಮೇತ್ರೆ, ಸುನೀಲ್ ಮಿತ್ರಾ, ಸಂತೋಷ್ ಶಿಂಧೆ, ರತ್ನಾದೀಪ ಕಸ್ತೂರೆ, ಸಂತೋಷ ಸೂರ್ಯವಂಶಿ, ಪ್ರವೀಣ ಕಾರಂಜೆ, ಧನರಾಜ್ ಮುಸ್ತಾಪುರ, ಸತೀಷ ವಗ್ಗೆ, ಆನಂದ ಕಾಂಬಳೆ, ವಿನೋದ ಡೋಳೆ, ಶಾಂತಕುಮಾರ್ ಭಾವಿಕಟ್ಟಿ, ಉತ್ತಮ ಮಾಂಜ್ರೆಕರ್, ತುಕಾರಾಮ ಹಸನ್ಮುಖಿ, ಪ್ರಕಾಶ ಅಲ್ಲಾಪುರ, ಸುಂದರ ಮೇತ್ರೆ, ದಿನೇಶ ಸಿಂಧೆ, ಅಖಿಲೇಶ ಸಾಗರ್, ರಾಜಕುಮಾರ್ ಮೈಲಾರೆ, ಧನರಾಜ್ ಕಾಂಬಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.