ದೇವದುರ್ಗ ತಾಲೂಕಿನ ಕರ್ಕಿಹಳ್ಳಿ ಸರ್ವೆ 36/1ರ ಬಳಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಸರಿ ಸುಮಾರು ₹15 ಕೋಟಿ ಮೌಲ್ಯದ ಅಕ್ರಮ ನಡೆದಿದೆ. ಈ ಬಗ್ಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಕೂಡಾ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊತ್ತದೊಡ್ಡಿ ಆರೋಪಿಸಿದರು.
ರಾಯಚೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ದೇವದುರ್ಗ ತಾಲೂಕಿನ ಮೂರು ಸ್ಥಳದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದು, ಹಟ್ಟಿ ಚಿನ್ನದ ಗಣಿ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೆ ಹಟ್ಟಿ ಚಿನ್ನದ ಗಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಮಗೆ ಸಂಬಂಧಿಸಿದಲ್ಲವೆಂದು ಹೇಳುವ ಮೂಲಕ ಅಕ್ರಮ ಗಣಿಗಾರಿಕೆಗೆ ಬೆಂಬಲವಾಗಿ ನಿಂತಿವೆ” ಎಂದು ದೂರಿದರು.
“ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ನೀಡಿರುವ ವರದಿಯಂತೆ, ʼಅಕ್ರಮವಾಗಿ ಸಂಗ್ರಹಿಸಿರುವ ದಾಸ್ತಾನು ಇಲಾಖೆಗೆ ಸೇರಿದ್ದಲ್ಲʼ ಎನ್ನುತ್ತಾರೆ. ಇನ್ನೂ ಹಟ್ಟಿ ಚಿನ್ನದ ಗಣಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ನಮ್ಮದಲ್ಲ ಎನ್ನುತ್ತಾರೆ. ಸರಿ ಸುಮಾರು 15 ಕೋಟಿ ರೂ ಮೌಲ್ಯದ ಅಕ್ರಮವಾದ ಮರಳು ಯಾರದೆಂಬುದು ಗೊತ್ತಾಗುತ್ತಿಲ್ಲ” ಎಂದು ಹೇಳಿದರು.
“ಅಕ್ರಮವಾಗಿ ಸಂಗ್ರಹಿಸಿರುವ ಮರಳಿನ ವಾರಸುದಾರರು ಯಾರೆಂದು ಅಧಿಕಾರಿಗಳಿಗೆ ಗೊತ್ತಿದ್ದರೂ, ಅವರ ರಕ್ಷಣೆಗೆ ಮುಂದಾಗುತ್ತಿದ್ದಾರೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಹಟ್ಟಿ ಚಿನ್ನದ ಗಣಿ ಅಧಿಕಾರಿ ವಿನೋದ್ ಕುಮಾರ ಎಂಬುವವರಿಗೆ ಸೇರಿದ ಸರ್ವೆ ಸಂಖ್ಯೆ 31/1ರ ಮೂರು ಎಕರೆ ಭೂಮಿಯಲ್ಲಿ ಮರಳು ಸಂಗ್ರಹಿಸಲಾಗಿದೆ. ಈ ಕುರಿತು ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಸಹಾಯಕ ಆಯುಕ್ತರಿಗೂ ದೂರು ನೀಡಲಾಗಿದೆ. ಅಲ್ಲದೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ, ಉಪಾಧ್ಯಕ್ಷ, ಎಸ್‌ಪಿಯವರಿಗೆ ದೂರು ನೀಡಿದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಕೌಶಲ್ಯದ ಅವಶ್ಯವಿದೆ: ಡಾ. ಶಂಭು ಹೆಗಡ್ಯಾಳ
“ರಾಜಕೀಯ ಪ್ರಭಾವದಿಂದ ಇಂದಿಗೂ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ. ಅಕ್ರಮವಾಗಿ ದಾಸ್ತಾನಿರುವ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅಕ್ರಮ ದಾಸ್ತಾನನ್ನು ಜಿಲ್ಲಾಡಳಿತ ವಶಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಲೋಕಾಯುಕ್ತರಿಗೆ ದೂರು ನೀಡುವುದರ ಜತೆಗೆ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶರಣಗೌಡ ಸುಂಕೇಶ್ವರಹಾಳ, ಆಂಜನೇಯ ನಾಯಕ, ಮಂಜುನಾಥ ಹೇರುಂಡಿ ಸೇರಿದಂತೆ ಇತರರು ಇದ್ದರು.