ಸಾಂಪ್ರದಾಯಿಕ ಬೋಧನಾ ಪದ್ಧತಿ ಬಿಟ್ಟು ತಂತ್ರಜ್ಞಾನ ಆಧಾರಿತ ಬೋಧನಾ ಪದ್ಧತಿಯನ್ನು ರೂಢಿಸಿಕೊಂಡಾಗ ಮಾತ್ರ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಧಾರವಾಡದ ಐ.ಐ.ಟಿ ಡೀನ್ ಡಾ. ಎಸ್.ಎಮ್.ಶಿವಪ್ರಸಾದ್ ಹೇಳಿದರು.
ನಗರದ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡ “ಎಂಪ್ಲಾಯ್‌ಮೆಂಟ್ ಎಂಪ್ಲಾಯಿಲಿಟಿ ಆ್ಯಂಡ್ ಹೈಯರ್ ಎಜುಕೇಶನ್ ಇನ್ ಇಂಡಿಯಾ: ದಿ ಮಿಸ್ಸಿಂಗ್ ಲಿಂಕ್” ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರಸ್ತುತ 1,043 ವಿಶ್ವವಿದ್ಯಾಲಯಗಳು, 42,343 ಕಾಲೇಜುಗಳು, 11,779 ಸ್ವತಂತ್ರ ಸಂಸ್ಥೆಗಳು, 37.4 ಮಿಲಿಯನ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವು ಸೇವೆ ಸಲ್ಲಿಸುತ್ತಾ ಬೃಹತ್ ಪ್ರಮಾಣದ ಬದಲಾವಣೆಯನ್ನು ತಂದಿದೆ ಎಂದರು.
ಪಠ್ಯಕ್ರಮ ರಚನೆಯಲ್ಲಿ ಬದಲಾವಣೆ ಬರಬೇಕಿದೆ. ಇದಲ್ಲದೇ, ಶಿಕ್ಷಕರು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಬೇಕು ಅಂದಾಗ ಮಾತ್ರವೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವು ಮಾನವ ಸಂಪನ್ಮೂಲ ನಿರ್ಮಿಸಲು ಸಾಧ್ಯವಾಗುತ್ತದೆ. ಭವಿಷ್ಯದ ಉದ್ಯೋಗಗಳ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಕೌಶಲ್ಯ ಆಧಾರಿತ ಬೋಧನೆಯನ್ನು ಮಾಡಬೇಕು. ಪ್ರಸ್ತುತ ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಕೃಷಿ ಹೀಗೆ ಸರ್ವ ರಂಗವು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಹೀಗಾಗಿ ಶಿಕ್ಷಣದಲ್ಲಿಯೂ ಕೂಡ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯ ಕೂಡ ಉಜ್ವಲಗೊಳ್ಳಲಿದೆ ಎಂದು ಹೇಳಿದರು.
ಭಾರತದ ಉನ್ನತ ಶಿಕ್ಷಣವು ಗುರುಕುಲದಿಂದ ಆರಂಭವಾಗಿ ಆಧುನಿಕ ವಿಶ್ವವಿದ್ಯಾಲಯಗಳವರೆಗೆ ಪರಿಣಾಮಕಾರಿಯಾಗಿ ಬೆಳೆದುಕೊಂಡು ಬಂದಿದೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಶಿಕ್ಷಣ ನಿರ್ದೇಶಕ ಡಾ. ವಿ.ಆರ್. ಕಿರೇಸೂರ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ಭಾಗಗಳಿಂದ 120ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದು, ಸುಮಾರು 82 ಸಂಶೋಧನಾ ಲೇಖನಗಳನ್ನು ಮಂಡಿಸಿದರು.
ಈ ವಿಚಾರ ಸಂಕಿರಣದಲ್ಲಿ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಉಪಾಧ್ಯಕ್ಷ ಬಶೀರ್ ಅಹ್ಮದ್ ಜಹಗೀರದಾರ್, ಪ್ರಾಚಾರ್ಯ ಡಾ. ಎನ್.ಎಮ್. ಮಕಾಂದಾರ, ಡಾ. ಎ.ಎಸ್. ಬಳ್ಳಾರಿ. ಡಾ. ಆಯ್.ಎ.ಮುಲ್ಲಾ, ಡಾ.ಎನ್.ಬಿ. ನಾಲತವಾಡ, ಡಾ. ಮೇಟಿ ರುದ್ರೇಶ ಮತ್ತು ನಾಡಿನ ಅನೇಕ ವಿದ್ವಾಂಸರು, ಸಂಶೋಧಕರು, ಕಾಲೇಜಿನ ಪ್ರಾಧ್ಯಾಪಕ ವೃಂದ. ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.