- ರಾಮನವಮಿ ಹಿಂಸಾಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಭಾಗಿ ಎಂದು ಎನ್‌ಐಎ ಉಲ್ಲೇಖ
- ಹಿಂಸಾಚಾರ ಪ್ರಕರಣದ ತನಿಖೆಗೆ ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ನ್ಯಾಯಾಲಯಕ್ಕೆ ಅರ್ಜಿ
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಮಾರ್ಚ್ 30ರಂದು ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯರು ಭಾಗಿಯಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸಲ್ಲಿಸಿದ ವರದಿಯಲ್ಲಿ ಹೇಳಿದೆ.
ರಾಮನವಮಿ ಮೆರವಣಿಗೆ ವೇಳೆ ವಿಎಚ್‌ಪಿ ಸದಸ್ಯರು ಕತ್ತಿ, ಕೋಲು ಹಾಗೂ ಇತರ ಶಸ್ತ್ರಾಸ್ತ್ರ ಹಿಡಿದಿದ್ದರು ಎಂದು ಎನ್‌ಐಎ ದಾಖಲಿಸಿರುವ ಆರರಲ್ಲಿ ಒಂದು ಪ್ರಕರಣದಲ್ಲಿ ಉಲ್ಲೇಖಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಶ್ವ ಹಿಂದೂ ಪರಿಷತ್ ರಾಮನವಮಿ ಹಿಂಸಾಚಾರದಲ್ಲಿ ಭಾಗಿಯಾಗಿದೆ ಎಂದು ಎನ್‌ಐಎ ದಾಖಲಿಸಿರುವ ಪ್ರಕರಣದಲ್ಲಿ ಹೇಳಿದೆ.
ವಿಶ್ವ ಹಿಂದೂ ಪರಿಷತ್ ರೀತಿಯೇ ಅಂಜನಿ ಪುತ್ರ ಸೇನೆ ಎಂಬ ಸರ್ಕಾರೇತರ ಸಂಸ್ಥೆಯೊಂದು ಪ್ರತಿ ವರ್ಷ ರಾಮನವಮಿ ಮೆರವಣಿಗೆ ನಡೆಸುತ್ತದೆ. ಈ ಬಾರಿ ಅಂಜನಿ ಪುತ್ರ ಸೇನೆ ಹೌರಾದ ಶಿಬ್‌ಪುರದ ಕಾಜಿಪಾರಾ ಮೋರ್‌ನಲ್ಲಿ ರಾಮನವಮಿ ಮೆರವಣಿಗೆ ನಡೆಸಿತು. ಇದರಲ್ಲಿ 3,000ದಿಂದ 3,500ವರೆಗೆ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ವಿಎಚ್‌ಪಿಯೂ ಇಲ್ಲಿಗೆ ಆಗಮಿಸಿದೆ. ಆಗ ಹಿಂಸಾಚಾರ ನಡೆದಿದೆ ಎಂದು ಪ್ರಕರಣದಲ್ಲಿ ಹೇಳಲಾಗಿದೆ.
ರಾಮನವಮಿ ಹಿಂಸಾಚಾರ ರಾಜ್ಯದ ಇತರೆಡೆಯೂ ಹರಡಿದೆ. ಹೂಗ್ಲಿ ಜಿಲ್ಲೆಯ ರಿಶ್ರಾ, ಹೌರಾದ ಶಿಬ್‌ಪುರ ಮತ್ತು ದಕ್ಷಿಣ ದಿನಜ್‌ಪುರದ ದಾಲ್‌ಖೋಲಾದಲ್ಲಿ ಹಿಂಸಾಚಾರ ನಡೆದಿದೆ. ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಎನ್‌ಐಎ ಆರು ಪ್ರಕರಣ ದಾಖಲಿಸಿದೆ.
ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸಲ್ಲಿಸಿದ ಅರ್ಜಿಯ ಮೇರೆಗೆ ಕೋಲ್ಕತ್ತ ಹೈಕೋರ್ಟ್ ಹಿಂಸಾಚಾರದ ಕುರಿತು ತನಿಖೆ ನಡೆಸುವಂತೆ ಎನ್‌ಐಎಗೆ ಸೂಚಿಸಿತ್ತು. ಎನ್‌ಐಎ ಶಿಬ್‌ಪುರದಲ್ಲಿ ಇಲ್ಲಿಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅನೂಪ್ ಕುಮಾರ್ ರಾಯ್ ದಾಖಲಿಸಿದ ದೂರಿನ ಮೇರೆಗೆ ಮೊದಲ ಪ್ರಕರಣ ದಾಖಲಿಸಿತ್ತು.
“ಅಂಜನಿ ಪುತ್ರ ಸೇನೆ ಸದಸ್ಯರು ರಾಮನವಮಿ ಮೆರವಣಿಗೆ ನಡೆಸುವ ಸಂದರ್ಭ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಇದಕ್ಕೆ ಪ್ರತಿಯಾಗಿ ಸೇನೆಯ ಸದಸ್ಯರು ಕತ್ತಿ, ಲಾಠಿ, ಬಿದಿರಿನ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ” ಎಂದು ಪ್ರಕರಣ ಹೇಳಿದೆ.
ಮಾರ್ಚ್ 31ರಂದು ಶುಕ್ರವಾರ ಎರಡನೇ ಪ್ರಕರಣ ದಾಖಲಾಯಿತು. ಅಂದು ಜಿಟಿ ರಸ್ತೆ ಮತ್ತು ಪಿಎಂ ಬಸ್ತಿ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. “ಮಧ್ಯಾಹ್ನ 1.15ರ ಸುಮಾರಿಗೆ ಅನೇಕ ಜನರು ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಸಂದರ್ಭ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ನಡುವೆ ಕಲ್ಲು ತೂರಾಟ ನಡೆದಿದೆ” ಎಂದು ಎರಡನೇ ಪ್ರಕರಣ ತಿಳಿಸಿದೆ.
ಈ ವೇಳೆ ನಡೆದ ಹಿಂಸಾಚಾರದಲ್ಲಿ ಎರಡು ಸಮುದಾಯಗಳ ಜನರು ಸ್ಫೋಟಕಗಳ ಮೂಲಕ ದಾಳಿ ನಡೆಸಿದ್ದಾರೆ. ಇದರಿಂದ ಅನೇಕ ಮಳಿಗೆ, ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಎರಡನೇ ಪ್ರಕರಣ ತಿಳಿಸಿದೆ. ರಿಶ್ರಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಎನ್‌ಐಎ ಮೂರನೇ ಪ್ರಕರಣ ದಾಖಲಿಸಿದೆ.
“ಏಪ್ರಿಲ್ 2ರಂದು ರಿಶ್ರಾದ ಮಸೀದಿ ಬಳಿ 1,000ದಿಂದ 1,200 ಮಂದಿ ಧ್ವನಿವರ್ಧಕದ ಮೂಲಕ ಭಾರೀ ಸದ್ದಿನೊಂದಿಗೆ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಇತರ ಸಮುದಾಯವರು ಮೆರವಣಿಗೆ ನಡೆಸುವವರ ಜತೆ ವಾಗ್ವಾದ ನಡೆಸಿದ್ದಾರೆ. ಇದು ಹಿಂಸಾಚಾರ ರೂಪ ಪಡೆದಿದೆ” ಎಂದು ಮೂರನೇ ಪ್ರಕರಣ ತಿಳಿಸಿದೆ.
ದಾಲ್‌ಖೋಲಾ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ದೂರಿನ ಪ್ರಕಾರ ನಾಲ್ಕನೇ ಪ್ರಕರಣ ದಾಖಲಾಗಿದೆ. ಮಾರ್ಚ್ 30ರಂದು ಉತ್ತರ ದಾಲ್‌ಖೋಲಾ ಪ್ರದೇಶದಲ್ಲಿ ಪೊಲೀಸರ ಅನುಮತಿ ಪಡೆಯದೆ ರಾಮನವಮಿ ಮೆರವಣಿಗೆ ನಡೆಸಲಾಗಿದೆ. ಈ ವೇಳೆ ಹಿಂಸಾಚಾರ ನಡೆದಿದೆ” ಎಂದು ಪ್ರಕರಣ ಉಲ್ಲೇಖಿಸಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ | ಅಪ್ರಾಪ್ತೆಯ ಭೀಕರ ಕೊಲೆ; ಆಪ್–ಬಿಜೆಪಿ ನಡುವೆ ಕೆಸರೆರಚಾಟ
ಸೆರಾಂಪೋರ್ ಮತ್ತು ರಿಶ್ರಾದಲ್ಲಿ ಏಪ್ರಿಲ್ 3ರಂದು ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಈ ಸಂಬಂಧ ಎನ್‌ಐಎ ಮತ್ತೆ ಎರಡು ಪ್ರಕರಣ ದಾಖಲಿಸಿದೆ.