ರಾಜ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೀಳಾಗಿ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಿತಿಯಿಂದ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ʼಬಿಜೆಪಿ, ಆರ್‌ಎಸ್‌ಎಸ್ ದೇಶದಲ್ಲಿ ಮನುವಾದ ಹೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಬಿಜೆಪಿಯವರು ಎಂದಿಗೂ ಸಂವಿಧಾನ ಒಪ್ಪುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ನಿಜವಾಗಿಯೂ ಗೌರವ ಕೊಡುವುದಿಲ್ಲ ಎಂಬುದನ್ನು ಅಮಿತ್ ಶಾ ಹೇಳಿಕೆಯಿಂದ ಮತ್ತೊಮ್ಮೆ ದೃಢಪಟ್ಟಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಅಮಿತ್ ಶಾ ಹೇಳಿಕೆಯಿಂದ ಕೇವಲ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಅಲ್ಲ. ಇದು ದೇಶದ ಸಾಮಾಜಿಕ ನ್ಯಾಯದ ಹೋರಾಟವನ್ನು ಆಚರಿಸುವ ಲಕ್ಷಾಂತರ ವಂಚಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಭಾರತ ಸಂವಿಧಾನದ ಮೇಲೆ ಬಿಜೆಪಿಯ ದಾಳಿಯ ವಿರುದ್ಧ ಭಾರತದ ಜನತೆಯ ನಿರಂತರ ಪ್ರತಿರೋಧ ನೀಡಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ʼಹಿಂದುತ್ವವಾದಿ ಶಕ್ತಿಗಳಿಂದ ನಿರಂತರ ದಾಳಿಗೆ ಒಳಗಾಗಿರುವ ದಲಿತ ದಮನಿತ, ತಳ ಮಟ್ಟದ ಸಮುದಾಯಗಳನ್ನು ಹೋರಾಡುವುದಕ್ಕೆ ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸುವ ಸಂರಕ್ಷಣೆಗಾಗಿ ಅಂಬೇಡ್ಕರ್ ಅವರು ಲಕ್ಷಾಂತರ ಜನರನ್ನು ಪ್ರೇರೇಪಿಸಿದ್ದಾರೆ. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಅಮಿತ್ ಶಾ ಅವರು ದೇಶದ ಜನತೆಗೆ ಕ್ಷಮೆ ಕೇಳಬೇಕು. ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಗುತ್ತಿಗೆದಾರ ಆತ್ಮಹತ್ಯೆ : ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ವಿರುದ್ಧ ಪ್ರಕರಣ ದಾಖಲು
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ , ಜಿಲ್ಲಾಧ್ಯಕ್ಷ ಪರಶುರಾಮ ಹಡಲಗಿ, ಉಪಾಧ್ಯಕ್ಷ ಮೇಘರಾಜ್ ಕಠಾರೆ, ಕಾಶಿನಾಥ್ ಬಂಡಿ, ಜ್ಯೋತಿ ದೊಡ್ಡಮನಿ, ನಾಗರತ್ನ ಮದನಕರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
