ಆನ್ಲೈನ್ ಗೇಮಿಂಗ್‌ನಲ್ಲಿ ₹15 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡು ಮನನೊಂದ ಯುವಕ ಮೈಮೇಲೆ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ.
ಬೀದರ್ ಜಿಲ್ಲೆಯ ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದ ವಿಜಯಕುಮಾರ್ ಹೊಳ್ಳೆ (24) ಮೃತ ಯುವಕ.
ಡಿ.ಫಾರ್ಮ್ ಪದವೀಧರನಾದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳಿಂದ ಆನ್‌ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಸಿಲುಕಿ ₹10 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದ. ಮತ್ತೆ ಒಂದೂವರೆ ಲಕ್ಷ ಸಾಲ ಮಾಡಿಕೊಂಡಿದ್ದನು.
ಎರಡ್ಮೂರು ದಿನಗಳಲ್ಲಿ ಹಣ ಕೊಡುತ್ತೇವೆ ಎಂದು ಕುಟುಂಬಸ್ಥರು ಹೇಳಿದ್ದರು. ಆದರೆ ಸಾಲಕ್ಕೆ ಹೆದರಿದ ಯುವಕ ಬುಧವಾರ (ಡಿ.25) ರಂದು ಭಾಲ್ಕಿ ತಾಲ್ಲೂಕಿನ ಸಾಯಗಾಂವ ಗ್ರಾಮ ಸಮೀಪದ ಜ್ಯೋತಿ ತಾಂಡಾ ಬಳಿ ಹೋಗಿ ಮೈಮೇಲೆ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು.
ಶೇ.80% ಸುಟ್ಟ ಗಾಯಗಳಿಂದ ನರಳುತ್ತಿದ್ದ ಯುವಕನನ್ನು ಸ್ಥಳೀಯರು ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೀದರ್ ಬ್ರಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಉಮ್ಮರ್ಗಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಸುಕಿನ ಜಾವ ಸಾವನ್ನಪ್ಪಿದ್ದಾನೆ ಎಂದು ಮೃತರ ಸಹೋದರ ಸಚಿನ್ ಹೊಳ್ಳೆ ಈದಿನ.ಕಾಮ್ ಜೊತೆ ಮಾತನಾಡಿ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ₹15 ಲಕ್ಷಕ್ಕೂ ಅಧಿಕ ಹಣ ಸಾಲ ಮಾಡಿದ, ಅನೇಕ ಸಲ ಬುದ್ಧಿವಾದ ಹೇಳಿ ಸಾಲ ತೀರಿಸಿದ್ದೇವೆ. ಆದರೂ ಕೇಳಲಿಲ್ಲ. ಕೊನೆಗೆ ಅದರಿಂದ ಹೊರಬರಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರು.
ಆನ್‌ಲೈನ್ ಗೇಮಿಂಗ್ ನಿಷೇಧಕ್ಕೆ ಆಗ್ರಹ :
‘ಕಳೆದ ಏಳೆಂಟು ವರ್ಷಗಳಿಂದ ಆನ್‌ಲೈನ್ ಗೇಮ್ಸ್ ಆಡುತ್ತಿದ್ದೇನೆ. ಇದರಿಂದ ಹಣ ಬರುತ್ತೆ ಎಂಬ ಆಸೆಯಿಂದ ಚಟಕ್ಕೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡಿದ್ದೇನೆ.ಆದರೆ ಗೇಮ್ಸ್‌ನಿಂದ ಯಾವುದೇ ಲಾಭವಿಲ್ಲ. ಇಂತಹ ಮೋಸದಾಟ ಯಾರೂ ಆಡಬೇಡಿ ಎಂದು ಮೃತ ಯುವಕ ವಿಜಯಕುಮಾರ್ ನಿನ್ನೆ ಮನವಿ ಮಾಡಿದ್ದನು.
ಆನ್‌ಲೈನ್ ಗೇಮ್ಸ್ ಸಾಲಕ್ಕೆ ಹೆದರಿ ಲಕ್ಷಾಂತರ ಹಣ ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ತಿಳಿದು ಬಸವಕಲ್ಯಾಣ ಶಾಸಕ ಶರಣು ಸಲಗರ ಶುಕ್ರವಾರ ಭೇಟಿ ನೀಡಿದ ವೇಳೆ ಫೇಸ್‌ಬುಕ್ ಲೈವ್‌ನಲ್ಲಿ ಈ ಮೇಲಿನಂತೆ ಹೇಳಿದ್ದ ಯುವಕ ಆನ್‌ಲೈನ್ ಗೇಮ್ಸ್ ನಿಷೇಧಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದನು.
ಈ ಸುದ್ದಿ ಓದಿದ್ದೀರಾ? ಯುವಜನರ ಜೀವಕ್ಕೆ ಕುತ್ತು ತರುತ್ತಿರುವ ಮೋಸದಾಟ: ಆನ್‌ಲೈನ್ ಗೇಮಿಂಗ್ ಬಗ್ಗೆ ಇರಲಿ ಎಚ್ಚರ
ಮೆಹಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಭಾರತದ ಅತ್ಯಂತ ಉನ್ನತ ಪ್ರಶಸ್ತಿಗಳು ಪಡೆದ ಕೆಲವೊಂದಿಷ್ಟು ದರಿದ್ರಗಳು ಈ ಆನ್ಲೈನ್ ಆಟದ ರಾಯಭಾರಿ ವಯಸ್ಸಿಕೊಂಡು ಪ್ರಚಾರ ಮಾಡಿ ಯುವಜನತೆ ಪ್ರಾಣಕ್ಕೆ ಕಂಟಕವಾಗಿತ್ತಿದ್ದಾರೆ.
ಈ ಆಟ ಸರಕಾರ ನಿಷೇಧಿಸಬೇಕು.
ಇ ಆನ್ಲೈನ್ ಆಟಕ್ಕೆ ಸರಕಾರವೇ ಸಂಪೂರ್ಣ ಜವಾಬ್ದಾರಿಯಾಗಿದೆ. ಇ ಆಟಗಳಿಂದ ಸರಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ದುಡ್ಡು ಜಿಎಸ್ಟಿ(GST)ರೂಪದಲ್ಲಿ ಆದಾಯ ಬರುತ್ತಿದೆ. ಇನ್ನು ಸಿನೆಮಾ ನಟರು ಇ ಆಟಗಳ ಪ್ರಚಾರ ಮಾಡುತ್ತಿದ್ದಾರೆ. ಯುವ ಜನಾಂಗದ ಭವಿಷ್ಯ ರೂಪಿಸಬೇಕಾದ ಸರಕಾರ ಮತ್ತು ಸಿನಿಮಾ ನಟರಿಗೆ ಧಿಕ್ಕಾರ.