ಈ ದಿನ ಸಂಪಾದಕೀಯ | ಕಳೆದುಹೋದ ವರ್ಚಸ್ಸು ಮತ್ತು ಗೇಲಿಯ ಸರಕಾದ ‘ಹೈಡ್ರಾಮಾ’

Date:

Advertisements
ಕುಸಿದು ಹೋಗಿರುವ ಜನಪ್ರಿಯತೆಯನ್ನು ಇಂತಹ ಕ್ಷುಲ್ಲಕ ಮಾರ್ಗದಲ್ಲಿ ಮರುಪಡೆಯಲು ಯತ್ನಿಸಿದರೆ ಜನರ ಕಣ್ಣಿಗೆ ಗೇಲಿಯ ಸರಕಾಗುತ್ತದೆ. ಇಂತಹ ಕಸರತ್ತುಗಳು ಗಾಳಿ ತುಂಬಿದ ಬಲೂನಿನಂತೆ. ಯಾವುದೋ ಒಂದು ಸಣ್ಣ ಸೂಜಿ ಚುಚ್ಚಿದರೂ ಟುಸ್ಸೆಂದು ಒಡೆದುಹೋಗುತ್ತವೆ.

‘ಈ ಮೂವರಲ್ಲಿ ಉತ್ತಮ ನಟ ಯಾರು?’ -ಹೀಗೊಂದು ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಸಿ.ಟಿ.ರವಿ, ಮುನಿರತ್ನ ಮತ್ತು ಅಣ್ಣಾಮಲೈ’ ಸುತ್ತ ಶುರುವಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಧಾನ ಪರಿಷತ್‌ನಲ್ಲಿ ಅಶ್ಲೀಲವಾಗಿ ನಿಂದಿಸಿದ ಎಂಎಲ್‌ಸಿ ಸಿ.ಟಿ.ರವಿ; ಎಚ್‌.ಐ.ವಿ. ಹನಿಟ್ರ್ಯಾಪ್ ಮತ್ತು ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ, ಮೊಟ್ಟೆ ಏಟಿನ ಖ್ಯಾತಿಯ ಎಂಎಲ್‌ಎ ಮುನಿರತ್ನ; ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯ ಮೇಲೆ ಆದ ಲೈಂಗಿಕ ದೌರ್ಜನ್ಯ ಖಂಡಿಸಿ ಹೋರಾಟ ಮಾಡುತ್ತಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ- ಈ ಮೂವರ ವರಸೆಗಳನ್ನು ನೋಡುತ್ತಿರುವ ಜನರು ಉತ್ತಮ ನಟ ಯಾರು ಎಂದ ವ್ಯಂಗ್ಯವಾಡುತ್ತಿದ್ದಾರೆ. ಈ ಮೂವರು ಕೂಡ ಕಾಕತಾಳೀಯವೆಂಬಂತೆ ಬಿಜೆಪಿಯವರು!

ಇಂತಹ ವ್ಯಂಗ್ಯಗಳು ಸುಖಾಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ. ಮುರಿದು ಹೋಗಿರುವ ವರ್ಚಸ್ಸನ್ನು ಮರುಕಟ್ಟುವ ಯತ್ನದಲ್ಲಿ ರಾಜಕಾರಣಿಗಳು ಸಕಾರಾತ್ಮಕ ದಾರಿಗಳನ್ನು ಹಿಡಿಯದಿದ್ದರೆ, ಅವರ ಹಿನ್ನೆಲೆಗೂ ವರ್ತನೆಗೂ ವ್ಯತ್ಯಾಸ ಕಂಡು ಬಂದಾಗ ಸಾಮಾನ್ಯವಾಗಿ ಜನರಿಗೆ ಗೇಲಿಯ ವಸ್ತುಗಳಾಗುತ್ತಾರೆ. ಅವರು ಮಾಡುವ ಕಸರತ್ತುಗಳು ‘ರಾಜಕೀಯ ಹೈಡ್ರಾಮಾ’ ಎಂಬ ಟೀಕೆಗೆ ಗುರಿಯಾಗುತ್ತವೆ.

ಕೋಮುದ್ವೇಷ ಭಾಷಣಗಳಿಗೆ ಹೆಸರಾದ ಸಿ.ಟಿ.ರವಿ, ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಇದಕ್ಕೆ ಪಕ್ಷದೊಳಗಿನ ಆಂತರಿಕ ಬೇಗುದಿಯೂ ಕಾರಣ ಎನ್ನುತ್ತವೆ ರಾಜಕೀಯ ವಿಶ್ಲೇಷಣೆಗಳು. ಬಿ.ಎಲ್.ಸಂತೋಷ್ ಬಣದ ನೆಚ್ಚಿನ ಮುಖವಾಗಿರುವ ಸಿ.ಟಿ.ರವಿ, ಪಕ್ಷ ನೀಡಿದ ಜವಾಬ್ದಾರಿಗಳನ್ನು ರಾಷ್ಟ್ರಮಟ್ಟದಲ್ಲೂ ನಿಭಾಯಿಸಿದವರು. ಆದರೆ ಸ್ವತಃ ಅವರೇ ಸೋತಾಗ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸದನದ ಒಳಗೆ ಕರೆದುಕೊಳ್ಳಲಾಯಿತು.

Advertisements

ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ರಾಜರಾಜೇಶ್ವರಿನಗರ ಹಲವು ಕಾರಣಗಳಿಗೆ ಸುದ್ದಿಯಾಗಿರುವ ವಿಧಾನಸಭಾ ಕ್ಷೇತ್ರ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಈ ಕ್ಷೇತ್ರದ ಪ್ರಬಲ ಪ್ರತಿಸ್ಪರ್ಧಿ. ಇವರ ವಿರುದ್ಧ ಎರಡು ಸಲ ತಿಣುಕಾಡಿ ಗೆದ್ದಿರುವ ಮುನಿರತ್ನ, ಸಚಿವರಾಗಿಯೂ ಕೆಲಸ ಮಾಡಿದವರು. ಬಿಜೆಪಿಯೊಳಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸ್ವಪಕ್ಷದವರ ಮೇಲೆ ‘ಎಚ್‌.ಐ.ವಿ ಹನಿಟ್ರ್ಯಾಪ್’ ನಡೆಸಲು ಯತ್ನಿಸಿದ ಗುರುತರ ಆಪಾದನೆ ಅವರ ಮೇಲಿದೆ. ಜೊತೆಗೆ ಬಿಜೆಪಿಯ ಕಾರ್ಯಕರ್ತೆಯ ಮೇಲೆ ಅತ್ಯಾಚಾರ ಎಸಗಿರುವ ಸಂಬಂಧ ಪ್ರಕರಣವೂ ದಾಖಲಾಗಿದೆ. ಈಗ ಚಾರ್ಜ್‌ಶೀಟ್‌ಗಳು ಸಲ್ಲಿಕೆಯಾಗುತ್ತಿವೆ.

ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿ ಆಗಿದ್ದ ತಮಿಳುನಾಡಿನ ಅಣ್ಣಾಮಲೈ, ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿಕೊಂಡರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯೂ ಅವರಿಗೆ ದೊರಕಿತು. ಕರ್ನಾಟಕದಲ್ಲಿ ಮಾಧ್ಯಮಗಳ ಕಾರಣಕ್ಕೆ ಅಣ್ಣಾಮಲೈ ‘ಸಿಂಗಮ್’ ಆಗಿ ಬಿಂಬಿತರಾದವರು. ರಾಜಕೀಯ ಪ್ರವೇಶಿಸಿದ ಮೇಲೆ ದಿನಕ್ಕೊಂದು ಸ್ಟಂಟ್ ಪ್ರದರ್ಶಿಸಿ ಸುದ್ದಿಯಾಗುತ್ತಿದ್ದಾರೆ. ದ್ರಾವಿಡ ಚಳವಳಿಗಳ ನೆಲ ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹೀಗಾಗಿ ಸ್ವತಃ ಅಣ್ಣಾಮಲೈ ಅವರೇ ಎರಡು ಸಲ ಚುನಾವಣೆಯಲ್ಲಿ ಸೋತರು. ಈಗ ಅವರಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.

ಈ ಮೂವರು ಬಿಜೆಪಿ ನಾಯಕರು ಇತ್ತೀಚೆಗೆ ನಡೆಸಿದ ಕಸರತ್ತುಗಳು ಸುದ್ದಿ ಮಾಧ್ಯಮಗಳಿಗೆ ಫೇವರಿಟ್! ಸಚಿವೆಯನ್ನು ಅಸಾಂವಿಧಾನಿಕ ಪದಗಳಿಂದ ನಿಂದಿಸಿದರೂ ಸಿ.ಟಿ.ರವಿಯವರನ್ನು ಹೀರೋ ಎಂಬಂತೆ ಬಿಂಬಿಸಲಾಯಿತು. ತಲೆಗೆ ಪೆಟ್ಟಾಗಿದೆ ಎಂದು ಬ್ಯಾಂಡೇಜ್ ಕಟ್ಟಿಕೊಂಡು ಸಿ.ಟಿ.ರವಿ ಸುತ್ತಾಡುತ್ತಿದ್ದಾಗ, ಅವರ ಮನೆಯ ಅಡುಗೆ ಕೋಣೆಗೂ ಹೋದ ಮಾಧ್ಯಮಗಳು, ‘ಸಿ.ಟಿ.ರವಿಗಾಗಿ ಸಿದ್ಧವಾಗುತ್ತಿದೆ ಭರ್ಜರಿ ಭೋಜನ’ ಎಂಬಂತಹ ಕ್ಷುಲ್ಲಕ ವರದಿಗಳನ್ನು ಮಾಡಿದವು. ಗೋದಿ ಮೀಡಿಯಾಗಳಿಂದ ಇದಕ್ಕಿಂತ ಹೆಚ್ಚಿನದ್ದೇನೂ ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಆದರೆ ಯಾವ ವಿಚಾರಕ್ಕೆ ಸಿ.ಟಿ.ರವಿಯವರನ್ನು ಹೊರಹಾಕಬೇಕಿತ್ತೋ, ಅದೇ ವಿಚಾರಕ್ಕೆ ಸಿ.ಟಿ.ರವಿಯವರನ್ನು ಬಿಜೆಪಿ ಪುರಸ್ಕರಿಸಿದ್ದು ರಾಜಕೀಯ ಇಟ್ಟಿರುವ ಕೆಟ್ಟ ಹೆಜ್ಜೆಗಳ ಸೂಚನೆಯೇ ಸರಿ.

ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಮುನಿರತ್ನ ಅವರಿಗೆ ಮೊಟ್ಟೆ ಏಟು ಬಿದ್ದ ತಕ್ಷಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಕುಸುಮಾ ಹನುಮಂತರಾಯಪ್ಪ ಅವರತ್ತ ಮುನಿರತ್ನ ಬೆರಳು ತೋರಿಸಿದರು. ‘ನನ್ನ ಮೇಲೆ ಆಸಿಡ್ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು’ ಎಂದರು. ‘ನನ್ನ ಕೊಲೆ ಮಾಡಲು ಯತ್ನಿಸಲಾಗಿದೆ’ ಎಂದೂ ದೂರಿದರು. ಮೊಟ್ಟೆ ಏಟಿಗೆ ಸುಸ್ತಾಗಿ ಆಸ್ಪತ್ರೆಗೆ ಅಡ್ಮಿಟ್ ಆದರು. ಇವರನ್ನು ಉಪಚರಿಸಲು ಬೆಂಗಳೂರು ಗ್ರಾಮಾಂತರ ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ದೌಡಾಯಿಸಿದರು. ಇದೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಯಿತು. ಜನರು ಗೇಲಿ ಮಾಡಲು ಶುರು ಮಾಡಿದರು. ಮುನಿರತ್ನ ಪ್ರಕರಣ ಪೂರ್ವನಿಯೋಜಿತ ಎಂದು ಮೂದಲಿಸಿದರು.

ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಅಣ್ಣಾಮಲೈ ಹೋರಾಟಕ್ಕೆ ಇಳಿದದ್ದು ಸ್ವಾಗತಾರ್ಹ. ‘ಎಫ್‌ಐಆರ್ ಕಾಪಿ ಸಾರ್ವಜನಿಕವಾಗಿ ಲಭ್ಯವಾಗಿದ್ದು ಹೇಗೆ? ಸಂತ್ರಸ್ತೆಯ ಗುರುತು ಪತ್ತೆಯಾಗಿದ್ದು ಹೇಗೆ? ಸಿ.ಸಿ.ಟಿವಿ ಕೆಟ್ಟು ಹೋಗಿದ್ದು ಏತಕ್ಕೆ?’ ಇತ್ಯಾದಿ ಮೌಲಿಕ ಪ್ರಶ್ನೆಗಳನ್ನು ಅಣ್ಣಾಮಲೈ ಎತ್ತಿದ್ದಾರೆ. ಆದರೆ ಇದಕ್ಕೆ ಹೊರತಾಗಿ ಅವರು ಮಾಡುತ್ತಿರುವ ಪ್ರಹಸನಗಳು ಅಪ್ರಬುದ್ಧತೆಯಿಂದ ಕೂಡಿವೆ. ‘ಡಿಎಂಕೆ ಸರ್ಕಾರವನ್ನು ಕೆಳಗಿಳಿಸುವವರೆಗೂ ಚಪ್ಪಲಿ ಧರಿಸಲ್ಲ, ಅಣ್ಣಾ ವಿವಿಯ ದೌರ್ಜನ್ಯ ಸಂಬಂಧ ದೇವರಿಗೆ ದೂರು ಸಲ್ಲಿಸಲು ಆರು ಮುರುಗನ್ ದೇವಾಲಯಗಳಿಗೆ ಫೆಬ್ರವರಿಯಲ್ಲಿ ಭೇಟಿ ನೀಡುತ್ತೇನೆ’ ಎಂದು ಘೋಷಿಸಿದರು. ಇದರ ಮುಂದುವರಿದ ಭಾಗವಾಗಿ ತಮ್ಮ ನಿವಾಸದ ಎದುರು, ‘ಚಾಟಿಯಲ್ಲಿ ಹೊಡೆದುಕೊಳ್ಳುವ ಕಾರ್ಯಕ್ರಮ’ ನಡೆಸಿದರು. ಈ ವಿನೂತನ ವರಸೆ ಜನರ ಗಮನ ಸೆಳೆಯಿತ್ತಷ್ಟೇ ಅಲ್ಲದೆ, ‘ಐಪಿಎಸ್ ಅಧಿಕಾರಿಯಾಗಿದ್ದ ವ್ಯಕ್ತಿ ಅನಾಗರಿಕನಂತೆ ವರ್ತಿಸುತ್ತಿದ್ದಾರೆ, ಮೌಢ್ಯದ ದಾರಿ ಹಿಡಿದಿದ್ದಾರೆ’ ಎಂಬ ಮೂದಲಿಕೆಗೂ ಗುರಿಯಾದರು.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸಿಸಿಟಿವಿ ಅಳವಡಿಸಿ, ಸೆಕ್ಯುರಿಟಿ ನೇಮಿಸಿದರಷ್ಟೇ ಮಹಿಳಾ ಸುರಕ್ಷತೆ ಸಾಧ್ಯವೇ?

ಈ ಮೂವರು ವ್ಯಕ್ತಿಗಳ ವಿದ್ಯಮಾನದಲ್ಲಿ ಕಾಣುವ ಸಣ್ಣ ಎಳೆ- ಕುಸಿದು ಹೋಗಿರುವ ತಮ್ಮ ವೈಯಕ್ತಿಕ ವರ್ಚಸ್ಸನ್ನು ಮತ್ತೆ ಮರು ರೂಪಿಸುವ ಕಸರತ್ತೆಂಬುದು ಸ್ಪಷ್ಟ. ಅಣ್ಣಾಮಲೈ ವಿಚಾರವನ್ನೇ ತೆಗೆದುಕೊಳ್ಳಿ. ಅವರು ಸಾಮೂಹಿಕ ಹೋರಾಟವನ್ನು ನಡೆಸುವಂತಿದ್ದರೆ, ವಿದ್ಯಾರ್ಥಿನಿಯರ ಮುಖೇನ ಸರಣಿ ಪ್ರತಿಭಟನೆಗಳನ್ನು ಆಯೋಜಿಸಬಹುದಿತ್ತು, ಅಸೆಂಬ್ಲಿ ಎದುರು ಧರಣಿಗೆ ಕೂರಬಹುದಿತ್ತು. ಆದರೆ ಅವರು ಮುನ್ನಲೆಗೆ ತಂದಿರುವುದು ಪಾರಂಪರಿಕವಾಗಿ ಚಾಲ್ತಿಯಲ್ಲಿರುವ ಮೌಢ್ಯಗಳನ್ನು ಮತ್ತು ವೈಯಕ್ತಿಕವಾಗಿ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯತಂತ್ರಗಳನ್ನು. ಧರ್ಮದೊಂದಿಗೆ ಬೆರೆತಿರುವ ಕೆಲವು ಮೌಢ್ಯದ ಎಳೆಗಳನ್ನು ಅಣ್ಣಾಮಲೈ ಬಳಸಿಕೊಳ್ಳಲು ಯತ್ನಿಸುತ್ತಿರುವಂತೆ ಭಾಸವಾಗುತ್ತದೆ.

ಕುಸಿದು ಹೋಗಿರುವ ಜನಪ್ರಿಯತೆಯನ್ನು ಇಂತಹ ಕ್ಷುಲ್ಲಕ ಮಾರ್ಗದಲ್ಲಿ ಮರುಪಡೆಯಲು ಯತ್ನಿಸಿದರೆ ಜನರ ಕಣ್ಣಿಗೆ ಗೇಲಿಯ ವಸ್ತುಗಳಾಗಬೇಕಾಗುತ್ತದೆ. ರಾಜಕೀಯದ ಹೈಡ್ರಾಮಾಗಳು ಹೈಕಮಾಂಡ್ ಧುರೀಣರಿಗೆ ಮೆಚ್ಚುಗೆಯಾಗಬಹುದೇನೋ. ಆದರೆ ಇಂತಹ ಕಸರತ್ತುಗಳು ಗಾಳಿ ತುಂಬಿದ ಬಲೂನಿನಂತೆ. ಯಾವುದೋ ಒಂದು ಸಣ್ಣ ಸೂಜಿ ಚುಚ್ಚಿದರೂ ಟುಸ್ಸೆಂದು ಒಡೆದುಹೋಗುತ್ತವೆ. ಕಳೆದುಹೋದ ವರ್ಚಸ್ಸನ್ನು ಸಕಾರಾತ್ಮಕ, ಸಜ್ಜನಿಕೆಯ ಕಾರ್ಯಕ್ರಮಗಳ ಮೂಲಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಂದಿರುವ ನಡೆಗಳ ಮೂಲಕ ಮರಳಿ ಪಡೆಯಬೇಕು ಎಂಬುದು ರಾಜಕಾರಣಿಗಳಿಗೆ ಪಾಠವಾಗಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X