ದೇಶದ ಅಪ್ರತಿಮ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಸಮಿತಿಯು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಕೆ ಚಮನ್ ಸಾಬ್ ಮಾತನಾಡಿ “ಭಾರತದ ಹದಿನಾಲ್ಕನೇ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಒಂದು ದಶಕದ ಆರ್ಥಿಕತೆಯ ಬೆಳವಣಿಗೆ ಮತ್ತು ಅಭಿವೃದ್ಧಿಯ ನೇತೃತ್ವ ವಹಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಭಾರತವು ತನ್ನ ಅತ್ಯಧಿಕ ಆರ್ಥಿಕ ಬೆಳವಣಿಗೆ ದರವನ್ನು ದಾಖಲಿಸಿತು. ಸರಾಸರಿ ಶೇ.7.7%ರಷ್ಟು ಸುಮಾರು ಎರಡು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಮಾರ್ಪಟ್ಟಿತ್ತು. 2014ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಗೆ ಲಕ್ಷಾಂತರ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಕಾರಣವಾಯಿತು” ಎಂದು ಸ್ಮರಿಸಿದರು.
“ಮನಮೋಹನ್ ಸಿಂಗ್ ಅವಧಿಯಲ್ಲಿ ನಾಗರಿಕರಿಗೆ ಆಹಾರದ ಭದ್ರತೆ, ಕಾನೂನು ಹಕ್ಕು, ಶಿಕ್ಷಣದ ಹಕ್ಕು, ಕೆಲಸ ಮಾಡುವ ಹಕ್ಕು ಮತ್ತು ಮಾಹಿತಿ ಹಕ್ಕುಗಳನ್ನು ಖಾತ್ರಿಪಡಿಸುವ ಮಸೂದೆಗಳ ಅಂಗೀಕರಿಸಿದ ಅವರ ಹಕ್ಕು ಆಧಾರಿತ ಕ್ರಾಂತಿಯು ಭಾರತೀಯ ರಾಜಕೀಯದಲ್ಲಿ ಹೊಸ ಯುಗವನ್ನು ಸೃಷ್ಟಿಸಿತು” ಎಂದು ಅಭಿಪ್ರಾಯಪಟ್ಟರು.
ಉಪ ಮಹಾಪೌರ ಸೋಗಿ ಶಾಂತಕುಮಾರ್ ಮಾತನಾಡಿ, “ಡಾ ಮನಮೋಹನ್ ಸಿಂಗ್ ಭಾರತವು ಆರ್ಥಿಕ ಶಕ್ತಿ ಕೇಂದ್ರವಾಗಲು ಅವರ ದೂರದೃಷ್ಟಿ ಕಾರಣ. ಅವರು ಕಠಿಣ ಪರಿಶ್ರಮ ಮತ್ತು ವಿನಮ್ರ ಹಾಗೂ ಮೃದುವಾಗಿ ಮಾತನಾಡುವ ವರ್ತನೆಗೆ ಹೆಸರುವಾಸಿಯಾಗಿದ್ದರು. ಅವರು ಭಾರತವನ್ನು ಆರ್ಥಿಕವಾಗಿ ಮುಂದಕ್ಕೆ ಕೊಂಡೊಯ್ದ, ಚಿಂತನೆಯ ಮತ್ತು ಸಮಗ್ರತೆಯ ವ್ಯಕ್ತಿಯಾಗಿಯೂ ನೆನಪಿಸಿಕೊಳ್ಳುವ ಪ್ರಧಾನಿಯಾಗಿದ್ದಾರೆ. ಅವರ ನಿಧನದಿಂದ ಕಾಂಗ್ರೆಸ್‌ಗೆ ತುಂಬಲಾರದ ನಷ್ಟವಾಗಿದೆ” ಎಂದು ಸಂತಾಪ ಸೂಚಿಸಿದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಮಾತನಾಡಿ, “ಡಾ. ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಪಂಜಾಬ್‌ನಲ್ಲಿ ಜನಿಸಿದರು. ಅವರು 1957ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ, 1962ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಡಿಫಿಲ್ ಪಡೆದಿದ್ದ ಪ್ರಧಾನಿಯಾಗಿದ್ದರು. ಇಂತಹ ಗಣ್ಯ ವ್ಯಕ್ತಿಗಳನ್ನು ಕಳೆದುಕೊಂಡಿರುವುದಕ್ಕೆ ಅವರ ಅಭಿಮಾನಿಗಳಿಗೆ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಹೇಳಿದರು.
ಈ ಸುದ್ದಿ ಒದಿದ್ದೀರಾ? ವಿಜಯಪುರ | ಅಂಬೇಡ್ಕರ್‌ಗೆ ಅಪಮಾನ; ಕೇಂದ್ರ ಗೃಹ ಸಚಿವ ಅಮಿತ್ ಶಾ ವಜಾಕ್ಕೆ ಆಗ್ರಹ
ಈ ವೇಳೆ ಮೌನಚರಣೆ ಮಾಡುವ ಮುಖಾಂತರ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎ ನಾಗರಾಜ್, ಗಡಿಗುಡಾಳ್ ಮಂಜುನಾಥ್, ಎಸ್ ಮಲ್ಲಿಕಾರ್ಜುನ್, ಜಾಕಿರ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ, ಆಶಾ ಉಮೇಶ್, ಕೊಡಪಾನ್ ದಾದಾಪೀರ್, ರುದ್ರೇಶ್, ಡೋಲಿ ಚಂದ್ರು, ರಾಕೇಶ್, ಜಗದೀಶ್, ಕೇರಂ ಗಣೇಶ, ರೋಷನ್ ದಾದಾಪೀರ್, ಕಲ್ಪತರು ಶ್ರೀನಿವಾಸ್, ಅಕ್ಬರ್ ಭಾಷಾ, ಫಯಾಜ್ ಅಹ್ಮದ್, ಚೇತನ್ ಕುಮಾರ್, ಯುವರಾಜ್, ರಾಧಾಬಾಯಿ, ದಾಕ್ಷಾಯಿಣಿಯಮ್ಮ, ರಾಜೇಶ್ವರಿ, ಕಾವೇರಿ ರಾಜ್, ಕಾವ್ಯ, ಸಂಗೀತ, ಸುಧಾ, ಉಮಾದೇವಿ, ಎಂ ಸುಮಿತ್ರಾ ಲೋಕೇಶ್ ಸೇರಿದಂತೆ ಇನ್ನು ಮುಂತಾದವರು ಇದ್ದರು.