ಮಾಜಿ ಸಂಸದ ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರಿಗೆ ವಂಚನೆ ಮಾಡಿದ ಆರೋಪ ಪ್ರಕರಣ ಸಂಬಂಧ ಐಶ್ವರ್ಯಗೌಡ ಮತ್ತು ಅವರ ಪತಿ ಹರೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಇಂದು ಐಶ್ವರ್ಯ ಗೌಡ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಐಶ್ವರ್ಯ ಗೌಡ ಮತ್ತು ಪತಿ ಹರೀಶ್ ರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ನಾನು ಡಿ ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಐಶ್ವರ್ಯ ಗೌಡ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಐಶ್ವರ್ಯ ಗೌಡ ಎಂಬ ಮಹಿಳೆ 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರು ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರೆ ವನಿತಾ ಐತಾಳ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂಧ ದೂರುದಾರೆ ವನಿತಾ ಅವರು ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, “ಐಶ್ವರ್ಯಗೌಡ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಕರೆದಿದ್ರು, ನಾನು ಅವರ ವಿರುದ್ಧ 8.41 ಕೋಟಿ ಮೌಲ್ಯದ 14 ಕೆಜಿ ಚಿನ್ನ ವಂಚನೆ ಕೇಸ್ ದಾಖಲು ಮಾಡಿದ್ದೀನಿ. ಸೂಕ್ತ ದಾಖಲೆಗಳನ್ನು, ವಾಯ್ಸ್ ರೆಕಾರ್ಡ್‌ಗಳನ್ನು ಪೊಲೀಸರಿಗೆ ಕೊಟ್ಟಿದೇನೆ” ಎಂದು ಹೇಳಿದ್ದಾರೆ.