- ಮಾತೃಪಕ್ಷದ ಕಡೆಗೆ ಒಲವು ತೋರಿಸುತ್ತಿರುವ ಶಿವಸೇನೆಯ ಶಿಂಧೆ ಬಣ ಶಾಸಕರು
- ಆಡಳಿತಾರೂಢ ಬಿಜೆಪಿ-ಶಿವಸೇನೆ ಮೈತ್ರಿಕೂಟದಲ್ಲಿ ಭಿನ್ನಮತ ಎಂದ ಸಾಮ್ನಾ
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಶಿವಸೇನೆಯ 22 ಶಾಸಕರು ಮತ್ತು ಒಂಬತ್ತು ಲೋಕಸಭಾ ಸಂಸದರು ಬಿಜೆಪಿಯ ಮಲತಾಯಿ ಧೋರಣೆಯಿಂದ ಅಸಮಾಧಾನಗೊಂಡಿದ್ದು, ಶೀಘ್ರದಲ್ಲಿಯೇ ಪಕ್ಷ ತೊರೆಯಬಹುದು ಎಂದು ಶಿವಸೇನಾ (ಯುಬಿಟಿ) ಪಕ್ಷದ ಮುಖವಾಣಿ ಸಾಮ್ನಾ ಹೇಳಿದೆ.
ಶಿವಸೇನೆ (ಯುಬಿಟಿ) ಸಂಸದ ವಿನಾಯಕ ರಾವುತ್, “ಶಾಸಕರು ತಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ ಮತ್ತು ಅವರ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿಯಾಗದ ಕಾರಣ ಶಿಂಧೆ ನೇತೃತ್ವದ ಪಕ್ಷ ತೊರೆಯಲು ಬಯಸಿದ್ದಾರೆ. ಶಿವಸೇನೆಯ ಹಿರಿಯ ನಾಯಕ ಗಜಾನನ ಕೀರ್ತಿಕರ್ ಅವರು ಬಿಜೆಪಿಯ ವರ್ತನೆಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ-ಶಿವಸೇನೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಿರುವ ಶಿಂಧೆ ಬಣದ ಸಂಸದ ಗಜಾನನ್ ಕೀರ್ತಿಕರ್, “ಬಿಜೆಪಿ ತಾರತಮ್ಯ ಮಾಡುತ್ತಿದೆ. ನಾವು 13 ಸಂಸದರಿದ್ದು, ಎನ್‌ಡಿಎ ಭಾಗವಾಗಿದ್ದೇವೆ. ನಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಹರಿಸಬೇಕು ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಆದರೆ ಯಾವುದೇ ಕೆಲಸಕಾರ್ಯಗಳು ನಡೆಯುತ್ತಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಸರ್ಕಾರಿ ಉದ್ಯೋಗ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿ ವಂಚನೆ
ರಾಜ್ಯಸಭಾ ಸದಸ್ಯ ಹಾಗೂ ಸಾಮ್ನಾದ ಸಂಪಾದಕರಾದ ಸಂಜಯ್ ರಾವತ್, “ಬಿಜೆಪಿ ಮೊಸಳೆ ಅಥವಾ ಹೆಬ್ಬಾವಿನಂತಿದೆ. ಯಾರ ಜೊತೆ ಹೋದರೂ ಅವರನ್ನು ನುಂಗಲಾಗುತ್ತದೆ. ಅವರು ನಮ್ಮನ್ನು(ಉದ್ಧವ್ ಠಾಕ್ರೆ ಬಣ) ನುಂಗಲು ಪ್ರಯತ್ನಿಸಿದರು. ಆದರೆ ನಾವು ಅವರಿಂದ ದೂರ ಸರಿದೆವು” ಎಂದು ಹೇಳಿದ್ದಾರೆ.
ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಹೊಂದಿದ್ದರೆ, ಏಕನಾಥ್ ಶಿಂಧೆ ಬಣದಲ್ಲಿ 40 ಶಾಸಕರಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ವಿಭಜನೆಪೂರ್ವ ಶಿವಸೇನೆ 23 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ 25ರಲ್ಲಿ 23 ಮತ್ತು ಶಿವಸೇನೆ 23ರಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು.