ಕಳವು ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗಂಗಾವತಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಷ್ಟಗಿ ತಾಲೂಕಿನ ಹನುಮಂತ ಅಲಿಯಾಸ್ ಶೇಷ, ಅಲಿಯಾಸ್ ಜಯರಾಜ ಬಂಧಿತ ಆರೋಪಿ. ಈತ ಗಂಗಾವತಿ ನಗರದ ಮನೆಯೊಂದರಲ್ಲಿ 1999ರಂದು ನಡೆದಿದ್ದ ಕಳವು ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.
ಬಂಧಿತ ಆರೋಪಿ ಹನುಮಂತ ಅಲಿಯಾಸ್ ಶೇಷ ಎಂಬಾತ ಸುಮಾರು 25 ವರ್ಷಗಳಿಂದ ತಲೆಮರೆಸಿಕೊಂಡು ಮಂಗಳೂರು ಹಾಗೂ ಬೆಂಗಳೂರು ನಗರದಲ್ಲಿ ಹೆಸರು ಬದಲಾಯಿಸಿಕೊಂಡು ಜೀವನ ನಡೆಸುತ್ತಿದ್ದ. ಆರೋಪಿ, ಕಳೆದ ಮೂರು ವರ್ಷಗಳಿಂದ ಕುಷ್ಟಗಿ ತಾಲೂಕಿನ ನಿವಾಸಕ್ಕೆ ಆಗಾಗ ಬಂದು ಹೋಗುತ್ತಿದ್ದ ಖಚಿತ ಮಾಹಿತಿಯ ಆಧಾರದ ಮೇಲೆ ಗಂಗಾವತಿ ನಗರಠಾಣೆ ಪಿಎಸ್‌ಐ ಪ್ರಕಾಶ್ ಮಾಳಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಭ್ರೂಣಹತ್ಯೆ ನಡೆಯುತ್ತಿದ್ದರೂ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ: ಡಿವೈಎಫ್‌ಐ ಅರೋಪ
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಎಚ್ ಸಿ ಸುಭಾಷ್ ಚಂದ್ರಗೌಡ ಪಾಟೀಲ, ಗುಂಡಪ್ಪ, ಯಮನೂರಪ್ಪ ಕುಂಬಾರ, ಯಲ್ಲರೆಡ್ಡಿ, ಭೀಮಣ್ಣ ಮೇಟಿ ಇದ್ದರು. ಪೊಲೀಸರ ಕಾರ್ಯಕ್ಕೆ ಎಸ್‌ಪಿ ರಾಮ್ ಅರಸಿದ್ದಿ ಅವರು ಪ್ರಶಂಸೆ ಪತ್ರ ನೀಡಿದ್ದಾರೆ.