ಬೆಲೆ ಕುಸಿತದಿಂದ ಹಾಕಿ ಬಂಡವಾಳವು ಸಿಗದೆ, ಮಾರುಕಟ್ಟೆಗೆ ಸಾಗಿದ ಬಾಡಿಗೆ ಹಣವೂ ದೊರೆಯದ ಕಾರಣದಿಂದಾಗಿ ಕೋಲಾರ ಜಿಲ್ಲೆಯ ರೈತನೊಬ್ಬ ತಾವು ಬೆಳೆದಿದ್ದ ಬಾಳೆ ಹಣ್ಣನ್ನು ಉಚಿತವಾಗಿಯೇ ಹಂಚಿಸಿದ್ದಾರೆ.
ಕೋಲಾರ ಜಿಲ್ಲೆಯ ಕೋಟೆಕನಹಳ್ಳಿಯ ರೈತ ಕೆ.ವೈ ಗಣೇಶ್ ಅವರು ಮೂರು ಎಕರೆ ಭೂಮಿಯಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಸುಮಾರು 2,000 ಬಾಳೆ ಸಸಿಗಳನ್ನು ನಟ್ಟಿದ್ದ ಗಣೇಶ್, ಬೆಳೆಗಾಗಿ ಸುಮಾರು 4.5 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ, ಬಾಳೆ ಬೆಲೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದು, ಸಗಟು ವ್ಯಾಪಾರಿಗಳು ಕೆ.ಜಿ ಹಣ್ಣಿಗೆ ಕೇವಲ 10 ರೂ.ಗಳಂತೆ ಖರೀದಿಸುವುದಾಗಿ ಹೇಳಿದ್ದಾರೆ.
ಸುಮಾರು ಎರಡು ಟನ್ (2,000 ಕೆ.ಜಿ) ಬಾಳೆ ಹಣ್ಣು ಬೆಳೆದಿದ್ದ ಗಣೇಶ್, 10 ರೂ.ಗಳಂತೆ ಮಾರಾಟ ಮಾಡಿದರೆ, ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ಮಾರುಕಟ್ಟೆಗೆ ಕೊಂಡೊಯ್ದರೆ, ಹೆಚ್ಚುವರಿಯಾಗಿ ವಾಹನ ಬಾಡಿಗೆ ಹಣದ ಹೊರೆಯೂ ತಮ್ಮ ಮೇಲೆಯೇ ಬೀಳುತ್ತದೆಂದು ಬಾಳೆ ಹಣ್ಣನ್ನು ತೋಟದಲ್ಲಿ ಉಚಿತವಾಗಿಯೇ ಹಂಚಿದ್ದಾರೆ.
ಈ ಹಿಂದೆ, ಗಣೇಶ ಹಬ್ಬ, ದೀಪಾವಳಿ ಹಗೂ ವರಮಹಾಲಕ್ಷ್ಮಿ ಹಬ್ಬಗಳ ಸಮಯದಲ್ಲಿ ಗಣೇಶ್ ಅವರು ಕೆ.ಜಿಗೆ 60 ರೂ.ಗಳಂತೆ ಸಗಟು ವ್ಯಾಪಾರಿಗಳಿಗೆ ಬಾಳೆ ಹಣ್ಣು ಮಾರಿದ್ದರು. ಆದರೆ, ಈ ಬಾರಿ ಉತ್ತಮ ಬೆಲೆ ಸಿಗದೆ ಗಣೇಶ್ ಕಂಗಾಲಾಗಿದ್ದಾರೆ. ಇದೀಗ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿದ್ದಾರೆ.
“ಬೆಳೆ ಬೆಳೆಯಲು ಸಾಲ ಮಾಡಿದ್ದೇನೆ. ಸಾಲ ತೀರಿಸುವುದರ ಜೊತೆಗೆ, ಹೊಸ ಬೆಳೆ ಬೆಳೆಯಲು ಮತ್ತೆ ಬಂಡವಾಳ ಹೊಂದಿಸಬೇಕು. ಆದರೆ, ಬೆಲೆ ಸಿಗದೆ ನಷ್ಟವಾಗಿದೆ. ಮುಂದೇನು ಮಾಡುವುದು ತೋಚುತ್ತಿಲ್ಲ” ಎಂದು ಗಣೇಶ್ ಹೇಳಿಕೊಂಡಿದ್ದಾರೆ.