ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಮಳೆ ಆರ್ಭಟ ಹೆಚ್ಚಾಗಿದೆ. ನಗರ ವಿವಿಧ ಭಾಗಗಳಲ್ಲಿ ರಸ್ತೆಯ ಮೇಲೆ ಒಂದು ಅಡಿಗೂ ಎತ್ತರದಷ್ಟು ನೀರು ಹರಿಯುತ್ತಿದ್ದು, ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ. ಮಳೆಯ ನಡುವೆ ರಸ್ತೆಯಲ್ಲಿಯೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆಜೆಸ್ಟಿಕ್, ಆರ್‌ಟಿ ನಗರ, ಶ್ರೀರಾಮ್‌ಪುರ, ವಿಜಯನಗರ, ಮಲ್ಲೇಶ್ವರಂ, ರಾಜಾಜಿನಗರ, ಜೆಪಿ ನಗರ, ಜಯನಗರ, ಕೆ.ಆರ್ ಮಾರುಕಟ್ಟೆಯಲ್ಲಿ ಭಾರೀ ಮಳೆಯಾಗಿದೆ. ಜೆ.ಸಿ ರಸ್ತೆ, ಕಾರ್ಪೋರೇಷನ್ ವೃತ್ತ, ಮಾಗಡಿ ರೋಡ್ ಟೋಲ್ ಗೇಟ್ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ. ಜೊತೆಗೆ, 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದೆ.
ಕೆಲವೆಡೆ ಮರಗಳು ಧರೆಗುಳಿವೆ ಮತ್ತು ಮರದ ಕೊಂಬೆಗಳು ಮುರಿದುಬಿದ್ದಿವೆ. ಯುಬಿ ಸಿಟಿ ಬಳಿಕ ಸ್ಟರ್ಲಿಂಗ್ ಅಪಾರ್ಟ್‌ಮೆಂಟ್ ರಸ್ತೆಯಲ್ಲಿ ನೀರು ನುಗ್ಗುತ್ತಿದ್ದು, ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ ಎಂದು ಒಆರ್‌ಆರ್‌ಸಿಎ ಟ್ವೀಟ್ ಮಾಡಿದ್ದು, ವಿಡಿಯೋವೊಂದನ್ನು ಹಂಚಿಕೊಂಡಿದೆ.