ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಿಲಗೊಂಡಿದ್ದು, ಇವತ್ತೋ, ನಾಳೆಯೋ ಬೀಳುವಂತಿದೆ. ಹೀಗಿದ್ದರೂ ಶಾಲಾ ಕಟ್ಟಡ ದುರಸ್ತಿಗೆ ಶಿಕ್ಷಣ ಇಲಾಖೆ ನಿರಾಸಕ್ತಿ ಹೊಂದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ 170ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಶಾಲಾ ಕಟ್ಟಡದಲ್ಲಿ, 8 ಕೊಠಡಿಗಳಿದ್ದು, ಹೊಸದಾಗಿ ನಿರ್ಮಿಸಿರುವ 2 ಕೊಠಡಿಗಳಿವೆ. 6 ಕೊಠಡಿಗಳು ಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದ ಸಮಯದಲ್ಲಿ ಕಟ್ಟಡ ಸೋರುತ್ತದೆ. ಹಳೆ ಕಟ್ಟಡ ಇರುವುದರಿಂದ ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ.
ಒಂದು ಕೊಠಡಿಯಲ್ಲಿ ಒಂದರಿಂದ ಮೂರನೇ ತರಗತಿವರೆಗೆ ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕು. ಇನ್ನೊಂದು ಕೊಠಡಿಯಲ್ಲಿ ನಾಲ್ಕು ಹಾಗೂ ಐದನೇ ತರಗತಿ ವಿದ್ಯಾರ್ಥಿಗಳು ಕೂರಬೇಕು. ಇನ್ನು ಕೆಲವು ತರಗತಿ ವಿದ್ಯಾರ್ಥಿಗಳಿಗೆ ಬಯಲೇ ಪಾಠ ಶಾಲೆಯಾಗಿದೆ ಎನ್ನಲಾಗಿದೆ.

ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಸ್ವಾತಿ ಮಾತನಾಡಿ, “ಶಾಲೆಯಲ್ಲಿ ಮೂಲಸೌಕರ್ಯಗಳು ಸರಿಯಾಗಿಲ್ಲ. ಕೊಠಡಿಗಳಿಲ್ಲದೆ ಎಲ್ಲರೂ ಒಂದೇ ತರಗತಿಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿಯಿದೆ. ಒಂದನೇ ತರಗತಿಯವರೂ ಕೂಡ 8ನೇ ತರಗತಿ ಪಾಠ ಕೇಳುವ ಸ್ಥಿತಿಯಿದೆ” ಎಂದು ಹೇಳಿದರು.
ಗ್ರಾಮದ ನಿವಾಸಿ ರಾಚಣ್ಣ ನಾಯಕ ಮಾತನಾಡಿ, “ಶಾಲೆಯ ಕೊಠಡಿಗಳು ಸರಿಯಿಲ್ಲದ ಕಾರಣ ಸುಮಾರು ಆರೇಳು ವರ್ಷ ಬಯಲೇ ಪಾಠ ಶಾಲೆಯಾಗಿದೆ. ಕೊಠಡಿಗಳ ಮೇಲ್ಛಾವಣಿ ಬಿದ್ದು ಕೆಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಲವು ಬಾರಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ” ಎಂದರು.

“ಶಾಲೆಯ ಹಿಂದೆ ಕೆರೆಯಿದೆ. ಅದರಲ್ಲಿ ಮೂರು ಮೊಸಳೆಗಳು ಸೇರಿಕೊಂಡಿವೆ. ಮಕ್ಕಳು ಮಲಮೂತ್ರ ವಿಸರ್ಜನೆ ಮಾಡಲು ಹೋದರೆ ಆತಂಕದಲ್ಲಿ ಇರಬೇಕಾಗಿದೆ. ಇದರ ಬಗ್ಗೆಯೂ ಸಂಬಂಧಪಟ್ಟ ಆಧಿಕಾರಿಗಳ ಗಮನಕ್ಕೆ ತಂದರೂ ತಮಗೆ ಸಂಬಂಧವಿಲ್ಲದಂತೆ ಇದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸೇವಾ ಆಯೋಗದ(ಕೆಪಿಸಿಸಿ) ರಾಜ್ಯಾಧ್ಯಕ್ಷ ಶಿವ ಶಂಕರಪ್ಪ ಸಾಹುಕಾರ ಮಾತನಾಡಿ, “ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸುತ್ತಲೂ ಸೋರುತ್ತಿದೆ. ಶಾಲೆಯ ಗೋಡೆಗಳು ಬೀಳುವ ಹಂತಕ್ಕೆ ತಲುಪಿವೆ. ಶಾಲೆಯ ಸ್ಥಿತಿ ನಿಜಕ್ಕೂ ಹೇಳತೀರದಾಗಿದೆ. ಶಾಲಾ ಕೊಠಡಿಯಲ್ಲಿ ನಿಂತು ನೋಡಿದರೆ ಒಡೆದ ಹಂಚಿನಿಂದ ಆಕಾಶ ಕಾಣುತ್ತದೆ. ಮಳೆ ಬಂದರೆ ಮಕ್ಕಳು ಪಾಠ ಕೇಳಲು ಹರಸಾಹಸ ಪಡುವಂತಾಗಿದೆ. ಬಿರುಕುಬಿಟ್ಟ ಗೋಡೆಯಿಂದ ನೀರು ತೊಟ್ಟಿಕ್ಕಲು ಆರಂಭವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಐತಿಹಾಸಿಕ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಬೇಕಾಗಿದೆ” ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಶಾಂತ ಸುಗರಯ್ಯ ಸ್ವಾಮಿ ಮಾತನಾಡಿ, “ಶಾಲೆಯ 8 ಕೊಠಡಿಗಳಲ್ಲಿ 6 ಕೊಠಡಿಗಳು ಶಿಥಿಲಗೊಂಡಿವೆ. ಕೊಠಡಿ ಇಲ್ಲದ ಕಾರಣ ಬಯಲಲ್ಲೇ ಪಾಠ ಹೇಳುವ ಸ್ಥಿತಿಯಿದೆ. ಒಳಗಡೆ ಕೂರಿಸೋಣವೆಂದರೆ ಮೇಲ್ಛಾವಣಿ ಯಾವಾಗ ಕುಸಿದು ಬೀಳುತ್ತದೆಯೋ ಎಂಬ ಆತಂಕ. ಹಾಗಾಗಿ ಕೆಲವು ತರಗತಿಗಳನ್ನು ಒಟ್ಟಿಗೆ ಸೇರಿಸಿ ಪಾಠ ಹೇಳುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ದ್ವೇಷವಿರುವ ಸಮಾಜದಲ್ಲಿ ಮಾನವೀಯ ಸಾಹಿತ್ಯ ಅನುವಾದ, ಸೇತುವೆ ನಿರ್ಮಾಣವಿದ್ದಂತೆ: ರಹಮತ್ ತರೀಕೆರೆ
“ಶಾಲೆಗೆ ₹3 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಗ್ರಾಮದ ಕೆಲವು ರಾಜಕೀಯ ಪ್ರಭಾವಗಳಿಂದ ಬೇರೆ ಶಾಲೆಗೆ ವರ್ಗಾವಣೆಯಾಯಿತು. ಶಾಲೆ ಶಿಥಿಲಗೊಂಡಿರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರೂ ಕೂಡ ಬಂದು ಶಾಲೆಯ ಸ್ಥಿತಿಯನ್ನು ವೀಕ್ಷಿಸಿದ್ದಾರೆ. ಇದನ್ನು ಮತ್ತೆ ಅಧಿಕಾರಿಗಳಿಗೆ ಹೇಳಲಾಗುವುದು” ಎಂದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್