ಬಳ್ಳಾರಿ ನಗರದ ಮಾರ್ಕಂಡೇಯ ಕಾಲೋನಿಯ ಅಂಗನವಾಡಿ ಕೇಂದ್ರದ ಸಮೀಪವಿರುವ ರಸ್ತೆಯಲ್ಲಿ ಕಿಡಿಗೇಡಿಗಳು ತಲೆಬುರಡೆ, ಎಲುಬು, ತೆಂಗಿನ ಕಾಯಿ, ಹೂವು ಸೇರಿದಂತೆ ಇತರೆ ಪರಿಕರಗಳನ್ನು ಇಟ್ಟಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಕ್ಷುದ್ರಪೂಜೆಯನ್ನೋ, ಮಾಟ ಮಂತ್ರವನ್ನೋ ಮಾಡಿರುವಂತಹ ಸನ್ನಿವೇಶ ಸೃಷ್ಟಿ ಮಾಡಲಾಗಿದ್ದು, ಇದು ಜನರನ್ನು ಭಯಪಡಿಸಲು ಮಾಡಿರುವ ಕುಚೇಷ್ಟೆ ಎಂದು ಕೆಲ ಮಂದಿ ಅಭಿಪ್ರಾಯಪಟ್ಟರೆ, ಅಮವಾಸ್ಯೆಯಿ ಕಾರಣ ಮಾಟ ಮಂತ್ರ ಮಾಡಿಸಿ ತಮ್ಮ ಹಿತಾಸಕ್ತಿ ಈಡೇರಿಕೆಗಾಗಿ ಆಗಾಗ ಇಂತಹ ಘಟನೆಗಳು ನಡೆಯುತ್ತಿರುತ್ತವೆಂದು ಮತ್ತೆ ಕೆಲವರು ಆತಂಕ ವ್ಯಕ್ತಪಡಿಸಿದರು.
ಪಕ್ಕದಲ್ಲೇ ನೀರಿನ ಟ್ಯಾಂಕ್ ಇದ್ದು, ಜನ ಅದರಲ್ಲಿ ನೀರು ತೆಗೆದುಕೊಂಡು ಹೋಗಲು ಸದ್ಯ ಹಿಂಜರಿಯುತ್ತಿದ್ದು, ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಬ್ರೂಸ್‌ಪೇಟೆ ಪೊಲೀಸರು ಪೌರಕಾರ್ಮಿಕರೊಬ್ಬರನ್ನು ಕರೆಸಿ ತಲೆಬುರುಡೆ, ಎಲುಬುಗಳನ್ನು ಚೀಲದಲ್ಲಿ ತುಂಬಿಸಿ ವಿಲೇವಾರಿ ಮಾಡುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಟೈಲರ್ ಕಲ್ಯಾಣ ಮಂಡಳಿ ರಚಿಸುವಂತೆ ದರ್ಜಿಗಳ ಆಗ್ರಹ
ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಮಾಧ್ಯಮದ ಜತೆಗೆ ಮಾತನಾಡಿ, “ದೇಶ ವೈಜ್ಞಾನಿಕವಾಗಿ ಅಭಿವೃದ್ಧಿಯಾಗಿದ್ದರೂ ಇಂತಹ ಮೂಢನಂಬಿಕೆಗಳಿಂದ ಹೊರ ಬಂದಿಲ್ಲ. ಇಲ್ಲಿ ಪದೇಪದೆ ಇಂತಹ ಮೌಡ್ಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಮಕ್ಕಳು, ಪೋಷಕರು ಆತಂಕಗೊಂಡಿದ್ದಾರೆ. ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.