ಪಾಕಿಸ್ತಾನದ ಹುಡುಗನೊಬ್ಬ ತನ್ನ ದೃಢ ಮತ್ತು ನಿಸ್ವಾರ್ಥ ನಿರ್ಧಾರಕ್ಕಾಗಿ ನೆಟ್ಟಿಗರ ಗಮನ ಸೆಳೆದಿದ್ದಾನೆ. ಆತ ತನ್ನ ಒಬ್ಬಂಟಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿಸಿದ್ದಾನೆ. ತನ್ನ ತಾಯಿ ಮತ್ತೆ ಸಾಂಗತ್ಯ ಜೀವನ ಪಡೆದುಕೊಳ್ಳುವಂತೆ ಮಾಡಿದ್ದಾನೆ.
ಇದು ಭಾರತ ಮತ್ತು ಪಾಕಿಸ್ತಾನದಂತಹ ಪಿತೃಪ್ರಧಾನ/ಪಿತೃಪ್ರಭುತ್ವ ಸಮಾಜದಲ್ಲಿ ಗಂಭೀರ ನಡೆಯಾಗಿದೆ. ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾದರೂ ಸಮಸ್ಯೆಯಿಲ್ಲ. ಆದರೆ, ಹೆಣ್ಣು ಮಾತ್ರ ಒಬ್ಬನನ್ನು ಮಾತ್ರವೇ ಮದುವೆಯಾಗಬೇಕು. ಪತಿ ಸತ್ತ ನಂತರವೂ ಆತನ ನೆನಪಿನಲ್ಲೇ ಜೀವನ ದೂಡಬೇಕು. ಮತ್ತೊಂದು ಮದುವೆಯಾಗಬಾರದು ಎಂಬಂತಹ ಅಲಿಖಿತ ನಿಯಮವನ್ನು ಪಿತೃಪ್ರಭುತ್ವದ ವ್ಯವಸ್ಥೆಯಲ್ಲಿ ಹೇರಲಾಗಿದೆ. ಈ ವ್ಯವಸ್ಥೆಯಲ್ಲಿ ಮರುವಿವಾಹವಾಗಲು ಮುಂದಾಗುವ ವಿಧವೆಯರು ಅಥವಾ ವಿಚ್ಛೇದಿತ ಮಹಿಳೆಯರನ್ನು ದೂಷಿಸಲಾಗುತ್ತದೆ. ಕಳಂಕಿತರಂತೆ ನೋಡಲಾಗುತ್ತದೆ. ಇಂತಹ ಧೋರಣೆಯ ವಿರುದ್ಧ ಬಾಲಕ ಸೆಡ್ಡುಹೊಡೆದು ನಿಂತಿದ್ದು, ಹಲವರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಬಾಲಕನ ನಿರ್ಧಾರವನ್ನು ನೆಟ್ಟಿಗರು ಅತ್ಯುತ್ತಮ ನಡೆ ಎಂದು ಶ್ಲಾಘಿಸಿದ್ದಾರೆ.
ಆ ಚಿಕ್ಕ ಬಾಲಕ ಸಮಾಜದಲ್ಲಿನ ಪಿತೃಪ್ರಭುತ್ವ ಧೋರಣೆಯನ್ನು ಧಿಕ್ಕರಿಸಿದ್ದಾನೆ. ಸಮಾಜಿನ ಅಲಿಖಿತ ನಿಯಮಗಳಿಗೆ ಸವಾಲು ಹಾಕಿದ್ದಾನೆ. ತಾಯಿ ಏಕಾಂಗಿ ಜೀವನ ದೂಡಬಾರದು, ಆಕೆಯೂ 2ನೇ ಮದುವೆಯಾಗಲು ಸ್ವತಂತ್ರಳೆಂದು ಆಕೆಗೆ ವಿವಾಹ ಮಾಡಿಸಿದ್ದಾನೆ.
ಬಾಲಕ ತನ್ನ ತಾಯಿಗೆ 2ನೇ ಮದುವೆ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ತಾಯಿಗೆ ಮದುವೆ ಮಾಡಿಸಿದ ಹುಡುಗನನ್ನು ಅಬ್ಲುಲ್ ಅಹದ್ ಎಂದು ಗುರುತಿಸಲಾಗಿದೆ. ಬಾಲಕನ ನಿರ್ಧಾರವನ್ನು ಶ್ಲಾಘಿಸಿದ ನೆಟ್ಟಿಗರು, “ನೀವು ಆಕೆಗಾಗಿ ಮಾಡಬಹುದಾದ ಅತ್ಯುತ್ತಮ ಕೆಲಸ” ಎಂದು ಕಾಮೆಂಟ್ ಮಾಡಿದ್ದಾರೆ.
“ಈ ವಯಸ್ಸಿನಲ್ಲಿ ಆತನ ಬಹಳ ಸಂವೇದನಾಶೀಲ ಮತ್ತು ಭಾವನಾತ್ಮಕವಾಗಿ ಸವಾಲಿನ ನಿರ್ಧಾರ” ಎಂದು ಕೆಲವರು ಹೇಳಿದ್ದಾರೆ. “ಇದು ಕಠಿಣ ನಿರ್ಧಾರ, ಆದರೆ ನೀವು ಅದನ್ನು ಉತ್ತಮವಾಗಿ ಮಾಡಿದ್ದೀರಿ. ನಿಮ್ಮ ತಾಯಿಯ ಭವಿಷ್ಯ ಮತ್ತು ಜೀವನದ ಬಗ್ಗೆ ಯೋಜಿಸುವ ನೀವು ಒಬ್ಬ ಒಳ್ಳೆಯ ಮಗ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.