ಆಹಾರ ಪ್ರಿಯರನ್ನು ಹೆಚ್ಚಾಗಿ ಸೆಳೆಯುವುದು ಐಸ್ ಕ್ರೀಮ್ ಮತ್ತು ಬಿರಿಯಾನಿ. ಈ ಎರಡನ್ನೂ ಪಾಕಶಾಲೆಯ ಐಕಾನ್‌ಗಳೆಂದೇ ಕರೆಯಲಾಗುತ್ತದೆ. ಐಸ್ ಕ್ರೀಮ್ – ಜಾಗತಿಕವಾಗಿ ಇಷ್ಟಪಡುವ ಸಿಹಿತಿಂಡಿ; ಬಿರಿಯಾನಿ – ಹೆಚ್ಚು ಮಸಾಲೆಗಳು ಮತ್ತು ಘಮಲಿನೊಂದಿಗೆ ಮನಸೂರೆಗೊಳಿಸುವ ಖಾರದ ಖಾದ್ಯ.
ಆದರೆ, ಇವೆರಡೂ ಒಟ್ಟಿಗೆ ಸೇರಿದಾಗ ಏನಾಗುತ್ತದೆ? ಎರಡನ್ನೂ ಸೇರಿಸಿ ತಿನ್ನಲು ಸಾಧ್ಯವೇ? ಆದಾಗ್ಯೂ, ‘ಐಸ್‌ಕ್ರೀಮ್ ಬಿರಿಯಾನಿ’ ಎಂಬ ರೆಸಿಪಿ ವಿಲಕ್ಷವಾಗಿದ್ದರೂ, ಹೊಸ ಪ್ರಯೋಗಕ್ಕೆ ಒಡ್ಡಿಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಅದನ್ನು ಕಂಡು ನೆಟ್ಟಿಗರು ದಿಗ್ಭ್ರಾಂತರಾಗಿದ್ದಾರೆ.
ಮುಂಬೈ ಮೂಲದ ಬೇಕಿಂಗ್ ಅಕಾಡೆಮಿ ನಡೆಸುತ್ತಿರುವ, ಕಂಟೆಂಟ್ ಕ್ರಿಯೇಟರ್ ಕೂಡ ಆಗಿರುವ ಹೀನಾ ಕೌಸರ್ ರಾದ್ ಅವರು ಈ ‘ಐಸ್ ಕ್ರೀಮ್ ಬಿರಿಯಾನಿ’ಯನ್ನು ಸಿದ್ದಪಡಿಸಿದ್ದಾರೆ. ಹೀನಾ ತನ್ನ ಅಕಾಡೆಮಿಯಲ್ಲಿ ಏಳು ದಿನಗಳ ‘ಬೇಕಿಂಗ್ ಕೋರ್ಸ್’ ಪೂರ್ಣಗೊಂಡ ಸಂಭ್ರಮಾಚರಣೆಯ ಭಾಗವಾಗಿ ಫ್ಯೂಷನ್ ಡಿಶ್ (ಐಸ್ ಕ್ರೀಮ್ ಬಿರಿಯಾನಿ)ಯನ್ನು ತಯಾರಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಹೀನಾ ಅವರು ಎರಡು ಬೃಹತ್ ಬಿರಿಯಾನಿ ಪಾತ್ರೆಗಳಲ್ಲಿ ಸ್ಟ್ರಾಬೆರಿ ಐಸ್ ಕ್ರೀಮ್ ಸ್ಕೂಪ್‌ಗಳನ್ನು ಇಟ್ಟುಕೊಂಡಿದ್ದಾರೆ. ವಿಶಿಷ್ಟವಾದ ಭಕ್ಷ್ಯವನ್ನು ಆಹಾರ ಪ್ರಿಯರಿಗೆ ವಿತರಿಸುತ್ತಾರೆ.