2024 ರಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಗಳು

Date:

Advertisements

2024ರ ವರ್ಷ ದೇಶದಲ್ಲಿ ಭಾರತದ ಹಲವು ಸಂತೋಷ ಸಂಗತಿಗಳು, ಬೇಸರದ ವಿಚಾರಗಳು ಹಾಗೂ ಅಚ್ಚರಿಯ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಆಡಳಿತ, ಪ್ರತಿಪಕ್ಷಕ್ಕೆ ಸೋಲು ಗೆಲುವು. ಅಮೆರಿಕ, ಇಂಗ್ಲೆಂಡ್‌ನಲ್ಲಿ ಅಧಿಕಾರರೂಢ ಪಕ್ಷಗಳು ಪರಾಭವಗೊಂಡವು. ಭಾರತವನ್ನು ಮಳೆ ವರ್ಷದಾದ್ಯಂತ ಕಾಡಿತು. ತಮಿಳುನಾಡಿನಲ್ಲಿ ಮಳೆಯಿಂದ ಸಾಕಷ್ಟು ಅನಾಹುತಗಳು ಆದವು. ಕೇರಳದಲ್ಲಂತೂ ವಯನಾಡು ದುರಂತ ಇತಿಹಾಸದಲ್ಲಿ ಉಳಿದು ಹೋಯಿತು. ರೈಲು ಅಪಘಾತಗಳು, ಸತ್ಸಂಗದ ವೇಳೆ ಕಾಲ್ತುಳಿತ ಸೇರಿ ಮುಂತಾದ ದುರಂತಗಳು ಘಟಿಸಿದವು. ಕ್ರೀಡೆಯಲ್ಲಿ ಭಾರತ ಹೇಳಿಕೊಳ್ಳುವಂತಹ ಪ್ರಗತಿ ತೋರದಿದ್ದರೂ ಸಮಾಧಾನ ಪಟ್ಟುಕೊಳ್ಳುವಂತಹ ಸಾಧನೆ ದಾಖಲಾಯಿತು. ಇಂತಹ ಪ್ರಮುಖ ಘಟನೆಗಳ ಸಂಕ್ಷಿಪ್ತ ಇಣುಕು ನೋಟ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಿದ ಮತದಾರ

ಈ ವರ್ಷ ನಡೆದ ಪ್ರಮುಖ ಘಟನೆಗಳಲ್ಲಿ ಲೋಕಸಭೆ ಚುನಾವಣೆ ಪ್ರಮುಖವಾದದು. ದೇಶದ ರಾಜಕೀಯ ನಡೆಯನ್ನು ನಿರ್ಧರಿಸುವ ಚುನಾವಣೆ ಇದಾಗಿತ್ತು. ಏಪ್ರಿಲ್ 19 ಮತ್ತು ಜೂನ್ 1ರ ನಡುವೆ ಏಳು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಮೂರನೇ ಬಾರಿಯೂ ಗೆಲುವು ಗಳಿಸುತ್ತೇನೆ ಎಂದು ವಿಶ್ವಾಸದಲ್ಲಿದ್ದ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಮತದಾರ ತಕ್ಕ ಪಾಠ ಕಲಿಸಿದ. ಫಲಿತಾಂಶದ ನಂತರ ಬಹುಮತ ನೀಡದೆ ಮಿತ್ರಪಕ್ಷಗಳನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ನರೇಂದ್ರ ಮೋದಿ ಅವರು ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಹುಲ್‌ಗಾಂಧಿ ಸತತ ಪ್ರಯತ್ನದ ಫಲವಾಗಿ ಕಾಂಗ್ರೆಸ್‌ ಭಾರತದಲ್ಲಿ ಚೇತರಿಕೆ ಕಂಡಿತು. ಕಾಂಗ್ರೆಸ್ ತನ್ನ 52 ಸ್ಥಾನಗಳಿಂದ 99 ಕ್ಕೆ ಸುಧಾರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

Advertisements

ವಿಧಾನಸಭೆ ಚುನಾವಣೆಗಳಲ್ಲಿ ಕೇಸರಿ ಪಕ್ಷಕ್ಕೆ ಲಾಭ

2024ರಲ್ಲಿ ಒಟ್ಟು 7 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಿಗೆ ವಿಧಾನಸಭೆ ಚುನಾವಣೆ ನಡೆದವು. ಈ ಜನಾಭಿಪ್ರಾಯದಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿಗೆ ಒಂದಷ್ಟು ಲಾಭವಾದರೆ, ಕಾಂಗ್ರೆಸ್‌ ಮೈತ್ರಿ ಪಕ್ಷಗಳು ಎರಡು ರಾಜ್ಯಗಳಲ್ಲಿ ಜಯಗಳಿಸಿತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಎಲ್ಲ ಸಮೀಕ್ಷೆಗಳನ್ನು ತಲೆ ಕೆಳಗೆ ಮಾಡಿದವು. ಏಕೆಂದರೆ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸೋಲಿನ ಕೆಲವೇ ತಿಂಗಳುಗಳ ನಂತರ ಆಡಳಿತಾರೂಢ ಮಹಾಯುತಿಯು ಈ ಮಟ್ಟದಲ್ಲಿ ಗೆಲುವು ಪಡೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಲೋಕಸಭೆ ಚುನಾವಣೆಯ ಸೋಲಿನಿಂದ ಚೇತರಿಸಿಕೊಂಡ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಜಯಗಳಿಸಿತು. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಭಾರಿ ಹಿನ್ನಡೆ ಅನುಭವಿಸಿತು. ಹರಿಯಾಣದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಬಂದರೆ, ಒಡಿಶಾದಲ್ಲೂ ಕೂಡ  ಕೇಸರಿ ಪಕ್ಷ ಯಾರೂ ನಿರೀಕ್ಷಿಸಿರದ ಗೆಲುವನ್ನು ದಾಖಲಿಸಿತು. ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಜಯ ಲಭಿಸಿತು. ಆಂಧ್ರಪ್ರದೇಶದಲ್ಲಿ ಬಿಜೆಪಿ ಮಿತ್ರ ಪಕ್ಷ ಟಿಡಿಪಿ ಬಹುಮತ ಪಡೆದು ಸರ್ಕಾರ ರಚಿಸಿತು. ಜಗನ್‌ ಮೋಹನ್‌ ರೆಡ್ಡಿ ಅವರ ಆಡಳಿತ ವೈಖರಿಯನ್ನು ಟೀಕಿಸುತ್ತಲೇ ಜನರ ಮುಂದೆ ಹೋದ ನಾಯ್ಡು ಸತತ ನಾಲ್ಕನೇ ಬಾರಿ ಸಿಎಂ ಆದರು. ಅವರೊಂದಿಗೆ ಮೈತ್ರಿ ಮಾಡಿಕೊಂಡ ನಟ ಪವನ್‌ ಕಲ್ಯಾಣ ಪಕ್ಷವೂ ಗೆದ್ದು, ಪವನ್‌ ಉಪಮುಖ್ಯಮಂತ್ರಿಯಾದರು.

ಜಾರ್ಖಂಡ್‌ ಹಾಗೂ ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌ ಮಿತ್ರಪಕ್ಷಗಳಾದ ಜೆಎಂಎಂ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌  ಜಯದ ಪತಾಕೆ ಹಾರಿಸಿದವು. ಭೂ ಹಗರಣದಲ್ಲಿ ಸಿಲುಕಿ ಜೈಲು ಪಾಲಾದ ಕಾರಣ ಹೊಸ ವರ್ಷವು ಅವರಿಗೆ ಆಘಾತವನ್ನು ತಂದಿತ್ತು. ಆದಾಗ್ಯೂ, ಆರು ತಿಂಗಳು ಜೈಲಿನಲ್ಲಿದ್ದು ಹೊರ ಬಂದ ನಂತರ ಮತ್ತೆ ಸಿಎಂ ಆದರು. ಚುನಾವಣೆ ಎದುರಿಸಿ ಪ್ರತಿಪಕ್ಷ ಬಿಜೆಪಿಯನ್ನು ಸೋಲಿಸಿ ಮೈತ್ರಿಯೊಂದಿಗೆ ಅಧಿಕಾರ ಹಿಡಿದು ಟೀಕಾಕಾರರಿಗೆ ಉತ್ತರ ನೀಡಿದರು. 2019ರಿಂದ 5 ವರ್ಷ 370 ವಿಧಿ ರದ್ದತಿಯಾಗಿ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟು ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದ ಜಮ್ಮು ಕಾಶ್ಮೀರದಲ್ಲಿ ಒಮರ್‌ ಅಬ್ದುಲ್ಲಾ ನೇತೃತ್ವದ ನ್ಯಾಷನಲ್‌ ಕಾನ್ಫರೆನ್ಸ್‌ ಜಯದ ಪತಾಕೆ ಹಾರಿಸಿತು.

ಇಬ್ಬರು ಸಿಎಂಗಳ ಸೆರೆಮನೆವಾಸ

ದೆಹಲಿ ಅಬಕಾರಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಸ್ಥಾನ ತ್ಯಜಿಸಿ ಪಕ್ಷದ ಸಹೋದ್ಯೋಗಿ ಆತಿಶಿ ಅವರಿಗೆ ಅಧಿಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟರು. ದೆಹಲಿಯ ಜನರು ತಮಗೆ ಕ್ಲೀನ್ ಚಿಟ್ ನೀಡಿದ ನಂತರ ತಾನು ಹುದ್ದೆಯನ್ನು ಸ್ವೀಕರಿಸುತ್ತೇನೆ ಎನ್ನುವ ಪ್ರತಿಜ್ಞೆಯನ್ನು ಮಾಡಿದರು. ಜೆಎಂಎಂ ನಾಯಕ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ 2024 ಕಹಿ ಹಾಗೂ ಸಿಹಿಯ ವರ್ಷವಾಗಿದೆ. ಜನವರಿಯಲ್ಲಿ ಭೂ ಹಗರಣದಲ್ಲಿ ಸಿಲುಕಿ ಜೈಲು ಪಾಲಾದ ಕಾರಣ ಹೊಸ ವರ್ಷವು ಅವರಿಗೆ ಆಘಾತವನ್ನು ತಂದಿತ್ತು. ಆರು ತಿಂಗಳು ಜೈಲಿನಲ್ಲಿದ್ದು ಹೊರ ಬಂದ ನಂತರ ಮತ್ತೆ ಚುನಾವಣೆ ಎದುರಿಸಿ ಪ್ರತಿಪಕ್ಷ ಬಿಜೆಪಿಯನ್ನು ಸೋಲಿಸಿ ಸಿಎಂ ಆದರು.

ದೇಶವನ್ನು ಬೆಚ್ಚಿ ಬೀಳಿಸಿದ ವಯನಾಡು ಭೂಕುಸಿತ

ಕೇರಳದ ವಯನಾಡಿನಲ್ಲಿ ಜುಲೈ 30ರಂದು ಸಂಭವಿಸಿದ ವಿನಾಶಕಾರಿ ಭೂಕುಸಿತ ದೇಶವನ್ನೇ ಬೆಚ್ಚಿ ಬೀಳಿಸಿತು. ದುರಂತದಲ್ಲಿ ಕನಿಷ್ಠ 231 ಜನರು ಸಾವನ್ನಪ್ಪಿ 397ಕ್ಕೂ ಹೆಚ್ಚು ಜನರು ಗಾಯಗೊಂಡರು. ನಿರಂತರ ಮಳೆಯಿಂದಾಗಿ ಭೂಕುಸಿತಗಳು ಉಂಟಾಗಿ ಅನಾಹುತ ಉಂಟಾಗಿತ್ತು. ಇಡೀ ಹಳ್ಳಿಗಳಲ್ಲಿ ಟನ್‌ಗಟ್ಟಲೆ ಮಣ್ಣು ಅವಶೇಷಗಳಾಗಿ ಮಾರ್ಪಟ್ಟಿತ್ತು. 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿ ಮೃತದೇಹಗಳು ಸಿಗದೆ ಪರದಾಡಬೇಕಾಯಿತು. ಆಸ್ತಿಪಾಸ್ತಿ ಕಳೆದುಕೊಂಡ ಸಾವಿರಾರು ಜನರು ತಮ್ಮ ಸ್ವಂತ ಊರನ್ನು ಬಿಟ್ಟು ಸ್ಥಳಾಂತರಗೊಂಡರು.

ಉತ್ತರ ಪ್ರದೇಶದ ಸತ್ಸಂಗದಲ್ಲಿ ಕಾಲ್ತುಳಿತ: 123 ಸಾವು

ಉತ್ತರ ಪ್ರದೇಶದ ಹತ್ರಾಸ್‌ನ ಭಾನ್‌ಪುರ್ ಗ್ರಾಮದಲ್ಲಿ ಜುಲೈ 2ರಂದು ನಡೆದ ಧಾರ್ಮಿಕ ಸಭೆ ಕಾಲ್ತುಳಿತಕ್ಕೆ ತಿರುಗಿ ಕನಿಷ್ಠ 123 ಜನರು ಮೃತಪಟ್ಟರು. ಧಾರ್ಮಿಕ ಕಾರ್ಯಕ್ರಮಕ್ಕಾಗಿ ನೆರೆದಿದ್ದ ಸಾವಿರಾರು ಜನರು ಕಿರಿದಾದ ಮಾರ್ಗಗಳಲ್ಲಿ ಸಿಕ್ಕಿಹಾಕಿಕೊಂಡಾಗ ಕಾಲ್ತುಳಿತ ಸಂಭವಿಸಿತ್ತು. ಜನರು ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಂತೆ ಗಾಬರಿ ಮತ್ತು ಗೊಂದಲ ಉಂಟಾಗಿ, ಉಸಿರುಗಟ್ಟುವಿಕೆ, ಕಾಲ್ತುಳಿತಕ್ಕೆ ಕಾರಣವಾಗಿ ಹಲವರು ಜೀವ ಕಳೆದುಕೊಂಡರು.

ರೈಲು ಅಪಘಾತಗಳು – ಮುಂಬೈ ಹೋರ್ಡಿಂಗ್‌ ದುರಂತ

ಮುಂಬೈನ ಘಾಟ್ಕೋಪರ್ ಉಪನಗರದಲ್ಲಿ ಮೇ 13 ರಂದು ಚಂಡಮಾರುತದ ಸಮಯದಲ್ಲಿ ಅಕ್ರಮ ಹೋರ್ಡಿಂಗ್ ಕುಸಿದು 17 ಜನರು ಸಾವನ್ನಪ್ಪಿ 74 ಮಂದಿ ಗಾಯಗೊಂಡರು. ಸೂಕ್ತ ಪರವಾನಿಗೆ ಇಲ್ಲದೆ ಹಾಕಲಾಗಿದ್ದ ಭಾರೀ ಗಾತ್ರದ ಹೋರ್ಡಿಂಗ್ ಪೆಟ್ರೋಲ್ ಬಂಕ್‌ಗೆ ಬಿದ್ದಿತ್ತು. ದುರಂತದಲ್ಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಮೃತಪಟ್ಟಿದ್ದರು.

2024ರಲ್ಲಿ ಸುಮಾರು 15 ಪ್ರಮುಖ ರೈಲು ದುರಂತಗಳು ಸಂಭವಿಸಿದ್ದು, 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಜೂನ್ 17 ರಂದು, ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯ ನ್ಯೂ ಜಲ್ಪೈಗುರಿ ನಿಲ್ದಾಣದಲ್ಲಿ ಸಂಭವಿಸಿದ ದುರಂತ ಪ್ರಮುಖ ಅಪಘಾತವಾಗಿದೆ. ಈ ಘಟನೆಯಲ್ಲಿ 15 ಜನರು ಸಾವನ್ನಪ್ಪಿ, 60 ಮಂದಿ ಗಾಯಗೊಂಡಿದ್ದರು. ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ವೇಗವಾಗಿ ಬಂದ ಮತ್ತೊಂದು ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಲು ಕಾರಣವಾಯಿತು. ಹಲವಾರು ಬೋಗಿಗಳು ಮಗುಚಿಕೊಂಡವು.

ಕ್ರೀಡೆ

ಭಾರತ ಟಿ20 ವಿಶ್ವಕಪ್‌ ಚಾಂಪಿಯನ್

2024ರಲ್ಲಿ ಟಿ20 ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ ಟೀಂ ಇಂಡಿಯಾ 12 ವರ್ಷಗಳ ಬಳಿಕ ಐಸಿಸಿ ಟೂರ್ನಮೆಂಟ್ ಗೆದ್ದುಕೊಂಡಿತು. 2023ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ತವಕದಲ್ಲಿದ್ದ ರೋಹಿತ್ ಶರ್ಮಾ ತಂಡ ಕೊನೆ ಕ್ಷಣದಲ್ಲಿ ಮುಗ್ಗರಿಸಿತ್ತು. ಸೋಲನ್ನೆ ಸವಾಲಾಗಿ ಸ್ವೀಕರಿಸಿದ ಭಾರತ ತಂಡ  ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ರಾಹುಲ್‌ ದ್ರಾವಿಡ್‌ ಕೋಚಿಂಗ್‌ ಮಾರ್ಗದರ್ಶನದಲ್ಲಿ ಹಾಗೂ ರೋಹಿತ್‌ ಶರ್ಮಾ ನೇತೃತ್ವದಲ್ಲಿ  ಭಾರತವು ಗೆಲುವಿನ ಸಾಧನೆ ಮಾಡಿತು.

ಗುಕೇಶ್ ಕಿರಿಯ ಚೆಸ್ ವಿಶ್ವ ಚಾಂಪಿಯನ್

ಚೆನ್ನೈನ 18 ವರ್ಷದ ಗುಕೇಶ್ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗುಕೇಶ್ ದೊಮ್ಮರಾಜು ಡಿಸೆಂಬರ್ 12 ರಂದು ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದಲ್ಲಿ ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಪರಾಭವಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಕಿರಿಯ ಚಾಂಪಿಯನ್ ಎಂಬ ದಾಖಲೆಯನ್ನು ಹೊಂದಿದ್ದ ರಷ್ಯಾದ ಗ್ಯಾರಿ ಕಾಸ್ಪರೋವ್ ಅವರ ದಾಖಲೆಯನ್ನು ಸರಿಗಟ್ಟಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ…

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 6 ಪದಕ

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಐದು ಕಂಚು ಹಾಗೂ ಒಂದು ಬೆಳ್ಳಿಯೊಂದಿಗೆ 6 ಪದಕಗಳನ್ನು ಜಯಿಸಿತು. ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದರೆ, ಶೂಟರ್ ಮನು ಭಾಕರ್ ಎರಡು ಎರಡೂ ಕಂಚುಗಳನ್ನು ಜಯಿಸಿ ಇತಿಹಾಸ ನಿರ್ಮಿಸಿದರು. ಇನ್ನಿಬ್ಬರು ಶೂಟರ್‌ಗಳಾದ ಸ್ವಪ್ನಿಲ್ ಕುಸಾಲೆ ಮತ್ತು ಸರಬ್ಜೋತ್ ಸಿಂಗ್ ಸಹ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿತು. ಕುಸ್ತಿಪಟು ಅಮನ್ ಶೆಹ್ರಾವತ್ ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಮಹಿಳೆಯರ 49 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಟ್  ಹೆಚ್ಚಿನ ತೂಕ ತೂಕ ಹೊಂದಿದ್ದರಿಂದ ಕೂಟದಿಂದ ಅನರ್ಹಗೊಳಿಸಲಾಯಿತು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಕೂಡ ಈ ಬಾರಿ ಪದಕ ಗೆಲ್ಲಲಿಲ್ಲ.

ವಿದೇಶ

ಅಮೆರಿಕ ಚುನಾವಣೆ : ಟ್ರಂಪ್ ಜಯಭೇರಿ

ಅಮೆರಿಕದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಧ್ಯಕ್ಷೀಯ ಚುನಾವಣೆ ವಿಶ್ವದ ಗಮನ ಸೆಳೆಯುತ್ತದೆ. ಈ ಬಾರಿ ಆಡಳಿತಾರೂಢ ಜೊ ಬೈಡನ್ ಅವರ ಪಕ್ಷವಾದ ಡೆಮಾಕ್ರಟಿಕ್‌ನಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸ್ಪರ್ಧಿಸಿದ್ದರು. ಅತ್ತ, ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಿದ್ದರು. ಇಬ್ಬರ ನಡುವೆ ನಡೆದ ಪೈಪೋಟಿಯಲ್ಲಿ ಟ್ರಂಪ್ ಗೆಲುವು ಸಾಧಿಸಿದರು. ಜನವರಿ 25ರಂದು ಅವರ ಪದಗ್ರಹಣ ಸ್ವೀಕರಿಸಲಿದ್ದಾರೆ.

ಇಂಗ್ಲೆಂಡ್‌ನಲ್ಲಿ ರಿಷಿ ಸುನಕ್ ಸೋಲು

ಭಾರತೀಯ ಮೂಲದ ರಿಷಿ ಸುನಕ್ 2022ರಿಂದ ಅವರು ಇಂಗ್ಲೆಂಡ್‌ನ ಪ್ರಧಾನಿಯಾಗಿದ್ದರು. ಆದರೆ, 2024 ರಲ್ಲಿ ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಸುನಕ್‌ ಅವರ ಕನ್ಸರ್ವೇಟಿವ್ ಪಕ್ಷವು ಸೋಲು ಅನುಭವಿಸಿದ ಕಾರಣ ಪ್ರಧಾನಿ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ ನೀಡಿದರು. ಈ ಚುನಾವಣೆಯಲ್ಲಿ ಲೇಬರ್ ಪಕ್ಷವು ಬಹುಮತವನ್ನು ಗಳಿಸಿ ಕೀರ್ ಸ್ಟಾರ್ಮರ್ ಅವರು ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿದರು.

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ

ಭ್ರಷ್ಟಾಚಾರ ಸೇರಿದಂತೆ ಹತ್ತಾರು ಕಾರಣಗಳಿಂದ ನೆರೆಯ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಅಲ್ಲಿ ಅಧಿಕಾರದಲ್ಲಿದ್ದ ಪ್ರಧಾನಿ ಶೇಖ್ ಹಸೀನಾ ಅವರು ದೇಶ ಬಿಟ್ಟು ಭಾರತಕ್ಕೆ ಪಲಾಯನ ಮಾಡಬೇಕಾಯಿತು. ಪ್ರಸ್ತುತ ಹೊಸ ಸರ್ಕಾರವೊಂದು ರಚನೆಯಾಗಿದ್ದು ನೊಬೆಲ್‌ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಿರಿಯಾದಲ್ಲಿ ಅಸ್ಸಾದ್ ಸರ್ಕಾರ ಪತನ

ಬಂಡುಕೋರರು ರಾಜಧಾನಿ ಡಮಾಸ್ಕಸ್ ಸೇರಿ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದ್ದರಿಂದ ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರ ಸರ್ಕಾರ ಪತನಗೊಂಡಿತು. ಈ ಘಟನೆಯಿಂದ ಅಸ್ಸಾದ್ ದೇಶ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಅಸ್ಸಾದ್ ಆಡಳಿತದ ಪತನದ ನಂತರ, ಸಿರಿಯಾದಲ್ಲಿ ಮಧ್ಯಂತರ ಸರ್ಕಾರ ರಚನೆಗೆ ಪ್ರಯತ್ನಗಳು ಆರಂಭವಾಗಿವೆ.

ಗಣ್ಯರ ನಿಧನ

ಈ ವರ್ಷ ಭಾರತವು ಹಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕಳೆದುಕೊಂಡಿತು. ಇವರಲ್ಲಿ ಕೈಗಾರಿಕೋದ್ಯಮಿ ರತನ್ ಟಾಟಾ, ಸಂಗೀತಗಾರರಾದ ಉಸ್ತಾದ್ ಝಾಕಿರ್ ಹುಸೇನ್ ಮತ್ತು ಉಸ್ತಾದ್ ರಶೀದ್ ಖಾನ್, ಗಾಯಕ ಪಂಕಜ್ ಉದಾಸ್, ಖ್ಯಾತ ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X