ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿರುದ್ಧ ಅಮಿತ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ, ಅವರ ರಾಜೀನಾಮೆಗೆ ಆಗ್ರಹಿಸಿ ಜನವರಿ 9ರಂದು ವಿಜಯನಗರ ಬಂದ್‌ಗೆ ಸಂವಿಧಾನ ಸಂರಕ್ಷಣಾ ಒಕ್ಕೂಟ ಕರೆ ನೀಡಿದೆ.
ವಿಜಯನಗರ ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದು, “ಕೇವಲ ಹೊಸಪೇಟೆ ‘ಬಂದ್’ ಅಲ್ಲ, ಸಂಪೂರ್ಣ ವಿಜಯನಗರ ಜಿಲ್ಲೆಯನ್ನೇ ಬಂದ್ ಮಾಡಲು ಕರೆ ನೀಡಲಾಗಿದ್ದು, ಜನವರಿ 9ರಂದು ಸಂಪೂರ್ಣವಾಗಿ ʼವಿಜಯನಗರ ಬಂದ್ʼಗೆ ನಿರ್ಧರಿಸಲಾಗಿದೆ” ಎಂದರು.
“ಬಂದ್‌ಗೆ ಬಹುತೇಕ ಎಲ್ಲ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್ ಶಾಂತಿಯುತವಾಗಿರುತ್ತದೆ. ಯಾರನ್ನೂ ಒತ್ತಾಯಪೂರ್ವಕ ಬಂದ್ ಮಾಡಿಸುವುದಿಲ್ಲ. ಬಸ್ ಓಡಾಟ, ಆಟೊ, ಟ್ಯಾಕ್ಸಿ ಓಡಾಟಕ್ಕೆ ಅಂದು ಅಡಚಣೆ ಉಂಟಾಗಲಿದೆ. ಕೆಲವೆಡೆ ಹೆದ್ದಾರಿ ತಡೆಯೂ ನಡೆಯುವ ಸಾಧ್ಯತೆಯಿದೆ. ಈ ಹಿಂದೆ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಕುರಿತು ಹೇಳಿಕೆ ನೀಡಿದಾಗಲೂ ಹೊಸಪೇಟೆ ಬಂದ್‌ಗೆ ಕರೆ ಕೊಡಲಾಗಿತ್ತು” ಎಂದು ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಣ್ಣದಮನೆ ಸೋಮಶೇಖರ್ ಹೇಳಿದರು.
“ಅಂಬೇಡ್ಕರ್ ಕುರಿತ ಅವಹೇಳನ ಅಕ್ಷಮ್ಯ, ಅದನ್ನು ಖಂಡಿಸಬೇಕಾದುದು ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆಯಿಟ್ಟ ಪ್ರತಿಯೊಬ್ಬರ ಅದ್ಯ ಕರ್ತವ್ಯ. ಈ ಹೋರಾಟಕ್ಕೆ ಅಂಜುಮನ್ ಕಮಿಟಿಯ ಸಂಪೂರ್ಣ ಬೆಂಬಲವಿದೆ “ಎಂದು ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್‌ಎನ್‌ಎಫ್ ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಈ ಸುದ್ದಿ ಓದಿದೀರಾ? ವಿಜಯನಗರ | ಅಂಬೇಡ್ಕರ್ ವಿಚಾರಗಳು ಎಲ್ಲರ ಬದುಕಿಗೆ ದಾರಿದೀಪ: ದಾವಲ್ ಸಾಬ್ ಎ ನೀಲಗುಂದ
“ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು, ಕೃಷಿ, ಕೂಲಿ, ಕಟ್ಟಡ ಕಾರ್ಮಿಕರ ಸಂಘಟನೆಗಳು ಕೈಜೋಡಿಸುವುದರಿಂದ ಬಂದ್ ಯಶಸ್ವಿಯಾಗುವ ವಿಶ್ವಾಸವಿದೆ” ಎಂದು ಸಂಘಟನೆಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಡಿ ವೆಂಕಟರಮಣ, ಎನ್ ವೆಂಕಟೇಶ, ರಮೇಶ್, ದೇವರಮನೆ ಕನ್ನೇಶ್ವರ, ಜಿ ಶಿವಕುಮಾರ, ಕುಬೇರಾ ದಲ್ಲಾಳಿ, ನಿಂಬಗಲ್ ರಾಮಕೃಷ್ಣ, ಎನ್ ಯಲ್ಲಾಲಿಂಗ, ದೊಡ್ಡಬಸಪ್ಪ, ರಾಮಚಂದ್ರ ಬಾಬು, ಕೆ ರವಿಕುಮಾರ ನೂರ್ ಅಹ್ಮದ್, ಮೊಹಿಸಿನ್ ಕೊತ್ವಾಲ್, ತಾಯಪ್ಪ ನಾಯಕ ಇದ್ದರು.