ವಡಗೇರಾ : ಕೇಂದ್ರ ಸಚಿವ ಸಂಪುಟದಿಂದ ಅಮಿತ್ ಶಾ ವಜಾಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಜಂಟಿ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ವಡಗೇರಾ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಪಾಟೀಲ್ ಮಾತನಾಡಿ, ʼರಾಜ್ಯಸಭೆಯಲ್ಲಿ ಸಚಿವ ಅಮಿತ್ ಷಾ ಅವರು ಡಾ.ಅಂಬೇಡ್ಕರ್ ಬಗ್ಗೆ ಕೀಳಾಗಿ ಮಾತನಾಡಿದ್ದು ಖಂಡನೀಯವಾಗಿದೆ. ದೇಶದ ಅಸಂಖ್ಯಾತ ಜನರ ಬದುಕಿಗೆ ಬೆಳಕಾದ ಬಾಬಾ ಸಾಹೇಬ್ ಅವರನ್ನು ಅಪಮಾನ ಮಾಡಿದ್ದು ಸಹಿಸುವುದಿಲ್ಲ. ಕೂಡಲೇ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ದೇಶದ ಜನತೆಗೆ ಕ್ಷಮೆಯಾಚಿಸಬೇಕುʼ ಎಂದು ಆಗ್ರಹಿಸಿದರು.
ಸಾಹಿತಿ ಸಿದ್ದಣ್ಣ ಪೂಜಾರಿ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಹಿಂದೆ ಕಾಂಗ್ರೆಸ್ ಪಕ್ಷದವರು ಅಪಮಾನಿಸಿದ್ದರು. ಇದೀಗ ಬಿಜೆಪಿ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದೆ. ಈ ಪಕ್ಷಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸುವುದೇ ಫ್ಯಾಷನ್ ಆಗಿದೆ. ವಿಶ್ವವೇ ಅಂಬೇಡ್ಕರ್ ಅವರನ್ನು ಸ್ಮರಿಸುತ್ತದೆ. ಆದರೆ ದೇಶದಲ್ಲಿ ಅಂಬೇಡ್ಕರ್ ಆದರ್ಶಗಳನ್ನು ಒಪ್ಪಿಕೊಳ್ಳದ ಮನಸ್ಥಿತಿಯವರು ನಿರಂತರವಾಗಿ ಅವಮಾನ ಮಾಡುತ್ತಿದ್ದಾರೆ. ಇಂತ ಜನಪ್ರತಿನಿಧಿಗಳಿಂದ ದೇಶದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಅಮಿತ್ ಶಾ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದರೂ ಯಾವುದೇ ಕ್ರಮ ಜರುಗಿಸದೇ ಇರುವುದು ಖಂಡನೀಯವಾಗಿದೆ. ತಕ್ಷಣವೇ ಅವರನ್ನು ಸಂಪುಟದಿಂದ ವಜಾಗೊಳಿಸಿ, ದೇಶದ್ರೋಹ ಪ್ರಕರಣ ದಾಖಲಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹೊಟ್ಟೆಯಲ್ಲೇ ಮಗು ಸಾವು; ಚಿಕಿತ್ಸೆ ಫಲಿಸದೆ ತಾಯಿಯೂ ಮರಣ
ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಘಾಳೆಪ್ಪ ಪೂಜಾರಿ, ರಂಗನಾಥ ಬಾಗ್ಲಿ, ನಿಂಗಣ್ಣ ಕರಡಿ, ಮಲ್ಲಣ್ಣ ನೀಲಹಳ್ಳಿ, ಶರಣು ವಡಗೇರಾ, ಸಿದ್ದಣ್ಣ ಹುಬ್ಬಳ್ಳಿ, ಬಾಲಪ್ಪ ಪೂಜಾರಿ ಸೇರಿದಂತೆ ದಲಿತ ಹಾಗೂ ರೈತಪರ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು