ಮದ್ಯ ವ್ಯಸನಕ್ಕೆ ತುತ್ತಾಗಿದ್ದ ಯುವಕನೊಬ್ಬ ಮದ್ಯಪಾನ ಮಾಡಲು ತನ್ನ ತಾಯಿ ಹಣ ಕೊಡಲಿಲ್ಲವೆಂದು ಮನೆಯ ಬಳಿಯಿದ್ದ ವಿದ್ಯುತ್ ಕಂಬ ಹತ್ತಿ, ಹೈಟೆನ್ಷನ್ ವಿದ್ಯುತ್ ವೈರ್ ಮೇಲೆ ಮಲಗಿರುವ ಆತಂಕಕಾರಿ ಘಟನೆ ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ನಡೆದಿದೆ.
ಮಾನ್ಯಂ ಜಿಲ್ಲೆಯ ಎಂ ಸಿಂಗಾಪುರಂ ಗ್ರಾಮದ ಯುವಕ ಯಜ್ಜಲ ವೆಂಕಣ್ಣ ಎಂಬಾತ ಇಂತಹ ದುಸ್ಸಾಹಸ ಮಾಡಿದ್ದಾನೆ. ಸದ್ಯ, ಆ ಸಮಯದಲ್ಲಿ ವಿದ್ಯುತ್ ಇಲ್ಲದಿದ್ದ ಕಾರಣ, ಆತನಿಗೆ ಯಾವುದೇ ಅಪಾಯವಾಗಿಲ್ಲ. ಆತನನ್ನು ಗ್ರಾಮಸ್ಥರು ಬೈದು ಕೆಳಗಿಳಿಸಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಿನನಿತ್ಯ ಮದ್ಯಪಾನ ಮಾಡುತ್ತಿದ್ದ ವೆಂಕಣ್ಣ ಮನೆಯಲ್ಲಿ ತಾಯಿಯೊಂದಿಗೆ ಜಗಳವಾಡುತ್ತಿದ್ದ. ಹೊಸ ವರ್ಷದ ಹಿನ್ನೆಲೆ ಮದ್ಯಪಾನ ಮಾಡಲು ತನ್ನ ತಾಯಿಯ ಬಳಿ ವೆಂಕಣ್ಣ ಹಣ ಕೇಳಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದ್ದು, ತಾಯಿಯೊಂದಿಗೆ ಜಗಳವಾಡಿದ ವೆಂಕಣ್ಣ ವಿದ್ಯುತ್ ಕಂಬ ಹತ್ತಿ, ವಿದ್ಯುತ್ ತಂತಿಗಳ ಮೇಲೆ ಮಲಗಿದ್ದಾನೆ ಎಂದು ಹೇಳಲಾಗಿದೆ.
ಆತನ ಪುಂಡಾಟವನ್ನು ನೋಡಿದ ಗ್ರಾಮಸ್ಥರು ತಾವೇ ಮದ್ಯಪಾನಕ್ಕೆ ಹಣ ಕೊಡುವುದಾಗಿ ಹೇಳಿ, ಆತನನ್ನು ಕಳೆಗಿಳಿಸಿದ್ದಾರೆ.