2024ರಲ್ಲಿ ಟುಸ್ ಆದ ಮೋದಿ ವರ್ಚಸ್ಸು!!!

Date:

Advertisements

ಕಳೆದ ಎರಡು ಬಾರಿ ಸ್ವಂತ ಬಲದಿಂದ ಅಧಿಕಾರದ ಚುಕ್ಕಾಣಿ ಏರಿದ್ದ ಮೋದಿ ಅವರು 2024ರಲ್ಲಿ ಪ್ರಾದೇಶಿಕ ಪಕ್ಷಗಳ ನೆರವು ಪಡೆದುಕೊಂಡು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಪ್ರಮಾಣ ವಚನ ಪಡೆದ ಮೊದಲನೇ ದಿನ ಸಂವಿಧಾನಕ್ಕೆ ತಲೆಬಾಗಿದ್ದ ಮೋದಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದಾರೆ ಎಂಬುದು ಗೊತ್ತಿಲ್ಲದೇ ಇರುವ ವಿಚಾರವೇನೂ ಅಲ್ಲ. ಸಂವಿಧಾನದ ಆಶಯದಂತೆ ಎಲ್ಲ ಧರ್ಮದವರನ್ನೂ ಸಮಾನತೆಯಿಂದ ಕಾಣಬೇಕಾದ ಮೋದಿ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಜನರ ಸಂಪತ್ತನ್ನ ಹೆಚ್ಚು ಮಕ್ಕಳು ಹೊರುವವರಿಗೆ ಹಂಚಿಕೆ ಮಾಡುತ್ತದೆ” ಎಂಬ ಕೋಮು ದ್ವೇಷ ಭಾಷಣ ಮಾಡಿ ತಮ್ಮ ಮನಸ್ಥಿತಿಯನ್ನು ಅನಾವರಣ ಮಾಡಿದ್ದರು. ಕೋಮುವಾದವನ್ನೇ ಜೀವಾಳ ಮಾಡಿಕೊಂಡಿರುವ ಮೋದಿ ಅವರು ಸದಾ ತಮ್ಮ ಭಾಷಣದಲ್ಲಿ ನಡೆ-ನುಡಿಯಲ್ಲಿ ವ್ಯಕ್ತಪಡಿಸುತ್ತಾರೆ.

ಸತತ ಮೂರನೇ ಬಾರಿಗೆ ಪ್ರಧಾನಿಯಾದರೂ ಮೋದಿ ಅವರಿಗೆ ದೇಶದ ಆರ್ಥಿಕತೆಯನ್ನು ವೇಗವಾಗಿ ಹೆಚ್ಚಿಸಲು ಸಾಧ್ಯವಾಗಿಲ್ಲ. ದೇಶದ ಆರ್ಥಿಕತೆ ಆಮೆಗತಿಯಲ್ಲಿ ಸಾಗುತ್ತಿದೆ ಎನ್ನುವುದಕ್ಕಿಂತ ತೆವಳುತ್ತಿದೆ ಎಂದೇ ಹೇಳಬಹುದು. ಆದಾಗ್ಯೂ, 5 ಟ್ರಿಲಿಯನ್ ಡಾಲಿರ್ ಆರ್ಥಿಕತೆ, ವಿಶ್ವಗುರು, ರಷ್ಯಾ-ಉಕ್ರೇನ್ ಯುದ್ದವನ್ನೇ ನಿಲ್ಲಿಸಿದೆ ಎಂಬಂತಹ ಹಸಿ-ಹುಸಿ ಸುಳ್ಳುಗಳ ಫೋಸು ಕೊಡುತ್ತಲೇ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ.

ಆದರೆ, ಈಗ ಮೋದಿ ಮತ್ತು ಅವರ ಬಿಜೆಪಿಯ ಬಣ್ಣ ಬಯಲಾಗುತ್ತಿದೆ. ಅವರದೇ ಪಕ್ಷದ ನಾಯಕರ ಸುತ್ತಲೂ ಕ್ರಿಮಿನಲ್ ಆರೋಪಗಳು ಸುತ್ತುತ್ತಿವೆ. ಬಿಜೆಪಿಯ ರಾಜಕೀಯ ಸ್ಥಿತಿಯೂ ನಿರ್ಣಾಯಕವಾಗಿ ದುರ್ಬಲಗೊಂಡಿದೆ. ಹೀಗಾಗಿ, 2024ರಲ್ಲಿ ಮೋದಿ ಮತ್ತೆ ಪ್ರಧಾನಿಯಾದರೂ, ಅವರು ಭಾರೀ ಹಿನ್ನಡೆ ಅನುಭವಿದ್ದಾರೆ. ವರ್ಚಸ್ಸು ಕಳೆದುಕೊಂಡಿದ್ದಾರೆ. ಮೋದಿ ಅಲೆ ಮಾಯವಾಗಿದೆ.

Advertisements

ವಾಷಿಂಟನ್‌ನಲ್ಲಿರುವ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಶನಲ್ ಸ್ಟಡೀಸ್‌ನ ಹಿರಿಯ ಸಲಹೆಗಾರ ಮತ್ತು ದಕ್ಷಿಣ ಏಷ್ಯಾ ರಾಜಕೀಯ ತಜ್ಞ ರಿಕ್ ರೊಸ್ಸೋವ್, “ಮೋದಿ ಅವರ ವಿಚಾರದಲ್ಲಿ 2024ರ ವರ್ಷವು ನಿರೀಕ್ಷೆಗಿಂತಲೂ ಗಡುಸಾದ ವರ್ಷವಾಗಿದೆ. ಮೋದಿ ಅವರು ವಿಶ್ವದ ಇತರ ಕೆಲವು ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರಿಗಿಂತ ರಾಜಕೀಯವಾಗಿ ಉತ್ತಮವಾಗಿ ತಂತ್ರ ಹೆಣೆದರೂ, ಆ ಮೂಲಕ ಗುರುತಿಸಿಕೊಂಡಿದ್ದರೂ, ಅವರು ಈ ವರ್ಷ ಭಾರೀ ಪೆಟ್ಟು ತಿಂದಿದ್ದಾರೆ. ಇದರ ಪರಿಣಾಮವಾಗಿ ಅವರ ಸ್ಟಾರ್ ಗಿರಿ ಸ್ವಲ್ಪ ಮಸುಕಾಗಿದೆ” ಎಂದು ಹೇಳಿದ್ದರು.

 modi

ಭಾರತದ ಆರ್ಥಿಕ ಅನಿಶ್ಚಿತತೆಯ ನಡುವೆ ಭಾರತದ ಹಣಕಾಸು ಮಾರುಕಟ್ಟೆಗಳು ಕಳೆಗುಂದುತ್ತಿವೆ. 2024ರ ಸೆಪ್ಟೆಂಬರ್ ಅಂತ್ಯದಿಂದ ಕುಸಿಯುತ್ತಿರುವ ಸ್ಥಳೀಯ ಶೇರುಗಳಿಂದಾಗಿ ಗ್ಲೋಬಲ್ ಫಂಡ್ಗಳು ಸುಮಾರು 10 ಶತಕೋಟಿ ಡಾಲರ್ ಹೂಡಿಕಯನ್ನು ಹಿಂಪಡೆದುಕೊಂಡಿವೆ. ಇದು, ಆರ್ಥಿಕತೆಯ ಮೇಲೆ ಮತ್ತಷ್ಟು ಹೊಡೆತ ಬೀಳಲಿದೆ. ಅಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯವು ದಾಖಲೆಯ ಕುಸಿತ ಕಂಡಿದೆ. ಪ್ರಸ್ತುತ 84 ರೂಪಾಯಿಗೆ ಬಂದು ನಿಂತಿದೆ.

ಈಗಾಗಲೇ, 2024ರಲ್ಲಿ ಭಾರತದ ನೆರೆಹೊರೆಯ ರಾಷ್ಟ್ರಗಳಲ್ಲಿ ಹಲವಾರು ಸವಾಲುಗಳು ಎದುರಾಗಿವೆ. ಇವು, ಭಾರತದ ಮೇಲೂ ಪರಿಣಾಮ ಬೀರಿವೆ. ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯ ವಿರುದ್ದದ ಹೋರಾಟವು ಹಿಂಸಾಚಾರಕ್ಕೆ ನಾಂದಿ ಹಾಡಿತ್ತು.

ಮೋದಿ ಅವರು ಮಿತ್ರರಾದ ಶೇಖ್ ಹಸೀನಾರನ್ನು ಬಾಂಗ್ಲಾ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಲಾಗಿದೆ. ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದೆ. ಭಾರತಕ್ಕೆ ಪಲಾಯನ ಮಾಡಿ, ಭಾರತದಲ್ಲೇ ನೆಲೆಸಿರುವ ಹಸೀನಾರನ್ನು ಬಾಂಗ್ಲಾಗೆ ಮರಳಿ ಕಳಿಸುವಂತೆ ಬ್ಲಾಂಗ್ಲಾ ನೋಟಿಸ್ ಕಳಿಸಿದೆ. ಇದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಕಳಚುವ ಸಾಧ್ಯತೆಯನ್ನೂ ಸೂಚಿಸುತ್ತಿದೆ.

ಇನ್ನು, ಭಾರತದೊಂದಿಗೆ ಪ್ರವಾಸೋದ್ಯಮ ಒಪ್ಪಂದ ಮಾಡಿಕೊಂಡಿದ್ದ ಮಾಲ್ಡೀವ್ಸ್, 2024ರಲ್ಲಿ ಚೀನಾ ಪರವಾಗಿ ವಾಲಿಕೊಂಡಿದೆ. ಚೀನಾದೊಂದಿಗೆ ಹೆಚ್ಚು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಆ ಮೂಲಕ, ಭಾರತ-ಮಾಲ್ಡೀವ್ಸ್ ನಡುವಿನ ಸಂಬಂಧವು ಹಳಸಿದೆ.

economic

ಶ್ರೀಲಂಕಾದಲ್ಲಿ, ಪ್ರಭಾವ ಉಳಿಸಿಕೊಳ್ಳಲು ಭಾರತ ಮತ್ತು ಪ್ರಭಾವ ಬೆಳೆಸಿಕೊಳ್ಳಲು ಚೀನಾ ಪೈಪೋಟಿಗಿಳಿದಿವೆ. ಆರ್ಥಿಕ ದಿವಾಳಿತನದಿಂದ ಮೇಲೇರಲು ಹವಣಿಸುತ್ತಿರುವ ಶ್ರೀಲಂಕಾ ಕೂಡ ಚೀನಾಗೆ ಹೆಚ್ಚು ಮಣೆ ಹಾಕಲು ಪ್ರಯತ್ನಿಸುತ್ತಿದೆ.

ಕೆನಡಾದಲ್ಲಿ ನಡೆದ ಖಲಿಸ್ತಾನಿ ಹೋರಾಟಗಾರನ ಕೊಲೆ ಪ್ರಕರಣದಲ್ಲಿ ಭಾರತದ ವಿರುದ್ಧ ಕೆನಡಾ ನಿರಂತರ ವಾಗ್ದಾಳಿ ನಡೆಸುತ್ತಿದೆ. ಗಂಭೀರ ಆರೋಪಗಳನ್ನು ಮಾಡಿದೆ. ಪರಿಣಾಮವಾಗಿ, ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹಾಳಾಗಿದೆ. ಉಭಯ ರಾಷ್ಟ್ರಗಳು ತಮ್ಮ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿವೆ.

ಸ್ವದೇಶದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚುತ್ತಿದೆ. ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ, ಕಾಶ್ಮೀರಿ ಜನರು ತಮ್ಮ ಪರವಾಗಿದ್ದಾರೆ ಎಂದು ಹೇಳಿಕೊಂಡಿದ್ದರು. ಆದರೆ, ಇತ್ತೀಚೆಗೆ ನಡೆದ ಅಲ್ಲಿನ ವಿಧಾನಸಭಾ ಚುನಾವಣೆ, ಕೇಂದ್ರ ಸರ್ಕಾರದ ಧೋರಣೆಗೆ ಜಮ್ಮು-ಕಾಶ್ಮೀರ ವಿರುದ್ಧವಿದೆ ಎಂಬುದನ್ನು ಸಾಬೀತುಪಡಿಸಿದೆ.

ಅಯೋಧ್ಯೆಯಲ್ಲಿ 2024ರ ಜನವರಿಯಲ್ಲಿ ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ರಾಮಮಂದಿರ ಕಟ್ಟಿ ಉದ್ಘಾಟನೆ ಮಾಡಿದ್ದರು. ಮಂದಿರವು ತಮಗೆ ರಾಜಕೀಯ ಲಾಭ ತಂದುಕೊಡುತ್ತದೆ ಎಂದು ಮೋದಿ ಭಾವಿಸಿದ್ದರು. ಆದರೆ, ಮೋದಿ ಅವರ ಲೆಕ್ಕಾಚಾರ ಬುಡಮೇಲಾಯಿತು. ಸ್ವತಃ ರಾಮಮಂದಿರ ಇರುವ ಅಯೋಧ್ಯೆ ಕ್ಷೇತ್ರದಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿಲ್ಲ. ಇದು ಮೋದಿ ಅವರಿಗೆ ಭಾರೀ ಮುಖಭಂಗ ಉಂಟುಮಾಡಿತು.

ಲೋಕಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದ ಸರ್ಕಾರ ರಚಿಸಲಾಗದ ಹೀನಾಯ ಸ್ಥಿತಿಗೆ ಮೋದಿ ಬಂದು ನಿಂತರು. ಬಿಹಾರ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಹಂಗಿನಲ್ಲಿ ಸರ್ಕಾರ ರಚಿಸಿದ್ದಾರೆ. ಮೋದಿ ಅವರ ಏಕಚಕ್ರಾಧಿಪತ್ಯ ಕೊನೆಗೊಂಡು, ಮೋದಿ ಅವರು ಜುಟ್ಟನ್ನು ಬಿಹಾರದ ನಿತೀಶ್ ಮತ್ತು ಆಂಧ್ರದ ನಾಯ್ಡು ಭದ್ರವಾಗಿ ಹಿಡಿದುಕೊಂಡಿದ್ದಾರೆ.

ಇದೆಲ್ಲದರ ನಡುವೆ, ಮೋದಿ ಅವರು ತಮ್ಮ ಅತ್ಯಾಪ್ತ ಅದಾನಿಗಾಗಿ ಭಾರೀ ಕೆಲಸ ಮಾಡಿದ್ದಾರೆ. ಸರ್ಕಾರದ ನೀತಿಗಳನ್ನೇ ಬದಲಿಸಿದ್ದಾರೆ. ಇದು, ಭಾರತದ ವ್ಯಾಪಾರ ಸಮುದಾಯದ ಮೇಲೆ ಅದಾನಿ ಹಿಡಿತ ಸಾಧಿಸಲು ಮೋದಿ ನೆರವಾಗುತ್ತಿದ್ದಾರೆ. ಇದು, ಮೋದಿ ಅವರ ಮೇಲೆ ಇತರ ಉದ್ಯಮಿಗಳಲ್ಲಿ ಅಸಹನೆಯನ್ನು ಹುಟ್ಟುಹಾಕಲಿದ್ದು, ರಾಜಕೀಯ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಇಂತಹದ ಸಂದರ್ಭದಲ್ಲಿಯೇ, ಅದಾನಿ ವಿರುದ್ಧ ಅಮೆರಿಕ ಪ್ರಾಸಿಕ್ಯೂಟರ್ಗಳು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸೌರ ವಿದ್ಯುತ್ ಒಪ್ಪಂದಕ್ಕಾಗಿ ಅದಾನಿ ಭಾರತೀಯ ಅಧಿಕಾರಿಗಳಿಗೆ 2,029 ಕೋಟಿ ರೂ. ಲಂಚ ಕೊಟ್ಟಿದ್ದಾರೆ. ಆ ಲಂಚದ ಹಣಕ್ಕಾಗಿ ಅಮೆರಿಕದ ಉದ್ಯಮಿಗಳಿಗೆ ಅದಾನಿ ವಂಚಿಸಿದ್ದಾರೆ ಎಂದು ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದು, ಬಂಧನ ವಾರೆಂಟ್ ಹೊರಡಿಸಿದ್ದಾರೆ.
ಅದಾನಿಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಮುಂದಾಗಿದ್ದು, ಮೋದಿ ಅವರು ಮತ್ತೆ ದೇಶದ ಜನರ ಎದುರು ಬಟಾಬಯಲಾಗಿದ್ದಾರೆ.

ಬಡತನ, ಅಪೌಷ್ಟಿಕತೆ, ನಿರುದ್ಯೋಗ, ಮಹಿಳೆಯರು ಹಾಗೂ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಆದರೆ, ಈ ಎಲ್ಲ ವಿಚಾರಗಳನ್ನು ಮೋದಿ ಅವರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ನೀತಿ-ನಿಯಮಗಳನ್ನು ರೂಪಿಸಿಲ್ಲ ಎಂಬ ಆರೋಪಗಳಿವೆ. ಇನ್ನು, ಎಂಎಸ್ಪಿ ಜಾರಿ ಮತ್ತು ಕಾನೂನು ಖಾತ್ರಿಗಾಗಿ ಪಂಜಾಬ್-ಹರಿಯಾಣ ರೈತರು ಕಳೆದ ಕೆಲವು ತಿಂಗಳುಗಳಿಂದ ಮತ್ತೆ ಹೋರಾಟ ನಡೆಸುತ್ತಿದ್ದಾರೆ. ರೈತ ನಾಯಕ ದಲೈವಾಲಾ ಅವರು 35 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ರೈತ ಹೋರಾಟವು ಮೋದಿ ಅವರ ವೈಫಲ್ಯವನ್ನು ಜಗತ್ತಿನೆರದು ಅನಾವರಣಗೊಳಿಸಿದೆ.

ಜೊತೆಗೆ, ಯುವಜನರು ತಮ್ಮ ಜೀವನವನ್ನು ಸುಧಾರಿಸಲು ಅಥವಾ ಬಡತನದಿಂದ ಹೊರಬರಲು ಬೇಕಿದ್ದ ಲಕ್ಷಾಂತರ ಅವಕಾಶಗಳನ್ನು ಮೋದಿ ಸರ್ಕಾರ ಕಸಿದುಕೊಳ್ಳುತ್ತದೆ” ಎಂದು ಕಾಂಗ್ರೆಸ್ ಆರೋಪಿಸಿದೆ.

ಇದೆಷ್ಟೇ ಅಲ್ಲದೆ, ಮೋದಿ ಅವರು ಬಿಜೆಪಿಯೊಳಗೆ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ, ಬಂಡಾಯಗಳು ಮುನ್ನೆಲೆಗೆ ಬಂದಿವೆ. ಇವೆಲ್ಲವನ್ನೂ ನಿಭಾಯಿಸುವಲ್ಲಿ ಮೋದಿ ನಾಯಕತ್ವ ವಿಫಲವಾಗಿದೆ. ಕೇಲವ ಬಣ್ಣದ ಮಾತುಗಳ ಅರಮನೆಯ ಗೋಡೆಗಳು ಒಂದೊಂದಾಗಿ ಕಳಚಿ ಬೀಳಲಾರಂಭಿಸಿವೆ. ಆ ಬಣ್ಣದ ಗೋಡೆಗಳನ್ನು ಮತ್ತೆ ಕಟ್ಟಿಕೊಳ್ಳುವುದು ಮೋದಿಗೆ 2025ರಲ್ಲಿ ಭಾರೀ ಸವಾಲಿನದ್ದಾಗಿದೆ.

ಸದ್ಯ, 2025ರ ಆರಂಭದಲ್ಲಿ ಮೋದಿ ಎದುರು ಎರಡು ಸವಾಲುಗಳಿವೆ. ಒಂದು, ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ. ಇನ್ನೊಂದು ತಮ್ಮ ಮಿತ್ರನೆಂದೇ ಗುರುತಿಸಿಕೊಂಡಿರುವ ಟ್ರಂಪ್ ಅವರನ್ನು ನಿಭಾಯಿಸುವುದು.

ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆಯಲ್ಲಿ ಮೋದಿ ಅವರು ತಮ್ಮ ಅಣತಿಯಂತೆ ನಡೆದುಕೊಳ್ಳುವ ವ್ಯಕ್ತಿಯನ್ನು ಬಿಜೆಪಿಯ ಉನ್ನತ ಹುದ್ದೆಯನ್ನು ಪ್ರತಿಷ್ಠಾಪಿಸಬೇಕೆಂದು ಹವಣಿಸುತ್ತಿದ್ದಾರೆ. ಆದರೆ, ಮೋದಿ-ಅಮಿತ್ ಶಾ ಧೋರಣೆಯಿಂದಾಗಿ ತಮ್ಮಂದ ಕೈತಪ್ಪಿರುವ ಬಿಜೆಪಿಯನ್ನು ಮತ್ತೆ ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳಬೇಕೆಂದು ಆರ್ಎಸ್ಎಸ್ ಯತ್ನಿಸುತ್ತಿದೆ. ಹೀಗಾಗಿ, ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ನಡುವೆ ಹಲವು ಸುತ್ತುಗಳ ಮಾತುಕತೆಗಳು ನಡೆದರೂ, ಅಧ್ಯಕ್ಷರ ಆಯ್ಕೆ ಜಟಿಲಗೊಂಡಿದೆ.

ಈ ಸುದ್ದಿ ಓದಿದ್ದೀರಾ? 2024 ರಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಗಳು

ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಹೆಸರುಗಳನ್ನು ಬಿಜೆಪಿ ಹೈಕಮಾಂಡ್ಡೇ ಪ್ರಸ್ತಾಪಿಸುತ್ತದೆಯಾದರೂ, ಆರ್ಎಸ್ಎಸ್ಗೆ ಒಪ್ಪಿಗೆಯಾಗುವ ಹೆಸರುಗಳನ್ನು ಬಿಜೆಪಿ ಸೂಚಿಸುತ್ತಿಲ್ಲ. ಬಿಜೆಪಿ ಸೂಚಿಸುತ್ತಿರುವವರೆಲ್ಲರೂ ಮೋದಿ-ಶಾ ಕೈಗೊಂಬೆಗಳಂತೆ ನಡೆದುಕೊಳ್ಳುವವರು. ಹೀಗಾಗಿ, ಅವರನ್ನು ಆಯ್ಕೆ ಮಾಡಲು ಆರ್ಎಸ್ಎಸ್ ಸಿದ್ದವಾಗಿಲ್ಲ. ಇದೇ ಜನವರಿಯಲ್ಲಿ ಅಧ್ಯಕ್ಷರ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ. ಆದರೆ, ಮೋದಿ-ಶಾ ಧೋರಣೆಗೆ ಆರ್ಎಸ್ಎಸ್ ಮಣಿಯುವುದೇ ಅಥವಾ ಆರ್ಎಸ್ಎಸ್ ಹಠಕ್ಕೆ ಮೋದಿ ಮಣಿಯುವರೇ ಎಂಬುದು ಗಂಭೀರ ವಿಚಾರ. ಬಿಜೆಪಿ ಅಧ್ಯಕ್ಷರ ಮೋದಿ ಮಾತಿಗೆ ಮಣೆ ಹಾಕದಿದ್ದರೆ, ಮೋದಿ ಅವರ ಆಟಕ್ಕೆ ದೊಡ್ಡ ಬ್ರೇಕ್ ಬೀಳಲಿದೆ.

ಇನ್ನು, ಅಮೆರಿಕದಲ್ಲಿ ಮೋದಿ ಅವರ ಆಪ್ತ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಲಿದ್ದಾರೆ. ಸದ್ಯ, ಎರಡು ರಾಷ್ಟ್ರಗಳ ನಡುವೆ ತೆರಿಗೆ ವಿಚಾರದಲ್ಲಿ ಪೈಪೋಟಿ ನಡೆಯುತ್ತಿದೆ. ಭಾರತವು ಅಮೆರಿಕದ ಕೆಲವು ಉತ್ಪನ್ನಗಳ ಮೇಲೆ 100% ಆಮದು ಶುಲ್ಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ, ತಾವೂ 100% ತೆರಿಗೆ ವಿಧಿಸುವುದಾಗಿ ಟ್ರಂಪ್ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಮೊದಲೇ ತುಘಲಕ್ ರೀತಿಯಲ್ಲಿ ಆಡಳಿತ ನಡೆಸುವ ಟ್ರಂಪ್, ಭಾರತದೊಂದಿಗೆ ಸಂಬಂಧವನ್ನು ಜಟಿಲಗೊಳಿಸುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಇದು, ಭಾರತ ಮತ್ತು ಅಮೆರಿಕ ನಡುವಿನ 40 ಶತಕೋಟಿ ಡಾಲರ್ ವ್ಯಾಪಾರ ವಹಿವಾಟು ನಡೆಸುವ ಒಪ್ಪಂದಗಳಿಗೆ ಅಪಾಯವನ್ನುಂಟುಮಾಡಬಹುದು ಎಂದು ಹೇಳಲಾಗುತ್ತಿದೆ.

ಜೊತೆಗೆ, ಫೆಬ್ರವರಿ ಮತ್ತು ನಂತರದ ದಿನಗಳಲ್ಲಿ ಬಿಹಾರ ಮತ್ತು ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ದೆಹಲಿಯನ್ನು ಸುದೀರ್ಘ 10 ವರ್ಷಗಳ ಎಎಪಿ ಆಡಳಿತದಿಂದ ಕಸಿದುಕೊಳ್ಳುವುದು ಮೋದಿಗೆ ಮತ್ತೊಂದು ಸವಾಲಾಗಿದೆ. ಅಲ್ಲದೆ, ಬಿಹಾರದಲ್ಲಿ ನಿತೀಶ್ ಅವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಮಟ್ಟಿಗೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡುವುದೂ ಕೂಡ ಮೋದಿಯ ಮುಂದಿದೆ.

ಈ ಎಲ್ಲ ಸವಾಲುಗಳನ್ನು ಮೋದಿ ನಿಭಾಯಿಸುವರೇ, ಮತ್ತೆ ತಮ್ಮ ಚೌಕಿದಾರ್, ವಿಶ್ವಗುರು ಎಂಬ ನೀರಿನ ಗುಳ್ಳೆಗಳನ್ನು ಮತ್ತೆ ಎಬ್ಬಿಸುತ್ತಾರಾ? ಕಾದು ನೋಡಬೇಕಿದೆ…

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X