ಸಾಮಾಜಿಕ ಜಾಲತಾಣದಲ್ಲಿ ನೀಡಲಾಗುವ ಚಾಲೆಂಜ್‌ಅನ್ನು ಪೂರೈಸಲು ಹೋಗಿ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಆ ಪ್ರಕರಣದಲ್ಲಿ ಸೋಷಿಯಲ್ ಮೀಡಿಯಾ ವೇದಿಕೆ ‘ಟಿಕ್‌ಟಾಕ್’ಗೆ ವೆನೆಜುವೆಲಾ ಸುಪ್ರೀಂ ಕೋರ್ಟ್ $10 ಮಿಲಿಯನ್ (85,78,68,500 ರೂ.) ದಂಡ ವಿಧಿಸಿದೆ.
‘ಟಿಕ್‌ಟಾಕ್’ ಚೀನಾ ಮೂಲಕ ಟೆಕ್ ಕಂಪನಿಯ ಬೈಟ್‌ಡ್ಯಾನ್ಸ್ ಒಡೆತನದಲ್ಲಿದೆ. ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿದ್ದ ಚೀನಾದ ವಿರುದ್ಧದ ಕ್ರಮದ ಭಾಗವಾಗಿ 2020ರಲ್ಲಿ ಭಾರತದಲ್ಲಿ ಮೋದಿ ಸರ್ಕಾರ ನಿಷೇಧಿಸಿದ 52 ಚೀನೀ ಆ್ಯಪ್‌ಗಳಲ್ಲಿ ‘ಟಿಕ್‌ಟಾಕ್’ ಕೂಡ ಒಂದು. ಈ ‘ಟಿಕ್‌ಟಾಕ್’ ಭಾರತದಲ್ಲಿಯೂ ಹೆಚ್ಚು ಜನಪ್ರಿಯತೆ ಪಡೆದಿತ್ತು. ಆದರೆ, ಇದು ನಿಷೇಧವಾದ ಬಳಿಕ, ಯುವಜನರು ಇನ್ಸ್‌ಟಾಗ್ರಾಮ್ ಮೇಲೆ ಅವಲಂಬಿತರಾಗಿದ್ದಾರೆ.
ಭಾರತ ಹೊರತುಪಡಿಸಿ ಹಲವಾರು ದೇಶಗಳಲ್ಲಿ ಟಿಕ್‌ಟಾಕ್ ಹೆಚ್ಚಾಗಿ ಬಳಕೆಯಾಗುತ್ತಿದೆ. ವೆನೆಜುವೆಲಾದಲ್ಲಿ ಇತ್ತೀಚೆಗೆ ಟಿಕ್‌ಟಾಕ್‌ನಲ್ಲಿ ಪ್ರಸಾರವಾಗಿದ್ದ ‘ಚಾಲೆಂಜ್’ವೊಂದರ ಭಾಗವಾಗಿ ಅಪಾಯಕಾರಿ ಮಾತ್ರೆಗಳನ್ನು ಸೇವಿಸಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೆ ಟಿಕ್‌ಟಾಕ್ ಕಂಪನಿಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ. ಕಂಪನಿಗೆ ದಂಡ ವಿಧಿಸಲಾಗಿದ್ದು, ಮೇಲ್ವಿಚಾರಣೆಯನ್ನು ನಡೆಸಲು ವೆನೆಜುವೆಲಾದಲ್ಲಿ ಕಚೇರಿಯನ್ನು ತೆರೆಯುವಂತೆ ಟಿಕ್‌ಟಾಕ್ ಕಂಪನಿಗೆ ಅಲ್ಲಿನ ಸುಪ್ರೀಂ ಕೋರ್ಟ್ ಅದೇಶಿಸಿದೆ.
ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ತಾನಿಯಾ ಡಿ’ಅಮೆಲಿಯೊ, “ಹಾನಿಕಾರಕ ವಿಷಯಗಳ ಪ್ರಸಾರವನ್ನು ತಡೆಯಲು ಅಗತ್ಯ ಮತ್ತು ಸಮರ್ಪಕ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಟಿಕ್‌ಟಾಕ್ ವಿಫಲವಾಗಿದೆ” ಎಂದು ಹೇಳಿದ್ದಾರೆ.
“ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಅದಕ್ಕಾಗಿ, ಪರಿಹಾರದೊಂದಿಗೆ ಪೂರ್ಣ ದಂಡವನ್ನು ಎಂಟು ದಿನಗಳಲ್ಲಿ ಪಾವತಿಸಬೇಕು” ಎಂದು ಟಿಕ್‌ಟಾಕ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಆದರೆ, ತೀರ್ಪಿನ ಬಗ್ಗೆ ಟಿಕ್‌ಟಾಕ್ ಇನ್ನೂ ಪ್ರತಿಕ್ರಿಯಿಸಿಲ್ಲ.
ಟಿಕ್‌ಟಾಕ್‌ನ ಜಾಗತಿಕ ಸಮುದಾಯ ಮಾರ್ಗಸೂಚಿಗಳಲ್ಲಿ ತಾನು ಸ್ವಯಂ-ಹಾನಿ ಅಥವಾ ಅಪಾಯಕಾರಿ ಚಟುವಟಿಕೆಗಳನ್ನು ಉತ್ತೇಜಿಸುವ ವಿಷಯವನ್ನು ನಿಷೇಧಿಸುವುದಾಗಿ ಹೇಳಿಕೊಂಡಿದೆ. ಆದರೂ, ತನ್ನದೇ ನಿಯಮಗಳನ್ನು ಟಿಕ್‌ಟಾಕ್ ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂದು ವೆನೆಜುವೆಲಾ ಅಧಿಕಾರಿಗಳು ಆರೋಪಿಸಿದ್ದಾರೆ.
ಗಮನಾರ್ಹವಾಗಿ, ವೆನೆಜುವೆಲಾದಲ್ಲಿ ಸರ್ಕಾರವು ಹಲವಾರು ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ನಿರ್ಬಂಧಗಳು ಹೇರಿದೆ. ಇತ್ತೀಚಿನ ವರೆಗೂ, ಹಿಂದಿನ ಟ್ವಿಟರ್ – ಈಗಿನ ‘ಎಕ್ಸ್’ಗೆ ವೆನೆಜುವೆಲಾದಲ್ಲಿ ಅವಕಾಶ ನೀಡಿರಲಿಲ್ಲ. ‘ಎಕ್ಸ್’ನ ಮಾಲೀಕ ಎಲೋನ್ ಮಸ್ಕ್ ಅವರು ವೆನೆಜುವೆಲಾ ಸರ್ಕಾರದ ವಿರುದ್ಧದ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸರ್ಕಾರ ಆರೋಪಿಸಿದೆ.