ಕಾಲೇಜಿನ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಸಲ್ಪ ದಿನಗಳ ಕಾಲ ದೂರವಾಗಿದ್ದರು. ಹೊಸವರ್ಷದ ಸಂಭ್ರಮಕ್ಕೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಪ್ರಿಯಕರನ ಬಳಿ ಹೋಗಿ ಗಲಾಟೆ ತೆಗೆದ ಪ್ರೇಯಸಿ ಮೊದಲೇ ನಿರ್ಧರಿಸಿದಂತೆ ಚಾಕುವಿನಿಂದ ಇರಿದ ಘಟನೆ ತಡರಾತ್ರಿಯಲ್ಲಿ ನಡೆದಿದೆ.
ಹಾಸನ ತಾಲೂಕಿನ ಎ ಗುಡುಗನಹಳ್ಳಿ ಗ್ರಾಮದ ಮನುಕುಮಾರ್(24) ಪ್ರೇಯಸಿಯಿಂದ ಚಾಕು ಇರಿತಕ್ಕೆ ಒಳಗಾದವರು. ನಗರದ ಬಿಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್‌ನಲ್ಲಿ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಪ್ರೇಯಸಿ ಭವಾನಿ, ಮನುಕುಮಾರ್ ಜತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಳು. ಈ ವೇಳೆ ಇವರಿಬ್ಬರಲ್ಲಿ ಪ್ರೀತಿ ಪ್ರೇಮ ನಡೆಯುತಿತ್ತು. ಕೆಲ ದಿನಗಳಿಂದ ಇಬ್ಬರೂ ಬೇರೆಯಾಗಿದ್ದರು. ಯಾವ ಕರೆ ಕೂಡ ಮಾಡಿರಲಿಲ್ಲ. ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆಂದು ಮನುಕುಮಾರ್ ಸ್ನೇಹಿತರ ಜತೆಗೆ ಖಾಸಗಿ ಹೋಟೆಲ್‌ಗೆ ಬಂದಿದ್ದ ವಿಚಾರ ತಿಳಿದುಕೊಂಡು ಪದೇ ಪದೆ ಭವಾನಿ ಫೋನ್ ಮಾಡಿದ್ದಾಳೆ. ಆದರೂ ಆತ ಫೋನ್ ಕರೆ ತೆಗೆದಿರಲಿಲ್ಲ ಎನ್ನಲಾಗಿದೆ.
ತಡರಾತ್ರಿ 12:30ಕ್ಕೆ ಹೋಟೆಲ್ ಬಳಿ ಬಂದ ಭವಾನಿಯು ಅಲ್ಲೇ ಬಿದ್ದಿದ್ದ ಪಾಸ್ ಒಂದನ್ನು ಕೊರಳಿಗೆ ಹಾಕಿಕೊಂಡು ಗೇಟ್ ಒಳಗೆ ಹೋದಳು. ಅಷ್ಟರಲ್ಲಿ ಮನುಕುಮಾರ್ ಗೇಟ್ ಬಳಿ ಬಂದನು. ಈ ವೇಳೆ ಭವಾನಿ ಹಾಗೂ ಮನುಕುಮಾರ್ ನಡುವೆ ಜಗಳ ಆರಂಭವಾಗಿದೆ. ಮನುಕುಮಾರ್ ಸ್ನೇಹಿತರು ಕೂಡಲೇ ಜಗಳ ಬಿಡಿಸಲು ಮುಂದಾದರು. ನೋಡ ನೋಡುತಿದ್ದಂತೆಯೇ ಈ ವೇಳೆ ಮನುಕುಮಾರ್‌ಗೆ ಭವಾನಿ ಏಕಾಏಕಿ ಚಾಕುವಿನಿಂದ ಇರಿದಳು. ಕೂಡಲೇ ಮನುಕುಮಾರನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ. ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಹೊಸವರ್ಷದ ಸಂಭ್ರಮ-2025; ಮದ್ಯ, ಬಿಯರ್ ಮಾರಾಟದಲ್ಲಿ ಅನಿರೀಕ್ಷಿತ ಕುಸಿತ
ಮನುಕುಮಾರ್ ಹಾಸನದಲ್ಲಿ ಹಾರ್ಡ್‌ವೇರ್ ಮತ್ತು ಪ್ಲೇವುಡ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.