ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಡೆಯಲಿರುವ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಸರಣಿಯಲ್ಲಿ ಮೂವರನ್ನೂ ತಂಡದಿಂದ ಹೊರಗಿಡಲಿದೆ ಎಂದು ವರದಿಯಾಗಿದೆ.
ಈಗ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿ ಮುಗಿದ ಬೆನ್ನಲ್ಲೇ ಇಂಗ್ಲೆಂಡ್ ಜೊತೆಗೆ ಭಾರತ ತಂಡ ಟಿ20 ಹಾಗೂ ಏಕದಿನ ಸರಣಿಯಲ್ಲಿ ಆಡಲು ತೆರಳಲಿದೆ. ಈ ಸರಣಿಗಳಲ್ಲಿ ಭಾರತ ತಂಡದ ಮೂವರು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.
ಭಾರತ ಮತ್ತು ಇಂಗ್ಲೆಷ್ ನಡುವಿನ ಟಿ20 ಸರಣಿ ಜನವರಿ 22ರಿಂದ ಆರಂಭವಾಗಲಿದೆ. ಟಿ20ಯಲ್ಲಿ ಒಟ್ಟು 5 ಪಂದ್ಯಗಳು ಇರಲಿವೆ. ಮುಖ್ಯವಾಗಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಈಗಾಗಲೇ ರೋಹಿತ್ ಮತ್ತು ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ, ಅವರು ಟಿ20ಯಲ್ಲಿ ಭಾರತ ತಂಡದಲ್ಲಿ ಆಡುವುದಿಲ್ಲ. ಇನ್ನು, ಬುಮ್ರಾ ಅವರು ವಿಶ್ರಾಂತಿ ಪಡೆಯಲಿದ್ದಾರೆ.
ಈ ವರದಿ ಓದಿದ್ದೀರಾ?: ಆಹಾರ ಸಮಾನತೆಗೆ ಸರ್ಕಾರದಿಂದ ಮತ್ತೊಂದು ಸ್ವಾಗತಾರ್ಹ ಹೆಜ್ಜೆ
ನಂತರ, ಫೆಬ್ರವರಿ 6ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಏಕದಿನ ಕ್ರಿಕೆಟ್‌ಗೆ ಕೊಹ್ಲಿ, ರೋಹಿತ್, ಬುಮ್ರಾ – ಮೂವರು ನಿವೃತ್ತಿ ಘೋಷಿಸಿಲ್ಲ. ಆದಾಗ್ಯೂ, ಸರಣಿಯಲ್ಲಿ ಮೂವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಯೋಜಿಸಿದೆ. ಈ ಬಗ್ಗೆ ಮೂವರೊಂದಿಗೂ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಬಿಸಿಸಿಐ ಕಾಯುತ್ತಿದೆ.
ಮೂವರೂ ತಂಡದಿಂದ ಹೊರಗುಳಿಯುವುದರಿಂದ ತಂಡ ನಾಯಕರು ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ, ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಇದ್ದಾರೆ. ಅವರೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಏಕದಿನ ಸರಣಿಯಲ್ಲಿ ತಂಡದ ನಾಯಕ ಯಾರಾಗುತ್ತಾರೆ ಎಂಬುದೇ ಪ್ರಶ್ನೆಯಾಗಿದೆ. ಈಗ ತಂಡದ ಉಪನಾಯಕನಾಗಿರುವ ಶುಭ್ಮನ್ ಗಿಲ್ ಅವರು ನಾಯಕತ್ವ ವಹಿಸಬಹುದು ಎಂದೂ ಹೇಳಲಾಗುತ್ತಿದೆ.