ʼಭೀಮಾ ಕೋರೆಗಾಂವ್ ವಿಜಯʼವನ್ನು ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯ ಸತೀಶ್ ಅರವಿಂದ್ ಹೇಳಿದರು.
ದಾವಣಗೆರೆ ನಗರದ ಬೂದಾಳ್ ರಿಂಗ್ ರೋಡ್‌ನಲ್ಲಿ ಆಯೋಜಿಸಲಾಗಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಇತಿಹಾಸದ ಪುಟಗಳಲ್ಲಿ ಶೋಷಿತ ಸಮುದಾಯಗಳ ಹೋರಾಟಗಳು ಅಡಗಿಹೋಗಿವೆ. ಅದರಲ್ಲಿ 1818ರಲ್ಲಿ ಮಹಾರ್ ಸೈನಿಕರಿಗೂ ಮತ್ತು ಮಹಾರಾಷ್ಟ್ರದ ಪೇಶ್ವೆಗಳ ನಡುವೆ ನಡೆದ ಭೀಮಾ ಕೋರೆಗಾಂವ್ ಯುದ್ಧವು ಪ್ರಮುಖವಾದದ್ದು. ಅಸ್ಪೃಶ್ಯತೆ, ಜಾತಿಯ ಶೋಷಣೆ ಮತ್ತು ಗುಲಾಮಗಿರಿಯ ವಿರುದ್ಧ ಎರಡನೇ ಭಾಜಿರಾವ್‌ನ 28,000 ಪೇಶ್ವೆ ಸೈನಿಕರನ್ನು ಸ್ವಾಭಿಮಾನಿಗಳಾದ 500 ಜನ ಮಹಾರ್ ಸೈನಿಕರು ಹಗಲು ರಾತ್ರಿ ಯುದ್ದಮಾಡಿ ವಿಜಯಶಾಲಿಯಾಗಿರುವುದು ಅವಿಸ್ಮರಣೀಯ ಎಂದರೆ ತಪ್ಪಾಗಲಾರದು” ಎಂದು ಅಭಿಪ್ರಾಯಪಟ್ಟರು.
“ಪುಣೆಯ ಭೀಮಾ ನದಿಯ ದಡದಲ್ಲಿ ನಡೆದ ಯುದ್ಧದ ನೆನಪಿಗಾಗಿ ವಿಜಯ ಸ್ಥಂಭವನ್ನು ನಿರ್ಮಾಣ ಮಾಡಿರುವ ಬಗ್ಗೆ ಭಾರತದಲ್ಲಿ ಎಲ್ಲೂ ಅದರ ಕುರುಹು ಇರಲಿಲ್ಲ. ಅಂಬೇಡ್ಕರ್ ಅವರು ಲಂಡನ್‌ನಲ್ಲಿ ಓದುತ್ತಿದ್ದಾಗ ಕೆಲವೊಂದು ದಾಖಲಾತಿಗಳಲ್ಲಿ ಕೋರೆಗಾಂವ್‌ನ ಕುರುಹು ಕುರಿತು ಮಾಹಿತಿ ಲಭ್ಯವಾಗುತ್ತದೆ. 1927ರಲ್ಲಿ ಅಂಬೇಡ್ಕರ್ ಅವರು ವಿಜಯ ಸ್ಥಂಭಕ್ಕೆ ಭೇಟಿ ನೀಡುತ್ತಾರೆ. ಅಲ್ಲಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ದೇಶದ್ಯಾಂತ ಪಸರಿಸುತ್ತದೆ. ಇದು ದಲಿತರ ಸ್ವಾಭಿಮಾನದ ವಿಜಯೋತ್ಸವ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕತ್ತಲಾಗಿದ್ದ ಬುದ್ದಿನ್ನಿ ಸರ್ಕಾರಿ ಪ್ರೌಢಶಾಲೆ; ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಇಲಾಖೆ
ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಕರ್ನಾಟಕ ಜನಶಕ್ತಿಯ ಆದಿಲ್ ಖಾನ್, ಪವಿತ್ರ, ಯಲ್ಲಪ್ಪ, ಆಂಜಿನಪ್ಪ, ರವೀಂದ್ರ, ಸುರೇಶ್, ಅಶ್ಲಾಕ್, ಹನುಮಂತಪ್ಪ ಕರೂರು, ಹನುಮಂತಪ್ಪ, ಯಮಾನೂರಿ, ಬಸವರಾಜ್ ಹಾಗೂ ಎಲ್ಲ ದಲಿತ, ದಮನಿತರು, ಅಂಬೇಡ್ಕರ್ ಅಭಿಮಾನಿಗಳು ಮತ್ತು ಪ್ರಗತಿಪರರು ಇದ್ದರು.