ಸುಶಿಕ್ಷಿತ ಮಹಿಳೆಯರು ವಿಧಾನಸಭೆ ಮತ್ತು ಲೋಕಸಭೆಯಂತಹ ನೀತಿ ನಿರೂಪಣೆಯ ಜಾಗಗಳಲ್ಲಿ ಇರಬೇಕು ಎಂಬ ಆಶಯ ಕಾರ್ಯರೂಪಕ್ಕೆ ಬರುತ್ತಿರುವುದು ಶುಭಸೂಚಕ
2024 ವರ್ಷ ಕಳೆದು ನಾವು 2025ಕ್ಕೆ ಕಾಲಿರಿಸಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷದಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ, ಸದ್ದು ಮಾಡಿದ, ಕೇಂದ್ರ ಸರ್ಕಾರದ ನಿದ್ದೆಗೆಡಿಸಿದ ಮಹಿಳಾ ರಾಜಕಾರಣಿಗಳನ್ನು ನಾವು ಮರೆಯುವಂತಿಲ್ಲ. ಅದರಲ್ಲೂ ಸದನದಲ್ಲಿ ತಮ್ಮ ಮೊನಚಾದ ಭಾಷಣದಿಂದ ಕೇಂದ್ರ ಸಚಿವರುಗಳು ಉತ್ತರ ನೀಡಲು ತಡಕಾಡುವಂತೆ ಮಾಡಿದ ಹೆಂಗಳೆಯರನ್ನು ಇತಿಹಾಸ ಬದಿಗೊತ್ತದು.
ಸುಮಾರು ಎರಡು ದಶಕಗಳಿಂದ ಪಕ್ಷದ ಇತರರಿಗಾಗಿ ಚುನಾವಣಾ ಪ್ರಚಾರ ಮಾಡುತ್ತಾ ಬಂದಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ 2024ರಲ್ಲಿ ಕೊನೆಗೂ ಸಂಸತ್ತು ಪ್ರವೇಶಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಬೀದಿಗಿಳಿದು ಕಾಂಗ್ರೆಸಿಗರ ಪರ ಪ್ರಚಾರ ಮಾಡುತ್ತಾ, ಮಾಡುತ್ತಾ ಜನರ ನಾಡಿಮಿಡಿತವನ್ನು ಬಲ್ಲ ಪ್ರಿಯಾಂಕಾ, ಸಹೋದರನಿಂದ ತೆರವಾದ ಕೇರಳದ ವಯನಾಡು ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಸಂಸದರಾಗಿದ್ದಾರೆ.
ಇನ್ನೊಂದೆಡೆ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದರೂ 2024ರಲ್ಲಿ ಲೋಕಸಭೆ ಪ್ರವೇಶಿಸಿದಾಗ ತನ್ನ ಮೊನಚಾದ ಭಾಷಣದಿಂದ ಬಿಜೆಪಿಗರ ನಿದ್ದೆ ಕೆಡಿಸಿದ್ದಾರೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ. ಇವೆಲ್ಲವುದರ ನಡುವೆ ಹೊಸದಾಗಿ 2024ರಲ್ಲೇ ರಾಜಕೀಯಕ್ಕೆ ಎಂಟ್ರಿ ನೀಡಿ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರು ಮಾಜಿ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್.
ಜನಮನ ಗೆದ್ದ ಪ್ರಿಯಾಂಕಾ ಗಾಂಧಿ
ತನ್ನ ಕುಟುಂಬದ ಎಲ್ಲರೂ ಸೇರಿ ಇತರೆ ಕಾಂಗ್ರೆಸ್ ನಾಯಕರುಗಳ ಪರವಾಗಿ ಬರೋಬ್ಬರಿ 35 ವರ್ಷಗಳಿಂದ ಪ್ರಚಾರ ಮಾಡುತ್ತಾ ಬಂದಿರುವ ಪ್ರಿಯಾಂಕಾ ಗಾಂಧಿ 2024ರಲ್ಲಿ ಕೊನೆಗೂ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ತನ್ನ ಸಹೋದರ ರಾಹುಲ್ ಗಾಂಧಿ ರಾಯ್‌ಬರೇಲಿ ಮತ್ತು ವಯನಾಡಿನ ಪೈಕಿ ರಾಯ್‌ಬರೇಲಿಯನ್ನು ಆಯ್ಕೆ ಮಾಡಿದ ಬಳಿಕ ವಯನಾಡು ಉಪಚುನಾವಣೆ ಕಣಕ್ಕೆ ಪ್ರಿಯಾಂಕಾ ಇಳಿದರು.
ಪ್ರಿಯಾಂಕಾ ಗೆಲ್ಲಬಹುದು, ಆದರೆ ಮತ ಪ್ರಮಾಣ, ಅಂತರ ಕೊಂಚ ಕಡಿಮೆಯಾಗಬಹುದು ಎಂದುಕೊಳ್ಳುತ್ತಿದ್ದ ನಮಗೆ ವಯನಾಡು ಉಪಚುನಾವಣೆ ಫಲಿತಾಂಶ ಅಚ್ಚರಿ ಮೂಡಿಸಿತು. ವಯನಾಡಿನಲ್ಲಿ ರಾಹುಲ್ ಗಾಂಧಿಗಿಂತ ಅಧಿಕ ಮತಗಳ ಅಂತರದಲ್ಲಿ ಭರ್ಜರಿ ಜಯಭೇರಿ ಬೀಸಿದವರು ಪ್ರಿಯಾಂಕಾ. ರಾಹುಲ್ ಗಾಂಧಿ 3.65 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದ್ದರೆ, ಪ್ರಿಯಾಂಕಾ 4 ಲಕ್ಷಕ್ಕೂ ಅಧಿಕ ಮತಗಳ ಅಂತರವನ್ನು ಪಡೆದಿದ್ದಾರೆ.
ಸಂಸತ್ತನ್ನು ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ತನ್ನ ಮೊದಲ ಭಾಷಣದಲ್ಲಿ ಕೇಂದ್ರ ಸಚಿವರುಗಳ ಬೆವರಿಳಿಸಿದರು. ಜೊತೆಗೆ ಜಾತಿ ಗಣತಿ ಬೆಂಬಲಿಸಿದರು. ಹಾಗೆಯೇ ಸಂಸತ್ತಿಗೆ ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ, ಪಾಲೇಸ್ತೀನ್‌ಗೆ ಬೆಂಬಲ ಸೂಚಿಸುವ ಬ್ಯಾಗ್‌ಗಳನ್ನು ಧರಿಸಿ ಬಂದರು. ಬಿಜೆಪಿಗರ ಅಪಪ್ರಚಾರಕ್ಕೆ ತಲೆಕೊಡದೆ ತನ್ನ ಈ ನಡೆಯನ್ನು ಸ್ಪಷ್ಟವಾಗಿ ಸಮರ್ಥಿಸಿಕೊಂಡರು. ನಗು ಮುಖದಲ್ಲೇ ಬಿಜೆಪಿಗರನ್ನು ತಿವಿಯುವ, ಕೇಂದ್ರ ಸರ್ಕಾರವನ್ನು ಅಲುಗಾಡಿಸುವ ದಿಟ್ಟ ನಾಯಕಿ ಪ್ರಿಯಾಂಕಾ ಗಾಂಧಿ.
ಸಾಯೋನಿ ಘೋಷ್ ಎಂಬ ಸ್ಪಷ್ಟ ಭಾಷಣಕಾರ್ತಿ
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರಕ್ಕೆ ಉತ್ತರಿಸಲು ಸಾಧ್ಯವಾಗದಂತೆ ಮಾಡಿದ ಪಶ್ಚಿಮ ಬಂಗಾಳದ ಸಂಸದೆ ಮಹುವಾ ಮೊಯಿತ್ರಾ ಜೊತೆಗೆ 2024ರಲ್ಲಿ ಪಶ್ಚಿಮ ಬಂಗಾಳದಿಂದ ಸಾಯೋನಿ ಘೋಷ್ ಕೂಡಾ ಲೋಕಸಭೆಗೆ ಪ್ರವೇಶಿಸಿದ್ದಾರೆ. ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ 2021ರಲ್ಲಿ ಧುಮುಕಿದ ಸಾಯೋನಿ ಘೋಷ್ 2024ರಲ್ಲಿ ಜಾಧವ್‌ಪುರ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿ 2.5 ಲಕ್ಷ ಬಹುಮತವನ್ನು ಪಡೆದಿದ್ದಾರೆ.
ಮಹುವಾಗೂ ಕೊಂಚ ಅಧಿಕ ತೀಕ್ಷ್ಣವಾದ ವಾಕ್ಚಾತುರ್ಯ ಹೊಂದಿರುವ ಸಾಯೋನಿ ಅಲ್ಲಲ್ಲಿ ಪ್ರಾಸ ಪದಗಳನ್ನು ಬಳಸಿ ಮಾತನಾಡುತ್ತಾ ರೈತರ, ಜನರ ಸಮಸ್ಯೆಯನ್ನು ಸ್ಪಷ್ಟವಾಗಿ ಹೇಳುವವರು. ಗೋವುಗಳನ್ನು ತಮ್ಮ ಮಾತೆ ಎನ್ನುವವರು ಗೋವುಗಳನ್ನು ಯಾವ ರೀತಿ ರಕ್ಷಣೆ ಮಾಡುತ್ತಿದ್ದಾರೆ ಮತ್ತು ಎಷ್ಟೊಂದು ಗೋವುಗಳು ಗೋಶಾಲೆಯಲ್ಲಿ ಆಹಾರ, ನೀರು ಇಲ್ಲದೆ ಸಾವನ್ನಪ್ಪಿದೆ ಎಂಬ ಅಂಕಿಅಂಶವನ್ನು ವಿವರಿಸಿದ ಸಾಯೋನಿ ಭಾಷಣ ಇತ್ತೀಚೆಗೆ ಭಾರೀ ವೈರಲ್ ಆಗಿದೆ.
ರಾಜಕೀಯ ಕುಸ್ತಿಗಿಳಿದ ವಿನೇಶ್ ಫೋಗಟ್
ಪುರುಷ ಪ್ರಧಾನವಾಗಿರುವ ಹರಿಯಾಣ ರಾಜಕೀಯದಲ್ಲಿ ವಿನೇಶ್ ಫೋಗಟ್ ಎಂಟ್ರಿ ಇತಿಹಾಸ ಎನ್ನಬಹುದು. ನೂರಾರು ಜಾಟ್ ಪುರುಷರ ನಡುವೆ ನಿಂತು ತಲೆ ಎತ್ತಿ, ಅಗತ್ಯವಿದ್ದಲ್ಲಿ ರೈತರಿಗೆ ತಲೆಬಾಗಿದವರು ವಿನೇಶ್ ಫೋಗಟ್. 50 ಕೆಜಿ ಕುಸ್ತಿ ಪಂದ್ಯದಲ್ಲಿ ಬರೀ 100 ಗ್ರಾಂ ತೂಕ ಹೆಚ್ಚಳದಿಂದ ಅನರ್ಹಗೊಂಡು ಪದಕವನ್ನು ಕಳೆದುಕೊಂಡವರು ವಿನೇಶ್. ತೂಕ ಇಳಿಸಲು ನಿದ್ದೆಗೆಟ್ಟು ವ್ಯಾಯಾಮ ಮಾಡಿದವರೂ ವಿನೇಶ್ ಕೊನೆಗೆ ಕುಸ್ತಿ ಲೋಕದಲ್ಲಿರುವ ರಾಜಕೀಯದಿಂದ ಬೇಸತ್ತು ಕುಸ್ತಿ ಜೀವನಕ್ಕೆ ವಿದಾಯ ಹೇಳಿ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡಿದರು.
ರಾಜಕೀಯ ಪ್ರವೇಶಕ್ಕೂ ಮುನ್ನವೇ ಮಹಿಳಾ ಕುಸ್ತಿಪಟುಗಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ, ನಿರಂತರ ಧರಣಿ ಪ್ರತಿಭಟನೆ ಸಂಘಟಿಸಿ, ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅನ್ನು ಡಬ್ಲ್ಯುಎಫ್‌ಐ ಮುಖ್ಯಸ್ಥ ಸ್ಥಾನದಿಂದ ಕೆಳಕ್ಕಿಳಿಸಿದ ಕೀರ್ತಿ ವಿನೇಶ್‌ಗೂ ಸೇರಬೇಕು. ಕಾಂಗ್ರೆಸ್ ಕೈತಪ್ಪಿ ಹೋಗಿದ್ದ ಜುಲಾನಾ ಕ್ಷೇತ್ರವನ್ನು 15 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ‘ಕೈ’ಗೆ ಒಪ್ಪಿಸಿದ ಶ್ರೇಯಸ್ಸು ವಿನೇಶ್ ಫೋಗಟ್‌ಗೆ ಸೇರಬೇಕು.
ಅದರಲ್ಲೂ ಪುರುಷರ ಪ್ರಾಬಲ್ಯವಿರುವ ಕ್ರೀಡಾ ಲೋಕದಲ್ಲಿ ಕುಸ್ತಿಪಟುವಾಗಿ ಬೆಳೆದು ಶತಮಾನಗಳ-ಹಳೆಯ ಸಾಮಾಜಿಕ ದೃಷ್ಟಿಕೋನವನ್ನು ಕಿತ್ತುಹಾಕಿದವರು ವಿನೇಶ್. ವಿನೇಶ್ ಮತ್ತು ಹರಿಯಾಣದ ಎಲ್ಲಾ ತಲೆಮಾರಿನ ಕುಸ್ತಿಪಟುಗಳು ಮಾಡಿರುವುದು ಇದನ್ನೇ.
ಪ್ರಣಿತಿ ಶಿಂದೆ, ಕಂಗನಾ ರಣಾವತ್; ಲೋಕಸಭೆಗೆ ಹೊಸ ಪ್ರವೇಶ
ಮಹಾರಾಷ್ಟ್ರದ ಸೋಲಾಪುರವನ್ನು ಪ್ರತಿನಿಧಿಸುವ ಪ್ರಣಿತಿ ಶಿಂದೆ 2024ರಲ್ಲಿಯೇ ಲೋಕಸಭೆಗೆ ಪ್ರವೇಶ ಪಡೆದವರು. ಮೂರು ಬಾರಿ ಕಾಂಗ್ರೆಸ್ ಶಾಸಕಿಯಾಗಿದ್ದ ಪ್ರಣಿತಿ ತನ್ನ ಭಾಷಣದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಾಲಿಶ ಹೇಳಿಕೆಗಳನ್ನು ಟೀಕಿಸಿದವರು. ಇತ್ತ ಬಿಜೆಪಿ ಟಿಕೆಟ್‌ನಿಂದ ಲೋಕಸಭೆಗೆ ಹೊಸದಾಗಿ ಪ್ರವೇಶಿಸಿದ ನಟಿ ಕಂಗನಾ ರಣಾವತ್ ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಳ್ಳುವುದರಲ್ಲೇ ಸುದ್ದಿಯಾಗುತ್ತಿದ್ದಾರೆ. ಈ ನಡುವೆ ಹಲವು ವರ್ಷಗಳಿಂದ ರಾಜಕೀಯ ಜೀವನದಲ್ಲಿರುವ ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ, ಮೊದಲಾದವರನ್ನು ಮರೆಯುವಂತಿಲ್ಲ.
ಅದಾನಿ ನಿದ್ದೆಗೆಡಿಸಿದ ಮಹುವಾ ಮೊಯಿತ್ರಾ
ಸದ್ಯ ಹಿಂಡನ್‌ಬರ್ಗ್ ವರದಿ ವಿಚಾರದಲ್ಲಿ ಗೌತಮ್ ಅದಾನಿ, ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ನಿದ್ದೆಗೆಡಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ 2024ರಲ್ಲಿ ರಾಜಕೀಯದಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ. 2019ರಲ್ಲೂ ತಾನು ಸಂಸದೆಯಾಗಿದ್ದಾಗ ಕೇಂದ್ರದ ವಿರುದ್ಧ ಪ್ರಬಲ ಭಾಷಣ ಮಾಡಿದ್ದರು. ಬಳಿಕ ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧ ಪ್ರಶ್ನೆಗಾಗಿ ಹಣ ಪಡೆದ ಆರೋಪ ಮಾಡಿದ್ದರು. ಇಂದಿಗೂ ಆ ಪ್ರಕರಣದ ತನಿಖೆ ನಡೆಯುತ್ತಿದೆ. ಅದು ಇರಲಿ.
ಆದರೆ 2024ರಲ್ಲಿ ಸಂಸದೆಯಾದ ಬಳಿಕ ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಮಾಡಿದ ಭಾಷಣ ಭಾರೀ ವೈರಲ್ ಆಗಿದೆ. ಅದರಲ್ಲೂ ಅಂಕಿಅಂಶ ಸಹಿತವಾಗಿ ಮಹುವಾ ಮಾಡುವ ಭಾಷಣಕ್ಕೆ ಬಿಜೆಪಿ ನಾಯಕರು ಉತ್ತರಿಸಲಾಗದೆ ತಡಕಾಡುವುದೂ ನಡೆದಿದೆ. ಮಹುವಾ ತಮಗೆ ಕುತ್ತು ಎಂದು ಬಿಜೆಪಿಗೆ ತಿಳಿದ ಬಳಿಕ ಅವರ ಮೇಲೆ ಪ್ರಶ್ನೆಗಾಗಿ ಹಣ ಪಡೆದ ದೂರು ದಾಖಲಿಸಲಾಗಿದೆ ಎಂಬ ಆರೋಪವೂ ಇದೆ.
ಷೇರು ಮಾರುಕಟ್ಟೆಯಲ್ಲಿ ಭಾರೀ ವಂಚನೆ ಮಾಡಿದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ, ಈ ವಂಚನೆಯಲ್ಲಿ ಜೊತೆಯಾದ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧವಾಗಿ ನಿಂತವರು ಮಹುವಾ. ಅದಾನಿ ವಿರುದ್ಧ ಧ್ವನಿ ಎತ್ತಿದ ಪ್ರಬಲ ವಿಪಕ್ಷ ನಾಯಕರುಗಳಲ್ಲಿ ಮಹುವಾ ಕೂಡಾ ಒಬ್ಬರು. ಅದರಲ್ಲೂ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಗಿರುವ ನಂಟನ್ನು ಸದನದಲ್ಲಿ ಪ್ರತಿ ಬಾರಿಯೂ ನಿರ್ಭೀತಿಯಿಂದ ಬೊಟ್ಟು ಮಾಡಿದವರು ಮಹುವಾ ಮೊಯಿತ್ರಾ. ಸೆಬಿ ಅಧ್ಯಕ್ಷೆ ಮಾಧವಿ ಬುಚ್ ವಿರುದ್ಧ ಲೋಕಪಾಲಕ್ಕೆ ದೂರು ನೀಡಿದ್ದು ಸದ್ಯ ವಿಚಾರಣೆ ನಡೆಯುತ್ತಿದೆ. ಅದಾನಿ ವಿರುದ್ಧ ಪ್ರಕರಣಗಳು ಕಾಲಕ್ರಮೇಣ ಮುಚ್ಚಿ ಹೋಗುತ್ತಿರುವಂತೆ ತನ್ನ ವಿರುದ್ಧದ ಆರೋಪವೂ ಮರೆಯಾಗಲಿದೆ ಎಂಬ ಕುರುಡು ನಂಬಿಕೆ ಹೊಂದಿದ್ದ ಸೆಬಿ ಅಧ್ಯಕ್ಷೆ ತಲೆ ಮೇಲೆ ಕೈ ಇಡುವಂತೆ ಮಾಡಿದ್ದು ಮಹುವಾ ಮೊಯಿತ್ರಾ. (ಆದರೆ ಬಿಜೆಪಿಯ ರಾಜಕೀಯದಾಟದಲ್ಲಿ ಈ ಪ್ರಕರಣವೂ ಮುಚ್ಚಿ ಹೋಗಬಹುದು)
ರಾಜಕೀಯ ನಾಯಕರೆಂದರೆ ಪುರುಷರನ್ನೇ ಬಿಂಬಿಸುವ ಈ ಸಮಾಜದಲ್ಲಿ ತಮ್ಮ ರಾಜಕೀಯ ಜ್ಞಾನದಿಂದಲೇ ಮುನ್ನಲೆಗೆ ಬಂದವರು ಈ ಮೂವರು ಮಹಿಳಾ ರಾಜಕಾರಣಿಗಳು. ಪುರುಷರ ಮುಂದೆ ಎಂದಿಗೂ ತಲೆಬಾಗಿ ನಡೆದವರಲ್ಲ, ತಪ್ಪಿದ್ದಾಗ ಧ್ವನಿ ಅಡಗಿಸಿ ಕೂತವರಲ್ಲ. ಮುಂದಿನ ಐದು ವರ್ಷವೂ ಪ್ರಬಲ ನಾಯಕಿಯರಾಗಿಯೇ ಉಳಿಯುವ, ಬೆಳೆಯುವ, ರಾಜಕೀಯದಲ್ಲಿ ಮಹತ್ವದ ಬದಲಾವಣೆ ತರುವ ನಿರೀಕ್ಷೆ ಇವರ ಮೇಲಿದೆ.
ಇನ್ನು ಕರ್ನಾಟಕದಿಂದ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಿ ಮೊದಲ ಸ್ಪರ್ಧೆಯಲ್ಲಿಯೇ ಗೆದ್ದು ಲೋಕಸಭೆ ಪ್ರವೇಶಿಸಿದ ಪ್ರಿಯಾಂಕಾ ಎಸ್ ಜಾರಕಿಹೊಳಿ (ಸಚಿವ ಸತೀಶ್ ಜಾರಕಿಹೊಳಿ ಪುತ್ರಿ), ಡಾ. ಪ್ರಭಾ ಮಲ್ಲಿಕಾರ್ಜುನ (ಸಚಿವ ಮಲ್ಲಿಕಾರ್ಜುನ ಅವರ ಪತ್ನಿ) ಇಬ್ಬರೂ ಕಾಂಗ್ರೆಸ್‌ನ ಬಲಿಷ್ಠ ರಾಜಕೀಯ ಕುಟುಂಬದ ಮಹಿಳೆಯರು. ಇಬ್ಬರೂ ಸುಶಿಕ್ಷಿತರು. ಸ್ವತಃ ವೈದ್ಯೆಯಾಗಿರುವ ಪ್ರಭಾ ಲೋಕಸಭೆಯ ತಮ್ಮ ಮೊದಲ ಭಾಷಣದಲ್ಲಿಯೇ ಆರೋಗ್ಯ ಕ್ಷೇತ್ರದ ಕೊರತೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು.
ಒಟ್ಟಿನಲ್ಲಿ ಸುಶಿಕ್ಷಿತ ಮಹಿಳೆಯರು ವಿಧಾನಸಭೆ ಮತ್ತು ಲೋಕಸಭೆಯಂತಹ ನೀತಿ ನಿರೂಪಣೆಯ ಜಾಗಗಳಲ್ಲಿ ಇರಬೇಕು ಎಂಬ ಆಶಯ ಕಾರ್ಯರೂಪಕ್ಕೆ ಬರುತ್ತಿರುವುದು ಶುಭಸೂಚಕ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.