ದಲಿತಾದಿ ಶೂದ್ರರ ಮಕ್ಕಳ ಶಿಕ್ಷಣಕ್ಕಾಗಿ ದುಡಿದ ಸಾವಿತ್ರಮ್ಮನವರ ಹೋರಾಟ ಒಂದು ಕಡೆಯಾದರೆ, ಅವಕಾಶ ವಂಚಿತ ವರ್ಗವನ್ನು ಶಿಕ್ಷಣದಿಂದಲೇ ದೂರತಳ್ಳುವ ಹೊಸ ಶಿಕ್ಷಣ ನೀತಿಯ ಕಾಲಘಟ್ಟಕ್ಕೆ ನಾವು ಬಂದು ತಲುಪಿದ್ದೇವೆ. ಈ ಹೊತ್ತಿನಲ್ಲಿ, ಚರಿತ್ರೆಯನ್ನು ಚಲನಶೀಲ ಸಮಾಜದತ್ತ ಕೊಂಡೊಯ್ದ ಫುಲೆ ದಂಪತಿಯ ಬದುಕು ನಮಗೆ ಸ್ಫೂರ್ತಿಯಾಗಬೇಕಿದೆ.
ಫುಲೆ ದಂಪತಿಯ ಕುರಿತು ಯೋಚಿಸಿದಾಗಲೆಲ್ಲ ಒಂದು ರೀತಿಯ ಭಾವುಕತೆ ಆವರಿಸುತ್ತದೆ. ನೊಂದ ಹೆಣ್ಣುಮಕ್ಕಳು, ಅಸಹಾಯಕ ಅಸ್ಪೃಶ್ಯರ ನೋವಿಗೆ ಶಿಕ್ಷಣವೇ ಮದ್ದು ಎಂಬುದನ್ನು ಅರಿತು, ಅದಕ್ಕಾಗಿ ತಮ್ಮ ಇಡೀ ಜೀವನವನ್ನು ಸವೆಸಿದವರು ಫುಲೆ ದಂಪತಿ. ಜೋತಿಬಾ- ಸಾವಿತ್ರಿಬಾಯಿ ಫುಲೆಯವರು ಒಬ್ಬೊರಿಗೊಬ್ಬರು ಹೃದಯ ಮತ್ತು ಮೆದುಳಾಗಿ ಸಮಾಜಕ್ಕಾಗಿ ದುಡಿದವರು. ಬುದ್ಧಿ ಮತ್ತು ಭಾವ ಸಂಗಮವಾಗಿ ಜೋತಿಬಾ ದಂಪತಿ ಚರಿತ್ರೆ ಚಿತ್ರಿತವಾಗಿದೆ.
ಇಂದು ಅಕ್ಷರದ್ವ ಸಾವಿತ್ರಮ್ಮನ ಜನುಮ ದಿನ. ಜನವರಿ 3, 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ಖಂಡಾಲಾ ತಾಲ್ಲೂಕಿನ ನಾಲಗಾಂವದಲ್ಲಿ ಖಂಡೋಜಿ ನೆವಶೆ ಪಾಟೀಲರ ಪುತ್ರಿಯಾಗಿ ಜನಿಸಿದ ಸಾವಿತ್ರಿಬಾಯಿಯವರಿಗೆ 9ನೇ ವಯಸ್ಸಿನಲ್ಲಿಯೇ ಮದುವೆ ಮಾಡಲಾಯಿತು. ಆ ತಾಯಿಯ ಕೈ ಹಿಡಿದ ಜೋತಿಬಾರಿಗೆ ಆಗ 13 ವರ್ಷ ವಯಸ್ಸು. ತನ್ನಂತೆಯೇ ತನ್ನ ಪತ್ನಿಯೂ ಅಕ್ಷರ ಕಲಿಯಬೇಕೆಂಬ ಉತ್ಕಟ ಪ್ರೀತಿಯನ್ನು ಮೆರೆದ ಜೋತಿಬಾ ಅವರೇ ಸಾವಿತ್ರಮ್ಮನ ಮೊದಲ ಗುರು. ಇಂಗ್ಲಿಷ್ ಶಿಕ್ಷಣದ ಮೂಲಕ ವಿಚಾರವಂತಿಕೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ ಜೋತಿಬಾ, ತಾವು ವಿವಾಹವಾಗಿ ಮಾರನೇ ವರ್ಷವೇ ಅಂದರೆ 1841ನೇ ಇಸವಿಯಲ್ಲಿ ಸಾವಿತ್ರಮ್ಮನಿಗೆ ಅಕ್ಷರ ಕಲಿಕೆ ಆರಂಭಿಸಿದರು. ತಾನೂ ಓದುತ್ತಾ, ತನ್ನ ಮಡದಿಯನ್ನೂ ಶಿಕ್ಷಿತರನ್ನಾಗಿಸಿದ ಧೀಮಂತ ವ್ಯಕ್ತಿ ಜೋತಿಬಾ ಫುಲೆ.
17ನೇ ವಯಸ್ಸಿಗೆ ಶಿಕ್ಷಣ ತರಬೇತಿ ಮುಗಿಸಿ, ಹೆಣ್ಣುಮಕ್ಕಳಿಗೆ, ಅಸ್ಪೃಶ್ಯರಿಗೆ ಅಕ್ಷರ ಕಲಿಸಲು ಹೊರಟ ಈ ಮಹಾ ತಾಯಿ ನಿಂದನೆಗಳನ್ನು ಎದುರಿಸಬೇಕಾಯಿತು. ಸಂಪ್ರದಾಯವಾದಿಗಳು ಕೊಂಕು ನುಡಿದರು. ಕಿಡಿಗೇಡಿಗಳು ಮರೆಯಲ್ಲಿ ನಿಂತು ಸಗಣಿ, ಕಲ್ಲುಗಳನ್ನು ತೂರಿದರು. ಶಾಲೆಗೆ ಹೋಗುವಾಗಲೆಲ್ಲ ಮತ್ತೊಂದು ಸೀರೆಯನ್ನು ಕೊಂಡೊಯ್ಯುತ್ತಿದ್ದ ಸಾವಿತ್ರಿಬಾಯಿ, ಸಗಣಿ ಮೆತ್ತಿದ ಬಟ್ಟೆಯನ್ನು ಬದಲಿಸಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಿದ್ದರು.
ತಮ್ಮ ಗುರಿ, ದೂರದೃಷ್ಟಿಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿದ್ದ ಜೋತಿಬಾ ದಂಪತಿ ಒಂದರ ಹಿಂದೆ ಒಂದು ಶಾಲೆಗಳನ್ನು ತೆರೆದರು. ಹೆಣ್ಣುಮಕ್ಕಳಿಗಾಗಿ ‘ನೇಟಿವ್ ಫೀಮೇಲ್ ಸ್ಕೂಲ್- ಪುಣೆ’, ಅಸ್ಪೃಶ್ಯ ಸಮುದಾಯದ ಮಕ್ಕಳಿಗಾಗಿ ‘ಸೊಸೈಟಿ ಫಾರ್ ಪ್ರಮೋಟಿಂಗ್ ಎಜುಕೇಷನ್ ಆಫ್ ಮಹಾರ್ಸ್ ಅಂಡ್ ಮಾಂಗ್ಸ್’ ಆರಂಭಿಸಿದರು. ಕುಟುಂಬ ನಿರ್ವಹಣೆಗಾಗಿ ಜೋತಿಬಾ ಅವರು ಮಿಷನರಿ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ ದುಡಿದರೆ, ಸಾವಿತ್ರಮ್ಮನವರು ಜೋತಿಬಾ ಸ್ಥಾಪಿತ ಶಾಲೆಗಳಲ್ಲಿ ಉಚಿತವಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇವರ ಶಾಲೆಗಳಲ್ಲಿ ಕಲಿತ 237 ಹೆಣ್ಣುಮಕ್ಕಳು 1853ರಲ್ಲಿ ಪುಣೆಯಲ್ಲಿ ಪರೀಕ್ಷೆ ಬರೆಯಲು ಹೋದಾಗ ಸಾವಿರಾರು ಜನರು ಕುತೂಹಲಕ್ಕಾಗಿ ನೆರೆದಿದ್ದರಂತೆ. 1856ರ ಹೊತ್ತಿಗೆ ಅಸ್ಪೃಶ್ಯ ಸಮುದಾಯದ 258 ಮಕ್ಕಳು ಇವರ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರು.
ಫುಲೆಯವರ ಶಾಲೆಗಳಲ್ಲಿ ಕಲಿತ ಹೆಣ್ಣು ಮಕ್ಕಳು ಜೊಳ್ಳು ಶಿಕ್ಷಣವನ್ನೇನೂ ಪಡೆಯಲಿಲ್ಲ. ಈ ಸಮಾಜದಲ್ಲಿನ ಅಸಮಾನತೆಯನ್ನು ಪ್ರಶ್ನಿಸುವ ವಿದ್ವತ್ತನ್ನು ಗಳಿಸಿಕೊಂಡರು. ಇಲ್ಲಿ ಓದುತ್ತಿದ್ದ 14 ವರ್ಷದ ಮುಕ್ತಾಬಾಯಿ ಎಂಬ ಹೆಣ್ಣುಮಗಳು ಅಸ್ಪೃಶ್ಯರ ನೋವಿನ ಕುರಿತು ಬರೆಯುತ್ತಾ, ”ವೇದಗಳು ಬರೀ ಬ್ರಾಹ್ಮಣರಿಗಾದರೆ ಅವು ನಮಗಲ್ಲ, ವೇದಗಳು ಬರೀ ಬ್ರಾಹ್ಮಣರಿಗಾದರೆ ನಮಗೆ ಪುಸ್ತಕಗಳಿಲ್ಲ. ಅವರು ಹೇಳುವಂತೆ ವೇದಗಳನ್ನು ನೋಡುವುದರಿಂದಲೇ ನಮಗೆ ಪಾಪ ಸುತ್ತಿಕೊಳ್ಳುತ್ತದೆಯಾದ್ದರಿಂದ ಬೈಬಲು, ಕುರಾನಿನಂತೆ ನಮಗೆ ಯಾವುದೇ ಧರ್ಮಗ್ರಂಥವಿಲ್ಲ. ಓ ದೇವರೇ ಹಾಗಾದರೆ ಹೇಳು, ಯಾವುದೇ ಪುಸ್ತಕವಿಲ್ಲದ ನಮ್ಮದು ಯಾವ ಧರ್ಮ?” ಎಂದು ಪ್ರಶ್ನಿಸುತ್ತಾಳೆ. ಫುಲೆ ದಂಪತಿ ಕಲಿಸಿದ ವೈಚಾರಿಕತೆ ಎಂಥಹದ್ದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಕವಯತ್ರಿಯೂ ಆಗಿದ್ದ ಸಾವಿತ್ರಮ್ಮ, ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕವಿತೆಗಳನ್ನು ಬರೆದರು. ತಮ್ಮ ಜೀವಿತಾವಧಿಯಲ್ಲಿ ಎರಡು ಕವನ ಸಂಕಲನಗಳನ್ನೂ ಪ್ರಕಟಿಸಿದರು. ”ಶಿಕ್ಷಿತರಾಗಬೇಕು, ಇಂಗ್ಲಿಷ್ ಕಲಿಕೆಗೆ ಒತ್ತು ನೀಡಬೇಕು” ಎಂಬ ಆಶಯವನ್ನು ಇವರ ‘ಕಬ್ಯಾ ಫುಲೆ’ ಕವನ ಸಂಕಲದ ಕವಿತೆಗಳು ಢಾಳಾಗಿ ವ್ಯಕ್ತಪಡಿಸುತ್ತವೆ. ಜನಸಾಮಾನ್ಯರಿಗಾಗಿ ಬರೆದ ಈ ಜಾಗೃತಿ ಬರಹಗಳಲ್ಲಿ ಬಂಡಾಯದ ಗುಣವೇ ಪ್ರಧಾನ. ಮತ್ತೊಂದು ಕವನ ಸಂಕಲನವಾದ ‘ಬವನ್ ಕಾಶಿ ಸುಬೋಧ ರತ್ನಾಕರ್’ನಲ್ಲಿ ಜೋತಿಬಾರ ಜೀವನ ಚರಿತ್ರೆಯನ್ನು ಕವ್ಯಾತ್ಮಕವಾಗಿ ಪ್ರಕಟಿಸಿದ್ದಾರೆ ಸಾವಿತ್ರಮ್ಮ.
ಆ ಕಾಲಘಟ್ಟದಲ್ಲಿ ವಿಧವೆಯರ ಬದುಕು ದುರಂತಮಯವಾಗಿತ್ತು. ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಗಂಡಸರ ದೌರ್ಜನ್ಯ ಮತ್ತು ಆಮಿಷಗಳಿಗೆ ಒಳಗಾಗಿ ಗರ್ಭ ಧರಿಸುತ್ತಿದ್ದರು. ಅಂತಹ ಹೆಣ್ಣುಮಕ್ಕಳು ವಿಷಪೂರಿತ ಔಷಧಗಳನ್ನೆಲ್ಲ ಸೇವಿಸಿ, ಗರ್ಭಪಾತಕ್ಕೆ ಯತ್ನಿಸಿ ತೊಂದರೆಗೆ ಒಳಗಾಗುತ್ತಿದ್ದರು. ಗರ್ಭ ಧರಿಸಿದ ಬಾಲಕಿಯರಿಗೆ ತಲೆ ಬೋಳಿಸಿ, ಶಿಕ್ಷೆ ನೀಡುವ ಅಮಾನವೀಯ ವ್ಯವಸ್ಥೆ ಜಾರಿಯಲ್ಲಿತ್ತು. ಇದನ್ನು ಕಂಡು ನೊಂದ ಫುಲೆ ದಂಪತಿ, ‘ಬಾಲಹತ್ಯಾ ಪ್ರತಿಬಂಧಕ್ ಗೃಹಾ’ ತೆರೆದು ಗರ್ಭಿಣಿ ವಿಧವೆಯರಿಗೆ ಆಶ್ರಯ ನೀಡಿದರು.
ಸಾಮಾಜಿಕ ಬಿರುಗಾಳಿ ಮಹಾರಾಷ್ಟ್ರದ ನೆಲದಲ್ಲಿ ಬೀಸತೊಡಗಿತ್ತು. ದಲಿತಾದಿ ಶೂದ್ರರಿಗೆ ಜಾಗೃತಿ ಮೂಡಿಸುವ ಕೆಲಸ ಆರಂಭವಾಗಿದ್ದವು. ವೈದಿಕಶಾಹಿ ವ್ಯವಸ್ಥೆಯಿಂದ ನರಳುತ್ತಿರುವ ಸಮಾಜದಲ್ಲಿ ವಿವೇಚನೆಯನ್ನು ಮೂಡಿಸಲು 1873ರಲ್ಲಿ ಸತ್ಯಶೋಧಕ ಸಮಾಜ ಆರಂಭವಾಯಿತು. ಫುಲೆಯವರ ಕ್ರಾಂತಿಕಾರಕ ಆಶಯಗಳು ಈ ಸಂಸ್ಥೆಯಿಂದ ಹೊರಹೊಮ್ಮಿದವು. ಸರಳ ವಿವಾಹ ಸಂಹಿತೆಯನ್ನು ಜ್ಯೋತಿ ಬಾ ರೂಪಿಸಿದರು. ಸಮಾನತೆಯನ್ನು ಅಳವಡಿಸಿಕೊಂಡು, ಪುರೋಹಿತಶಾಹಿಗಳ ಮೌಢ್ಯದಿಂದ ಹೊರಬಂದು ಬದುಕಬೇಕೆಂದು ನವ ವಿವಾಹಿತರಿಗೆ ಬೋಧಿಸಿದರು.
ಜೋತಿಬಾ ಫುಲೆ ಅವರು 1887ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದಾಗ ಸಾವಿತ್ರಮ್ಮನವರು ಹಲವಾರು ಸವಾಲುಗಳನ್ನು ಎದುರಿಸಿದರು. ತಮ್ಮ ದಾರಿಯ ಕುರಿತು ಸ್ಪಷ್ಟನೆಯನ್ನು ಹೊಂದಿದ್ದ ಸಾವಿತ್ರಮ್ಮ, ಈ ಕಷ್ಟಕಾಲದಲ್ಲೂ ಎದೆಗುಂದದೆ ಶಾಲೆ, ಸತ್ಯಶೋಧಕ ಸಮಾಜ, ಮಕ್ಕಳ ಶಿಕ್ಷಣ ಎಲ್ಲವನ್ನೂ ನಿಭಾಯಿಸಿದ್ದರು. ಇದೆಲ್ಲದರ ನಡುವೆ 1890ರಲ್ಲಿ ಜೋತಿಬಾ ಇಹಲೋಕ ತ್ಯಜಿಸಿದರು.
ಇದನ್ನೂ ಓದಿರಿ: ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದ ಮೇಲೇಕೆ ಆರೆಸ್ಸೆಸ್‌ನಿಂದ ವ್ಯವಸ್ಥಿತ ದಾಳಿ?
ಜೋತಿಬಾ ದಂಪತಿಗೆ ಮಕ್ಕಳಿರಲಿಲ್ಲ. ತಮ್ಮ ಆಶ್ರಯದಲ್ಲಿದ್ದ ವಿಧವೆಯೊಬ್ಬರ ಮಗನನ್ನು ದತ್ತು ತೆಗೆದುಕೊಂಡು ಸಾಕಿದರು. ಅವರ ಒಡಲಲ್ಲಿ ಮಕ್ಕಳಾಗದಿದ್ದರೂ ಅವರ ಹೃದಯವಂತಿಕೆ, ವಿಶಾಲ ತಾಯ್ತತನದ ಫಲವಾಗಿ ಅಸಂಖ್ಯಾತ ದಲಿತ, ಅಸಹಾಯಕ ಹೆಣ್ಣುಮಕ್ಕಳು ಬದುಕಿನಲ್ಲಿ ಬೆಳಕು ಕಂಡರು. ನೊಂದ ಜನರಿಗೆ ಆಶ್ರಯದಾತರಾದರು. ಲಕ್ಷ್ಮಣ ಕರಡಿ ಜಾಯ ಎಂಬ ವಿದ್ಯಾರ್ಥಿ ಸಾವಿತ್ರಮ್ಮನವರ ಬಗ್ಗೆ ಬರೆದ ನೆನಪುಗಳಲ್ಲಿ, ”ಅವರಷ್ಟು ಪ್ರೇಮಮಯಿಯೂ, ಕರುಣಾಮಯಿಯೂ ಆದ ಇನ್ನೊಬ್ಬ ಮಹಿಳೆಯನ್ನು ನಾನು ನೋಡಿಲ್ಲ. ನಮ್ಮ ತಾಯಿಗಿಂತ ಹೆಚ್ಚು ಅವರು ನಮ್ಮನ್ನು ಪ್ರೀತಿಸಿದರು” ಎಂದು ಉಲ್ಲೇಖಿಸುತ್ತಾರೆ. ಇಂತಹ ಮಹಾ ತಾಯಿ, ಪ್ಲೇಗ್ ರೋಗಿಗಳ ಆರೈಕೆ ಮಾಡುತ್ತಾ, ತಾನೂ ಪ್ಲೇಗ್ ರೋಗಕ್ಕೆ ತುತ್ತಾಗಿ ಮಾರ್ಚ್ 10, 1897ರಲ್ಲಿ ಕೊನೆಯುಸಿರೆಳೆದರು.
ಭಾರತದ ಮೊದಲ ಶಿಕ್ಷಕಿ ಎಂದೇ ಗುರುತಿಸಲಾಗಿರುವ ಈ ಮಹಾ ಚೇತನದ ಜನ್ಮದಿನವನ್ನು ಶಾಲೆಗಳಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಆದರೆ ಫುಲೆ ದಂಪತಿಯ ಕೊಡುಗೆ, ಹೋರಾಟವನ್ನು ಪಠ್ಯಪುಸ್ತಕದಿಂದಲೇ ಕಿತ್ತು ಬಿಸಾಡುವ ಕೆಲಸವನ್ನು ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದನ್ನು ಕಂಡಿದ್ದೇವೆ. ದಲಿತಾದಿ ಶೂದ್ರರ ಮಕ್ಕಳ ಶಿಕ್ಷಣಕ್ಕಾಗಿ ದುಡಿದ ಸಾವಿತ್ರಮ್ಮನವರ ಹೋರಾಟ ಒಂದು ಕಡೆಯಾದರೆ, ಅವಕಾಶ ವಂಚಿತ ವರ್ಗವನ್ನು ಶಿಕ್ಷಣದಿಂದಲೇ ದೂರತಳ್ಳುವ ಹೊಸ ಶಿಕ್ಷಣ ನೀತಿಯ ಕಾಲಘಟ್ಟಕ್ಕೆ ನಾವು ಬಂದು ತಲುಪಿದ್ದೇವೆ. ಒಂದು ರೀತಿಯ ಹಿಮ್ಮುಖ ಚಲನೆಗೆ ಒಳಗಾಗಿರುವ ಹೊತ್ತಿನಲ್ಲಿ, ಚರಿತ್ರೆಯನ್ನು ಚಲನಶೀಲ ಸಮಾಜದತ್ತ ಕೊಂಡೊಯ್ದ ಫುಲೆ ದಂಪತಿಯ ಬದುಕು ನಮಗೆ ಸ್ಫೂರ್ತಿಯಾಗಬೇಕಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.